ಬೆಂಗಳೂರು: ನಾವು ಯಾವುದಕ್ಕೂ ಯಾರನ್ನೂ ನೋಯಿಸಿದವರಲ್ಲ. ಸ್ಮಾರಕ ಮಾಡುದಾದ್ರೆ ಮೈಸೂರಿನಲ್ಲಿ ಮಾಡಿ. ಇಲ್ಲ ಅಭಿಮಾನ್ ಸ್ಟುಡಿಯೋದಲ್ಲೇ ಮಾಡಿ. ನಮ್ಮದೇನೂ ವಿರೋಧವಿಲ್ಲ. ಆದರೆ ಯಾವುದೋ ಕಾರಣ ಕೊಟ್ಟು ಸುಮ್ಮನಿರಬಾರದು ಎಂದು ಭಾರತಿ ವಿಷ್ಣುವರ್ಧನ್ ಅಸಮಾಧಾನ ಹೊರಹಾಕಿದ್ದಾರೆ.
ವಿಷ್ಣುವರ್ಧನ್ ಸ್ಮಾರಕ ವಿಳಂಬವಾಗುತ್ತಿರುವ ಬಗ್ಗೆ ಬುಧವಾರ ಸಂಜೆ ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ ಹಾಗೂ ಅಳಿಯ ಅನಿರುದ್ಧ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ಹಂಚಿಕೊಂಡರು.
ವಿಷ್ಣುವರ್ಧನ್ ಗೆ ಸ್ಮಾರಕವೇ ಬೇಕಾಗಿಲ್ಲ. ನನ್ನ ಯಜಮಾನ ಎಲ್ಲಿ ಇದ್ರೂ ಎಲ್ಲರ ಹೃದಯದಲ್ಲೂ ಶಾಶ್ವತವಾಗಿ ಇರುತ್ತಾರೆ. ಅದು ಬಿಟ್ಟರೆ ನಾವು ಏನನ್ನೂ ಆಸೆ ಪಡುವವರಲ್ಲ. ಎಲ್ಲರ ಹೃದಯದಲ್ಲೂ ಸ್ಮಾರಕ ಇರೋದರಿಂದ ಅದಕ್ಕಿಂತ ದೊಡ್ಡ ಸ್ಮಾರಕ ಬೇಕಾಗಿಲ್ಲ. ಪ್ರೀತಿಗೆ ಪ್ರೀತಿ ಕೊಡಲು ಸಾಧ್ಯ. ಇದಕ್ಕಾಗಿಯೇ ನಾನು ಮೈಸೂರಿನಲ್ಲಿ ಸ್ಮಾರಕ ಮಾಡಲು ಮುಂದಾದೆ ಎಂದು ಹೇಳಿದರು.
ಅಭಿಮಾನ್ ಸ್ಟುಡಿಯೋದ ವಿಚಾರ ನ್ಯಾಯಾಲಯದಲ್ಲಿ ಇದೆ. ಅದು ಇತ್ಯರ್ಥ ಆಗುವುದು ಯಾವ ಕಾಲಕ್ಕೋ. ಇಲ್ಲಾ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕಾ ಅಲ್ಲೇ ಮಾಡಿ. ಅದನ್ನು ಬಿಟ್ಟು ಅನಾವಶ್ಯಕವಾಗಿ ಕಾಲ ಕಳೆಯಬೇಡಿ ಎಂದರು.
ಕಂಠೀರವ ಸ್ಟುಡಿಯೋ ಮಾತ್ರ ಪುಣ್ಯ ಭೂಮಿನಾ?ಹಾಗಾದರೆ ಈ ಜಾಗ ಏನಾಗಬೇಕು. ನಿಮಗೆ ಯಾವುದು ನ್ಯಾಯ ಅನ್ನಿಸುತ್ತೋ ಹಾಗೇ ಮಾಡಿ ಎಂದು ಮಾರ್ಮಿಕವಾಗಿ ನುಡಿದರು.
ನಮ್ಮನ್ನೇ ಯಾಕೆ ಟಾರ್ಗೆಟ್ ಮಾಡ್ತಾರೇ?
ಮೊದಲು ನಮ್ಮ ತಂದೆಯನ್ನು ಟಾರ್ಗೆಟ್ ಮಾಡುತ್ತಿದ್ದರು. ಈಗ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕ್ ಸರ್..ನಾವು ಒಂಬತ್ತು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವೆ. ಅಂಬರೀಷ್ ಅಂಕಲ್ ಸಮಾಧಿ ಮಾಡಲು ಸುಮಲತಾ ಅವರ ಬಳಿ ಕೇಳಿ ಕಂಠೀರವ ಸ್ಟುಡಿಯೋ ಜಾಗ ಆಯ್ಕೆ ಮಾಡಿದರು, ನಮಗೆ ಮಾತ್ರ ಯಾಕೆ ಎಲ್ಲಾ ಕಚೇರಿ ಸುತ್ತಿಸುತ್ತಿದ್ದಾರೆ ಎಂದು ವಿಷ್ಣು ಪುತ್ರಿ ಕೀರ್ತಿ ಆಕ್ರೋಶ ವ್ಯಕ್ತಪಡಿಸಿದರು.