ಕಾಪು: ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಎಸ್. ಶೆಟ್ಟಿ ಮತ್ತು ಕಾಪು ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಎನ್. ಬಂಗೇರ ಅವರ ಪದಗ್ರಹಣ ಸಮಾರಂಭವು ಮೇ 15 ರಂದು ಕಾಪು ರಾಜೀವ ಭವನದಲ್ಲಿ ನಡೆಯಿತು.
ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಶಾಂತಲತಾ ಶೆಟ್ಟಿ, ಅಶ್ವಿನಿ ಎನ್. ಬಂಗೇರ ಅವರಿಗೆ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ಆಸ್ತಿ. ಮಹಿಳೆಯರು ಪಕ್ಷದಲ್ಲಿ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಳ್ಳುವುದರ ಮೂಲಕವಾಗಿ ಪಕ್ಷ ಸಂಘಟನೆಗೂ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಅವಕಾಶ ಮತ್ತು ಪ್ರಾತಿನಿಧ್ಯವನ್ನು ಒದಗಿಸುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಮಹತ್ವದ್ದಾಗಿದೆ. ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರ ದೂರದೃಷ್ಟಿತ್ವದ ಯೋಚನೆಯ ಫಲವಾಗಿ ಮಹಿಳೆಯರು ಸಮಾಜದ ಮುಂದೆ ನಿಲ್ಲುವಂತಾಗಿದ್ದು, ಅವರಿಂದಾಗಿಯೇ ಮಹಿಳಾ ಸಬಲೀಕರಣವಾಗಿದೆ ಎಂದರು.
Related Articles
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬಿ ಅವರನ್ನು ಮುಂಚೂಣಿಗೆ ತರುವಲ್ಲಿ ಕಾಂಗ್ರೆಸ್ ಪಕ್ಷದ ಪ್ರಯತ್ನ ಬಹಳಷ್ಟಿದೆ. ಮೀಸಲಾತಿಯ ಮೂಲಕವಾಗಿಯೂ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿರುವ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಶಕ್ತಿಶಾಲಿಯಾಗಿ ಕಟ್ಟುವಲ್ಲಿ ಮಹಿಳೆಯರು ಮುಂದೆ ಬರಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮಾತನಾಡಿ, ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಮಹಿಳೆಯರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಮಹಿಳೆಯರ ಪಾತ್ರವೇ ಪ್ರಮುಖವಾಗಲಿದೆ ಎಂದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಮಹಿಳಾ ಕಾಂಗ್ರೆಸಗ ರಾಜ್ಯ ನಾಯಕಿಯರಾದ ಶೈಲಜಾ, ವೀಣಾ ಭಟ್, ಸುಜಾತ, ಪಕ್ಷದ ಮುಖಂಡರಾದ ಶಿವಾಜಿ ಎಸ್. ಸುವರ್ಣ, ಸರಸು ಡಿ. ಬಂಗೇರ, ಶೇಖರ ಹೆಜಮಾಡಿ, ಮಹಮ್ಮದ್ ಸಾಧಿಕ್, ರತನ್ ಶೆಟ್ಟಿ ಶಿರ್ವ, ನವೀನ್ ಶೆಟ್ಟಿ, ಶರ್ಪುದ್ದೀನ್ ಶೇಖ್ , ರಮೀಜ್ ಹುಸೇನ್ ಮೊದಲಾದವರು ಉಪಸ್ಥಿತರಿದ್ದರು.
ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಸುಚರಿತಾ ಸ್ವಾಗತಿಸಿದರು. ಕಾಪು ಪುರಸಭೆ ಮಾಜಿ ಅಧ್ಯಕ್ಷೆ ಸೌಮ್ಯ ಎಸ್. ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಎನ್. ಬಂಗೇರ ವಂದಿಸಿದರು.