2022ರಲ್ಲಿ ಇಡೀ ದೇಶವೇ ಸ್ಯಾಂಡಲ್‌ವುಡ್‌ನತ್ತ ತಿರುಗಿನೋಡುವಂತೆ ಮಾಡಿ, ಇತಿಹಾಸ ಸೃಷ್ಟಿಸಿದ ಕನ್ನಡದ ಹೆಮ್ಮೆಯ ಬ್ಲಾಕ್ ಬಸ್ಟರ್ ಸಿನಿಮಾ “ಕಾಂತಾರ’ ಇದೀಗ ಕನ್ನಡದ “ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ವರ್ಲ್ಡ್ ಪ್ರೀಮಿಯರ್ ಆಗಲಿದೆ. ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಕನ್ನಡಿಗರು ಹೊತ್ತು ಕೊಂಡಾಡಿದ ಹೆಮ್ಮೆಯ ಕಥೆ “ಕಾಂತಾರ’ ಜನವರಿ 15 ರಂದು ಸಂಜೆ 6 ಗಂಟೆಗೆ “ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ವರ್ಲ್ಡ್ ಪ್ರೀಮಿಯರ್ ಆಗಲಿದೆ.
ಕರ್ನಾಟಕದ ತುಳುನಾಡಿನ ಪ್ರಾಂತ್ಯದಲ್ಲಿ ನಡೆಯುವ ದೈವಾರಾಧನೆ, ಭೂತಕೋಲ, ಕಂಬಳ, ಕೋಳಿ ಅಂಕ, ಇತ್ಯಾದಿ ಸಂಭ್ರಮಗಳ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನು ಹೊಂದಿರುವ “ಕಾಂತಾರ’ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಜೋಡಿಯಾಗಿ ಅಭಿನಯಿಸಿದ್ದು, ಉಳಿದಂತೆ ದೀಪಕ್ ರೈ, ಗುರು ಸನಿಲ್, ಪ್ರಕಾಶ್ ತುಮಿನಾಡು, ರಂಜನ್, ಕಿಶೋರ್, ಅಚ್ಯುತ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ತನ್ನ ವಿಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿರುವ “ಸ್ಟಾರ್ ಸುವರ್ಣ’ ವಾಹಿನಿಯ “ಎಡೆಯೂರು ಶ್ರೀಸಿದ್ದಲಿಂಗೇಶ್ವರ’, “ಮನಸೆಲ್ಲಾ ನೀನೇ’, “ಕಥೆಯೊಂದು ಶುರುವಾಗಿದೆ’, “ಹೊಂಗನಸು’, “ಸುವರ್ಣ ಸೂಪರ್ ಸ್ಟಾರ್’ ಹೀಗೆ ಹಲವು ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈಗಾಗಲೇ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ “ಜೇಮ್ಸ್’, “ಲಕ್ಕಿಮ್ಯಾನ್’ ನಂತಹ ಸೂಪರ್ ಹಿಟ್ ಸಿನಿಮಾಗಳು “ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಿದ್ದು, ಸಾಲಿಗೆ ಇದೀಗ “ಕಾಂತಾರ’ ಎಂಬ ದಂತಕಥೆಯೊಂದು ಸೇರ್ಪಡೆಯಾಗಲಿದೆ. ಒಟ್ಟಾರೆ ಸಂಕ್ರಾಂತಿ ಹಬ್ಬದ ಮೂಡ್‌ನಲ್ಲಿರುವ ಕಿರುತೆರೆ ಪ್ರೇಕ್ಷಕರಿಗೆ ಈ ವಾರ “ಕಾಂತಾರ’ ಹಬ್ಬದ ವಿಶೇಷವಾಗಿ ವರ್ಲ್ಡ್ ಪ್ರೀಮಿಯರ್ ಆಗಲಿದೆ.