Advertisement
ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶ ಘೋಷಣೆಯ ಸರಕಾರದ ನಿರ್ಧಾರವನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಮಂಗಳವಾರ ಪ್ರಕಟಿಸಿರುವುದು, ಸಹಜವಾಗಿಯೇ ಕಪ್ಪತಗುಡ್ಡದ ತಪ್ಪಲಲ್ಲಿ ಸಂತಸ ಕುಣಿದಾಡುವಂತೆ ಮಾಡಿದೆ. ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ| ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟ ಗೆಲುವಿನ ನಗೆ ಬೀರಿದೆ.
Related Articles
Advertisement
ಅಂತಾರಾಷ್ಟ್ರೀಯ ಜಲತಜ್ಞ ಡಾ| ರಾಜೇಂದ್ರ ಸಿಂಗ್, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‌ರಂತಹ ಘಟಾನುಘಟಿ ಹೋರಾಟಗಾರರು, ತಜ್ಞರು ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನೈತಿಕ ಬಲ ಹೆಚ್ಚುವಂತೆ ಮಾಡಿದ್ದರು. ಪೋಸ್ಕೋ ವಿಚಾರ ರಾಜಕೀಕರಣಗೊಂಡಿತ್ತು.
ಅಂದಿನ ವಿಧಾನಸಭೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಜನ ಹೋರಾಟಕ್ಕೆ ತಮ್ಮ ಧ್ವನಿ ಸೇರಿಸಿದ್ದರು. ಅಂತಿಮವಾಗಿ ಪೋಸ್ಕೋ ಕಂಪೆನಿಗೆ ನೀಡಿದ್ದ ಅನುಮತಿಯನ್ನು ಬಿಜೆಪಿ ಸರಕಾರ ಹಿಂಪಡೆದಿದ್ದರಿಂದ ಕಪ್ಪತಗುಡ್ಡದ ಮೇಲೆ ಕವಿದ ಕಾರ್ಮೋಡ ಕರಗಿತ್ತು.
ರಾಜ್ಯದಲ್ಲಿ ಸರಕಾರ ಬದಲಾಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಅನಂತರದಲ್ಲಿ ಪೋಸ್ಕೋ ವಿರುದ್ಧ ಹೋರಾಟದಲ್ಲಿ ಪರೋಕ್ಷ ಬೆಂಬಲ ನೀಡಿದ್ದ ಬಲ್ಡೋಟಾ ಕಂಪೆನಿ ತನ್ನ ಅಸಲಿ ಮುಖ ದರ್ಶನ ಮಾಡಿಸಿತ್ತು. ಪೋಸ್ಕೋಗಿಂತ ನೂರು ಪಟ್ಟು ಹೆಚ್ಚಿನ ಲಾಬಿಯೊಂದಿಗೆ ಚಿನ್ನದ ಗಣಿಗಾರಿಕೆಗೆ ಮುಂದಾದಾಗ ಡಾ| ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಜನ ಮತ್ತೂಂದು ಹೋರಾಟದ ಕಹಳೆ ಮೊಳಗಿತ್ತು.
ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯ ಎಸ್.ಎಸ್.ಹಿರೇಮಠ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಹಿತಿ ದೇವನೂರು ಮಹದೇವ ಸೇರಿದಂತೆ ಅನೇಕ ಹೋರಾಟಗಾರರು ಜನರ ಕೂಗಿಗೆ ಧ್ವನಿಯಾದರು. ಸರಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಹೋರಾಟ ತೀವ್ರಗೊಂಡಿತ್ತಲ್ಲದೆ, ಕಂಪೆನಿಯ ಕಾನೂನು ಸಮರದ ಹುನ್ನಾರವನ್ನು ವಿಫಲಗೊಳಿಸಲಾಗಿತ್ತು.
ಕರ್ನಾಟಕ ವನ್ಯಜೀವಿ ಮಂಡಳಿ ಸಭೆಯಲ್ಲಿ ಸಂರಕ್ಷಿತ ಪ್ರದೇಶಕ್ಕೆ ಬಹುತೇಕರ ಒಪ್ಪಿಗೆ ಇದ್ದಾಗಲೂ ಅಂತಿಮ ನಿರ್ಣಯವನ್ನು ಮುಖ್ಯಮಂತ್ರಿಗೆ ನೀಡಲಾಗಿತ್ತು. ಸರಕಾರ ಘೋಷಣೆಗೆ ವಿಳಂಬ ತೋರಿದ್ದರಿಂದ ಹೋರಾಟಗಾರರು ಗದಗ ಜಿಲ್ಲೆಯ ಸುಮಾರು 100 ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ರಥಯಾತ್ರೆ ಕೈಗೊಂಡಿದ್ದರು. ಇನ್ನು 15 ದಿನದೊಳಗೆ ಸಂರಕ್ಷಿತ ಪ್ರದೇಶ ಘೋಷಣೆ ಆಗದಿದ್ದರೆ ಗದಗನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದರು.
ಕಪ್ಪತಗುಡ್ಡ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆಯಾದರೂ, ಮುಂದೆಂದು ಗಣಿ ಕಂಪೆನಿಗಳು ಕಪ್ಪಗುಡ್ಡದ ಕಡೆ ಕಣ್ಣೆತ್ತದಂತೆ ಹಾಗೂ ಇನ್ನಾವುದೋ ಲೋಪ ತೋರಿಸಿ ಮತ್ತೂಮ್ಮೆ ಕಬಳಿಕೆಗೆ ಮುಂದಾಗದಂತೆ ಎಲ್ಲ ರೀತಿ ಮುಂಜಾಗ್ರತಾ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕೆಂಬುದು ಜನರ ಒತ್ತಾಯವಾಗಿದೆ.
* ಅಮರೇಗೌಡ ಗೋನವಾರ