ಬೆಂಗಳೂರು: ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 11 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ರಾಜ್ ಅಭಿಮಾನಿಗಳು 11ನೇ ಪುಣ್ಯತಿಥಿ ಸ್ಮರಣೆ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿದ ಡಾ.ಶಿವರಾಜ್ ಕುಮಾರ್, ಪುನೀತ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಕುಟುಂಬಸ್ಥರು ಡಾ.ರಾಜ್ ಸಮಾಧಿಗೆ ಪೂಜೆ ಸಲ್ಲಿಸಿದರು.
ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿ ಬಳಿ ಪೂಜೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ. ಸುಮಾರು 2000 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ನಾನಾ ಕಡೆಯಿಂದಲೂ ಸಾವಿರಾರು ಅಭಿಮಾನಿಗಳು ಡಾ.ರಾಜ್‌ಕುಮಾರ್ ಅವರ 11ನೇ ಪುಣ್ಯತಿಥಿ ಕಾರ್ಯಕ್ರಮಕ್ಕೆ ಆಗಮಿಸಿ, ಅವರ ಸ್ಮಾರಕ ಬಳಿ ಪೂಜೆ ನೆರವೇರಿಸುತ್ತಿದ್ದಾರೆ . ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯುತ್ತಿದೆ .
ವರನಟ ಡಾ.ರಾಜ್‌ಕುಮಾರ್ ಅವರು ಅಗಲಿ ಇಂದಿಗೆ 11 ವರ್ಷ. ಕನ್ನಡ ಚಿತ್ರರಂಗ ಹಿರಿಯಣ್ಣನನ್ನು ಕಳೆದುಕೊಂಡು ಅಕ್ಷರಶಃ ಬಡವಾಗಿದ್ದು ಸುಳ್ಳಲ್ಲ. ಅವರು ಜತೆಗಿಲ್ಲ ಎಂಬ ಕೊರಗು ಈಗಲೂ ಇದೆ. ಆದರೆ, ಕೋಟಿ ಅಭಿಮಾನಿಗಳ ಮನದಲ್ಲಂತೂ ಡಾ.ರಾಜ್‌ಕುಮಾರ್ ಅವರು ಅಚ್ಚಳಿಯದೇ ಉಳಿದಿದ್ದಾರೆ ಎಂಬುದಕ್ಕೆ ಅಭಿಮಾನಿಗಳ ಅಭಿಮಾನವೇ ಸಾಕ್ಷಿ. ಏಪ್ರಿಲ್ 12ಕ್ಕೆ (ಇಂದು) ಡಾ.ರಾಜ್‌ಕುಮಾರ್ ಅವರು ತೀರಿಕೊಂಡು 11 ವರ್ಷಗಳು ಕಳೆದಿವೆ.