Advertisement

ಕಾಪು: ಪ್ರವಾಸಿ ಮಿತ್ರ, ನೆರೆ ನಿರ್ವಹಣೆ ಸಿಬಂದಿ ಪಹರೆಗೆ ಕೊನೆಗೂ ಅಸ್ತು

04:30 PM Jun 17, 2024 | Team Udayavani |

ಕಾಪು: ಉಡುಪಿ ಜಿಲ್ಲೆಯ ಸಮುದ್ರ ತೀರ ಮತ್ತು ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿ ಮಿತ್ರರು ಮತ್ತು ಪ್ರವಾಹ ಮುನ್ನೆಚ್ಚರಿಕೆ ಕರ್ತವ್ಯ ನಿರ್ವಹಣೆಗಾಗಿ ನಿಯೋಜನೆಗೊಳ್ಳುತ್ತಿದ್ದ ಸಿಬಂದಿ ನೇಮಕಾತಿಗೆ ಸರಕಾರ ಕೊನೆಗೂ ಅಸ್ತು ಎಂದಿದೆ. ಜಿಲ್ಲೆಯ ಪಡುಬಿದ್ರಿ, ಕಾಪು, ಮಲ್ಪೆ, ತ್ರಾಸಿ, ಮರವಂತೆ, ಸೋಮೇಶ್ವರ ಬೀಚ್‌ಗಳಲ್ಲಿ ಗೃಹರಕ್ಷಕದಳದಿಂದ ಎರವಲು ಸೇವೆ ರೂಪದಲ್ಲಿ 10 ಮಂದಿ ಪ್ರವಾಸಿ ಮಿತ್ರರು, 20 ಮಂದಿ ನೆರೆ ಕೆಲಸ ನಿರ್ವಹಣೆ ಗೆಂದು ನೇಮಕಗೊಳ್ಳುತ್ತಿದ್ದರು.

Advertisement

ಆದರೆ ಈ ಬಾರಿ ಸಿಬಂದಿ ನೇಮಕ ವಿಳಂಬವಾಗಿದ್ದ ಪರಿಣಾಮ ಬೀಚ್‌ ನಿರ್ವಹಣೆಯ ಸಿಬಂದಿಗಳೇ ಈ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿಕೊಳ್ಳುವಂತಾಗಿತ್ತು. ಸಮುದ್ರ ತೀರಕ್ಕೆ ಆಗಮಿಸುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿ ಕೇಂದ್ರಗಳಲ್ಲಿ ವರ್ಷ ಪೂರ್ತಿ ಪ್ರವಾಸಿ ಮಿತ್ರರ ಸೇವೆ ಲಭ್ಯವಿರುತ್ತಿತ್ತು.ಅದರ ಜತೆಗೆ ಮಳೆಗಾಲದ ಮೂರು ತಿಂಗಳು ತುರ್ತು ಸಂದರ್ಭಗಳಲ್ಲಿ ನೆರೆ ಕೆಲಸ ಸಿಬಂದಿ ಪಹರೆಯೂ ಲಭ್ಯವಾಗುತ್ತಿತ್ತು. ಇದರಿಂದಾಗಿ ಪ್ರವಾಸಿಗರು ತಮ್ಮ ರಕ್ಷಣೆಯ ಬಗ್ಗೆ ತಾವೇ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಅನಿರ್ವಾಯತೆಗೆ ಸಿಲುಕಿದ್ದರು.

ಜಿಲ್ಲಾಡಳಿತದಿಂದ ಗೃಹರಕ್ಷಕ ದಳ ಕೇಂದ್ರ ಕಚೇರಿಗೆ ಪತ್ರ :
ಪ್ರವಾಸಿ ಸ್ಥಳಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬಂದಿಯನ್ನು ಒದಗಿಸುವಂತೆ ಉಡುಪಿ ಜಿಲ್ಲಾಡಳಿತವು ಗೃಹರಕ್ಷಕದಳ ಕೇಂದ್ರ ಕಚೇರಿಗೆ ಪತ್ರ ಬರೆದಿತ್ತು. ಈ ಬಗ್ಗೆ ಜಿಲ್ಲಾಡಳಿತದ ಮನವಿಯಂತೆ ಸಿಬಂದಿಯನ್ನು ಜೋಡಿಸಲು ಅವಕಾಶ ಮಾಡಿಕೊಡುವಂತೆ ಉಡುಪಿ ಜಿಲ್ಲಾ ಗೃಹರಕ್ಷಕದಳ ಕಚೇರಿಯಿಂದಲೂ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

30 ಮಂದಿ ಸಿಬಂದಿಗಳ ನೇಮಕಕ್ಕೆ ಅಸ್ತು: ಜಿಲ್ಲಾಡಳಿತ ಮತ್ತು ಗೃಹರಕ್ಷಕದಳ ಉಡುಪಿ ಜಿಲ್ಲಾ ಕಚೇರಿಯ ಮನವಿಯಂತೆ
30 ಮಂದಿ ಸಿಬಂದಿಯನ್ನು ಒದಗಿಸುವಂತೆ ಕೇಂದ್ರ ಕಚೇರಿಯಿಂದ ಪತ್ರ ಬಂದಿದೆ. ಅದರಂತೆ ಸಿಬಂದಿಗಳನ್ನು ಒದಗಿಸುವಂತೆ ಘಟಕಗಳಿಗೆ ಪತ್ರ ಬರೆಯಲಾಗಿದ್ದು ಘಟಕಗಳು ಒದಗಿಸುವ ಸಿಬಂದಿಗಳ ಲಭ್ಯತೆ ನೋಡಿಕೊಂಡು ಒಂದೆರಡು ದಿನಗಳಲ್ಲಿ ಗೃಹರಕ್ಷಕರನ್ನು ಕರ್ತವ್ಯಕ್ಕೆ ನೇಮಿಸುವ ಸಾಧ್ಯತೆಗಳಿವೆ.

ನೇಮಕಾತಿ ವಿಳಂಬಕ್ಕೆ ಕಾರಣಗಳೇನು?:
ಪ್ರವಾಸಿ ಮಿತ್ರ ಮತ್ತು ನೆರೆ ಕೆಲಸ ಕರ್ತವ್ಯಕ್ಕೆ ಗೃಹರಕ್ಷಕದಳದ ಗೃಹರಕ್ಷಕರನ್ನು ಎರವಲು ಸೇವೆ ರೂಪದಲ್ಲಿ ಪಡೆಯಲಾಗುತ್ತದೆ. ಪ್ರವಾಸಿ ಮಿತ್ರರ ನೇಮಕ ಮತ್ತು ನೇಮಕ ಗೊಂಡವರಿಗೆ ವೇತನ ನೀಡುವ ಜವಾಬ್ದಾರಿ ಪ್ರವಾಸೋದ್ಯಮ ಇಲಾಖೆಯದ್ದಾಗಿದ್ದರೆ, ನೆರೆ ಕೆಲಸಕ್ಕೆ ನಿಯೋಜನೆಗೊಳ್ಳುವ ಸಿಬಂದಿ ವೇತನವನ್ನು ಗೃಹರಕ್ಷಕ ದಳವೇ ಭರಿಸುತ್ತದೆ.

Advertisement

ಈ ಬಾರಿ ಪ್ರವಾಸಿ ಮಿತ್ರರ ಬೇಡಿಕೆಗೆ ಮಂಜೂರಾತಿ ದೊರಕದೇ ಇರುವುದರಿಂದ ಮತ್ತು ನೆರೆ ಕೆಲಸಕ್ಕೆ ಸಂಬಂಧಿಸಿ ಸಿಬಂದಿ
ನೇಮಕ ವಿಚಾರದಲ್ಲಿ ಕೆಲವೊಂದು ತಾಂತ್ರಿಕ ಗೊಂದಲಗಳಿಂದಾಗಿ ಗೃಹರಕ್ಷಕದಳದ ಸಿಬಂದಿಯನ್ನು ಒದಗಿಸಲು ಕೇಂದ್ರ ಕಚೇರಿಯಿಂದ ಮಂಜೂರಾತಿ ಸಿಗದೇ ಇರುವುದರಿಂದ ಸಿಬಂದಿ ನೇಮಕಾತಿ ವಿಳಂಬವಾಗಿತ್ತು ಎನ್ನಲಾಗುತ್ತಿದೆ.

ಪ್ರಸ್ತಾವನೆ ಸಲ್ಲಿಕೆ
ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಅಗತ್ಯವಿರುವ ಪ್ರವಾಸಿ ಮಿತ್ರರ ನೇಮಕಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸರಕಾರದಿಂದ ಇನ್ನೂ ಮಂಜೂರಾತಿ ಸಿಕ್ಕಿಲ್ಲ. ಸರಕಾರದ ಮಂಜೂರಾತಿ ಸಿಕ್ಕಿದ ಕೂಡಲೇ ಪ್ರವಾಸಿ ಮಿತ್ರರ ನೇಮಕ ಮಾಡಿಕೊಂಡು ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು.
*ಕುಮಾರ್‌ ಸಿ.ಯು.,
ಸಹಾಯಕ ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ

30 ಮಂದಿಗೆ ಬೇಡಿಕೆ ಸಲ್ಲಿಕೆ
ನೆರೆ ಕೆಲಸಕ್ಕೆ ಸಂಬಂಧಪಟ್ಟು 30 ಮಂದಿ ಸಿಬಂದಿ ಅಗತ್ಯವಿದ್ದು ಈ ಗೃಹರಕ್ಷಕದಳಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಕಚೇರಿಯಿಂದ ಉಡುಪಿ ಕಮಾಂಡೆಂಟ್‌ ಕಚೇರಿಗೆ ಸಿಬಂದಿಯನ್ನು ಒದಗಿಸಲು ಸೂಚನೆ ಬಂದಿರುವುದಾಗಿ ಮಾಹಿತಿ ಲಭಿಸಿದೆ. ಕಮಾಂಡೆಂಟ್‌ ಕಚೇರಿಯಲ್ಲಿ ಒದಗಿಸುವ ಸಿಬಂದಿ ಲಭ್ಯತೆಯನ್ನು ನೋಡಿಕೊಂಡು, ಅವರನ್ನು ಜಿಲ್ಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗುವುದು.
*ಡಾ| ವಿದ್ಯಾ ಕುಮಾರಿ,
ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

ಡಿಸಿ ಕಚೇರಿಗೆ ಮಾಹಿತಿ
ಪ್ರವಾಸೋದ್ಯಮ ಇಲಾಖೆಯ ಬೇಡಿಕೆಗೆ ಅನುಗುಣವಾಗಿ ಪ್ರವಾಸಿ ಮಿತ್ರ ಸೇವೆಗೆ ಸಿಬಂದಿಯನ್ನು ಒದಗಿಸಲಾಗುತ್ತದೆ. ಹಿಂದಿನಂತೆ ಈ ಬಾರಿಯೂ ಪ್ರವಾಸಿ ಮಿತ್ರ ಸೇವೆಗಾಗಿ ಸಿಬಂದಿಗೆ ಬೇಡಿಕೆಯಿಟ್ಟಿದ್ದು ಸರಕಾರದಿಂದ ಮಂಜೂರಾತಿ ಸಿಕ್ಕಿದ ಕೂಡಲೇ ಸಿಬಂದಿಯನ್ನು ಒದಗಿಸಲಾಗುವುದು. ಪ್ರವಾಹ ನಿಯಂತ್ರಕರ ಕೆಲಸಕ್ಕೆ ಜಿಲ್ಲಾಧಿಕಾರಿಗಳ ಬೇಡಿಕೆಯಂತೆ 30 ಮಂದಿಯನ್ನು ಒದಗಿಸುವಂತೆ ಗೃಹರಕ್ಷಕದಳ ಕೇಂದ್ರ ಕಚೇರಿಯಿಂದ ಸೂಚನೆ ಬಂದಿದೆ. ಸಿಬಂದಿಗಳ ಲಭ್ಯತೆ ಬಗ್ಗೆ ವಿವಿಧ ಘಟಕಗಳಿಗೆ ಪತ್ರ ಬರೆಯಲಾಗುವುದು. ಸಿಬಂದಿಯನ್ನು ಒದಗಿಸಿದ ಕೂಡಲೇ ಕರ್ತವ್ಯಕ್ಕೆ ನಿಯೋಜಿಸಿ, ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಲಾಗುವುದು.
*ಎಸ್‌.ಟಿ. ಸಿದ್ದಲಿಂಗಪ್ಪ,
ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು
ಸಮಾದೇಷ್ಟರು, ಗೃಹರಕ್ಷಕದಳ ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next