ನವದೆಹಲಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್ ನ ಮಾಲೀಕರು ತಮ್ಮ ಹೆಸರನ್ನು ಹೋಟೆಲ್ ಹೊರಗಡೆ ನಮೂದಿಸಬೇಕು ಎಂಬ ಉತ್ತರಪ್ರದೇಶ ಸರ್ಕಾರದ ವಿವಾದಿತ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ (ಜುಲೈ 22) ತಡೆ ನೀಡಿದೆ.
ಕನ್ವರ್ ಯಾತ್ರೆಯ ಮಾರ್ಗದಲ್ಲಿ ಊಟೋಪಚಾರ ನೀಡುವ ಹೋಟೆಲ್ ಮಾಲೀಕರು ಹಾಗೂ ಉದ್ಯೋಗಿಗಳ ಗುರುತನ್ನು ಹೊರಗಡೆ ನಮೂದಿಸಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು.
ಈ ಆದೇಶಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಉತ್ತರಪ್ರದೇಶ ಸರ್ಕಾರದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದಾಖಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಜಸ್ಟೀಸ್ ಹೃಷಿಕೇಶ್ ರಾಯ್ ಮತ್ತು ಜಸ್ಟೀಸ್ ಎಸ್ ವಿಎನ್ ಭಟ್ಟಿ ಅವರು ಉತ್ತರಪ್ರದೇಶ, ಉತ್ತರಾಖಂಡ್ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜು.26ಕ್ಕೆ ಮುಂದೂಡಿದೆ.
ಯಾವುದೇ ಕಾನೂನಿನ ಅಧಿಕಾರ ಇಲ್ಲದೇ ಉತ್ತರಪ್ರದೇಶ ಸರ್ಕಾರ ಈ ಆದೇಶವನ್ನು ಹೊರಡಿಸಿದ್ದು, ಇದೊಂದು ಕಣ್ಣಿಗೆ ಮಣ್ಣೆರಚುವ ಆದೇಶವಾಗಿದೆ ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಿಚಾರಣೆ ವೇಳೆ ವಾದ ಮಂಡಿಸಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ಹೋಟೆಲ್ ಗೆ ಹೋಗೋದು ಅಲ್ಲಿನ ಮೆನುವಿಗಾಗಿ ಹೊರತು, ಯಾರು ಮಾಲೀಕ, ಯಾರು ಕ್ಲೀನ್ ಮಾಡುತ್ತಾನೆ ಎಂದು ವಿಚಾರಿಸಲು ಅಲ್ಲ. ಈ ಆದೇಶದ ಮುಖ್ಯ ಉದ್ದೇಶ ವ್ಯಕ್ತಿಯ ಧರ್ಮದ ಗುರುತು ಪತ್ತೆ ಹಚ್ಚುವುದಾಗಿದೆ ಎಂದು ಸಿಂಘ್ವಿ ವಾದಿಸಿದ್ದರು.
ಇದನ್ನೂ ಓದಿ:Krishnam Pranaya Sakhi; ಸದ್ದು ಮಾಡುತ್ತಿದೆ ಗಣೇಶ್ ಚಿತ್ರದ ರೊಮ್ಯಾಂಟಿಕ್ ಹಾಡು