Advertisement
ಮಲಪ್ರಭಾ ನದಿಯಿಂದ ಇತ್ತೀಚೆಗೆ ಉಂಟಾಗಿದ್ದ ಭೀಕರ ಪ್ರವಾಹದಿಂದ ಅಕ್ಷರಶಃ ನರಗುಂದ ತಾಲೂಕಿನ ಕಪ್ಪಲಿ ಗ್ರಾಮ ಜಲದಿಗ್ಬಂಧನಕ್ಕೊಳಗಾಗಿತ್ತು. ನವಿಲುತೀರ್ಥ ಜಲಾಶಯದಿಂದ ಸುಮಾರು 1.10 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ನದಿ ದಂಡೆ ಯಲ್ಲಿರುವ ಕಪ್ಪಲಿ ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಸ್ಥಳೀಯ ಗ್ರಾಮಸ್ಥರಿಗೆ ಜೀವ ಉಳಿದರೆ ಸಾಕು ಎನ್ನುವಂತಾಗಿತ್ತು. ಹೇಗೋ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿರುವ ನೂರಾರು ಜನರು, ಇದೀಗ ತಮ್ಮ ಗ್ರಾಮವನ್ನು ಸ್ಥಳಾಂತರಿಸುವಂತೆ ಒತ್ತಾಯಿಸುತ್ತಿದ್ದಾರೆ.
Related Articles
Advertisement
ಗ್ರಾಮದ ಹಲವು ಮನೆಗಳು ಸಂಪೂರ್ಣ ಕುಸಿದಿದ್ದು, ನೆರೆ-ಹೊರೆಯರು ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಬೆರಳೆಣಿಕೆಯಷ್ಟು ಕುಟುಂಬಗಳು ಹೊಸ ಪ್ಲಾಟ್‌ನ ಸಂಬಂಧಿಕರ ಮನೆಗಳಲ್ಲೇ ಮುಂದುವರಿಯುತ್ತಿದ್ದಾರೆ. ಮತ್ತೂಬ್ಬರ ಮನೆಗಳಲ್ಲಿ ಆಶ್ರಯ ಸಿಕ್ಕಿದ್ದರೂ ಅದು ಅಡುಗೆ, ಊಟ ಹಾಗೂ ಒಬ್ಬರಿಗೆ ಮಾತ್ರ ಇರಲು ಜಾಗ ಸಾಲುತ್ತದೆ. ಇನ್ನುಳಿದವರು ಗ್ರಾಮದ ದೇವಸ್ಥಾನಗಳಲ್ಲೇ ರಾತ್ರಿ ಕಳೆಯುವಂತಾಗಿದೆ. ತಣ್ಣನೆಯ ಗಾಳಿ ಬೀಸುವುದರಿಂದ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹುಚ್ಚಪ್ಪ ಬ. ಚಿಕ್ಕನರಗುಂದ ತಮ್ಮ ಅಳಲು ತೋಡಿಕೊಂಡರು.
ಇನ್ನೂ ಕೆಲವರು ಭಾಗಶಃ ಬಿದ್ದಿರುವ ಮನೆಗಳಲ್ಲೇ ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿದ್ದಾರೆ. ಇದು ಇಲ್ಲಿನ ನೆರೆ ಸಂತ್ರಸ್ತರ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿ.
2007, 2009 ಹಾಗೂ ಅದಕ್ಕಿಂತ ಮುಂಚೆಯೂ ಸೇರಿದಂತೆ ನಾಲ್ಕು ಬಾರಿ ಗ್ರಾಮ ಪ್ರವಾಹಕ್ಕೆ ತುತ್ತಾಗಿದೆ. ಈ ಪೈಕಿ 2009 ಹಾಗೂ 2019ರ ಪ್ರವಾಹ ಭೀಕರವಾಗಿದೆ. 2009 ರಲ್ಲಿ ಭಾರೀ ಮಳೆ, ಪ್ರವಾಹ ಬಂದಾಗ ಕಪ್ಪಲಿ ಗ್ರಾಮವನ್ನು ಮುಳುಗಡೆ ಗ್ರಾಮವೆಂದು ಘೋಷಿಸಿ, ನವ ಗ್ರಾಮವನ್ನಾಗಿಸುತ್ತೇವೆ. ಹೊಸ ಮನೆ ಕಟ್ಟಿಕೊಡುತ್ತೇವೆ ಎಂದು ಅಧಿಕಾರಿಗಳ ಮಾತಿಗೆ ಸಮ್ಮತಿಸದೇ ನಾವು ತಪ್ಪು ಮಾಡಿದೆವು. ಯಾವತ್ತಾದರೂ ಈ ಗ್ರಾಮಕ್ಕೆ ಜಲ ಕಂಟಕ ತಪ್ಪಿದ್ದಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.
ಈ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಬೇಕು. ಗ್ರಾಮವನ್ನು ಆದಷ್ಟು ಬೇಗ ಸ್ಥಳಾಂತರಿಸಬೇಕು. ಮಕ್ಕಳಿಗೆ ಶಾಲೆ, ಆಸ್ಪತ್ರೆಯನ್ನು ಒಳಗೊಂಡಿರುವಂತೆ ಸುಸಜ್ಜಿತ ನವಗ್ರಾಮವನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಒಕ್ಕೋರಲಿನಿಂದ ಒತ್ತಾಯಿಸುತ್ತಿದ್ದಾರೆ.
•ವೀರೇಂದ್ರ ನಾಗಲದಿನ್ನಿ