ನವದೆಹಲಿ:ಲೇಖಕಿ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿಯವರಿಗೆ ಈಗ ವಿಚಿತ್ರ ಸಮಸ್ಯೆಯೊಂದು ತಲೆದೋರಿದೆಯಂತೆ! ಯುನೈಟೆಡ್ ಕಿಂಗ್‌ಡಂಗೆ ಹೋದಾಗ ತಾವು ಪ್ರಧಾನಮಂತ್ರಿಯ ಅತ್ತೆ ಎಂದರೂ ಯಾರೂ ಅದನ್ನು ನಂಬುತ್ತಿಲ್ವಂತೆ!
ಹೌದು, ಹೀಗೆಂದು ಸ್ವತಃ ಸುಧಾ ಮೂರ್ತಿಯವರೇ ಹೇಳಿಕೊಂಡಿದ್ದಾರೆ. ದಿ ಕಪಿಲ್ ಶರ್ಮಾ ಶೋದಲ್ಲಿ ಮಾತನಾಡುವ ವೇಳೆ ಸುಧಾ ಮೂರ್ತಿಯವರು ತಮ್ಮ ಲಂಡನ್ ಭೇಟಿಯ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. “ನಾನು ಯುಕೆಗೆ ಹೋದಾಗ ವಲಸೆ ಅಧಿಕಾರಿಗಳು, “ಲಂಡನ್‌ನಲ್ಲಿ ಎಲ್ಲಿ ವಾಸವಿರುತ್ತೀರಿ? ವಿಳಾಸ ಬರೆಯಿರಿ’ ಎಂದು ಹೇಳಿದರು.
ನನ್ನೊಂದಿಗೆ ನನ್ನ ಅಕ್ಕ ಕೂಡ ಇದ್ದರು. ನಾನು ಆ ಅರ್ಜಿಯಲ್ಲಿ “10 ಡೌನಿಂಗ್ ಸ್ಟ್ರೀಟ್'(ಪ್ರಧಾನಿ ವಾಸವಿರುವ ಸ್ಥಳ) ಎಂದು ಬರೆದೆ. ಅದನ್ನು ನೋಡಿದ ಅಧಿಕಾರಿ ನನ್ನನ್ನು ದಿಟ್ಟಿಸಿ ನೋಡಿ, “ನೀವೇನು ಜೋಕ್ ಮಾಡುತ್ತಿದ್ದೀರಾ’ ಎಂದು ಪ್ರಶ್ನಿಸಿದರು. ಅದಕ್ಕೆ ನಾನು, ಇಲ್ಲ ಸತ್ಯ ವನ್ನೇ ಹೇಳುತ್ತಿದ್ದೇನೆ ಎಂದು ಉತ್ತರಿಸಿದೆ. ಸರಳ ವಾದ, 72 ವರ್ಷದ ನನ್ನನ್ನು ಯುಕೆ ಪ್ರಧಾನ ಮಂತ್ರಿಯ ಅತ್ತೆ ಎಂಬುದನ್ನು ನಂಬಲು ಯಾರೂ ಸಿದ್ಧರಿರಲಿಲ್ಲ’ ಎಂದು ಸುಧಾ ಮೂರ್ತಿ ಹೇಳಿದ್ದಾರೆ.