ಹೊಸದಿಲ್ಲಿ: ಕನ್ನಡಿಗರಿಗೆ ಖುಷಿ ನೀಡುವ ಸುದ್ದಿಯೊಂದನ್ನು ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನೀಡಿದೆ.
ರಿಷಭ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ “ಕಾಂತಾರ’ ಹಾಗೂ ಅನೂಪ್ ಭಂಡಾರಿ ನಿರ್ದೇಶನ, ಕಿಚ್ಚ ಸುದೀಪ್ ನಟನೆಯ”ವಿಕ್ರಾಂತ್ ರೋಣ’ ಸಿನೆಮಾಗಳು ಆಸ್ಕರ್ ನಾಮ ನಿರ್ದೇಶನದ “ಅರ್ಹತ ಪಟ್ಟಿ’ಗೆ ಸೇರ್ಪಡೆಗೊಂಡಿವೆ.
ಜ. 24ರಂದು ಆಸ್ಕರ್‌ಗೆ ಭಾರತದಿಂದ ಪ್ರವೇಶ ಪಡೆಯಲಿರುವ ಚಿತ್ರಗಳ ಅಂತಿಮ ಪಟ್ಟಿ ಬಿಡುಗಡೆ ಯಾಗಲಿದ್ದು, ಆ ಪಟ್ಟಿಯಲ್ಲೂ ಕನ್ನಡದ ಸಿನೆಮಾಗಳು ಇರಲಿ ಎಂಬ ನಿರೀಕ್ಷೆ ಕನ್ನಡಿಗರದ್ದು.
ಪಟ್ಟಿಯಲ್ಲಿ 301 ಸಿನೆಮಾಗಳು
ಪ್ರಸ್ತುತ ಕಾಂತಾರ, ವಿಕ್ರಾಂತ್ ರೋಣ, ಆರ್‌ಆರ್‌ಆರ್, ಗಂಗೂಬಾಯಿ ಕಥಿಯಾವಾಡಿ, ದಿ ಕಾಶ್ಮೀರ್ ಫೈಲ್ಸ್, ಛೆಲ್ಲೋ ಶೋ, ರಾಕೆಟ್ರಿ: ದಿ ನಂಬಿಯಾರ್ ಎಫೆಕ್ಟ್ ಸೇರಿದಂತೆ ಒಟ್ಟು 301 ಫೀಚರ್ ಸಿನೆಮಾಗಳು ನಾಮನಿರ್ದೇಶನಕ್ಕೆ ಅರ್ಹಗೊಳ್ಳಲಿರುವ ಚಿತ್ರಗಳ ಪಟ್ಟಿಗೆ ಸೇರಿವೆ.
Related Articles
ಇದೇ 17ರಂದು ಆಸ್ಕರ್‌ನ 9,579 ಸದಸ್ಯರು ವೋಟಿಂಗ್ ಮೂಲಕ ಆಸ್ಕರ್ ಚಿತ್ರ ಪ್ರಶಸ್ತಿಗಳಿಗೆ “ನಾಮನಿರ್ದೇಶನಗೊಳ್ಳಲಿರುವ ಚಿತ್ರ’ಗಳನ್ನು ಆಯ್ಕೆ ಮಾಡುತ್ತಾರೆ. ಜ. 24ರಂದು ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿರುವ ಚಿತ್ರಗಳ ಹೆಸರನ್ನು ಘೋಷಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಖುಷಿ ಹಂಚಿ ಕೊಂಡಿರುವ ಹೊಂಬಾಳೆ ಫಿಲಂಸ್ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ, “ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ವಿಭಾಗಗಳಲ್ಲಿ ಕಾಂತಾರ ಅರ್ಹತ ಪಟ್ಟಿಗೆ ಸೇರಿದೆ. ನಿಮ್ಮೆಲ್ಲರ ಬೆಂಬಲದೊಂದಿಗೆ ನಮ್ಮ ಮುಂದಿನ ಪಯಣ ವನ್ನು ಹಂಚಿಕೊಳ್ಳಲು ಬಯಸುತ್ತೇವೆ’ ಎಂದಿದೆ.
ಮಾ. 12ರಂದು ಲಾಸ್ ಏಂಜಲೀಸ್‌ನಲ್ಲಿ 95ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್ ಪ್ರಶಸ್ತಿ) ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಭಾರತದಿಂದ ಕೂಜಂಗಳ್, ಜಲ್ಲಿಕಟ್ಟು, ಗಲ್ಲಿ ಬಾಯ್, ವಿಲೇಜ್ ರಾಕ್‌ಸ್ಟಾರ್ಸ್, ನ್ಯೂಟನ್, ವಿಸಾರಣೈ ಸೇರಿದಂತೆ ಹಲವು ಸಿನೆಮಾಗಳು ನಾಮನಿರ್ದೇಶನಕ್ಕೆ ಸೆಣಸಿದ್ದವು. ಆದರೆ ಈವರೆಗೆ ಆಸ್ಕರ್ ಪ್ರಶಸ್ತಿಯ ಅಂತಿ ಮ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಮದರ್ ಇಂಡಿಯಾ, ಸಲಾಂ ಮುಂಬೈ ಮತ್ತು ಲಗಾನ್ ಚಿತ್ರಗಳು ಮಾತ್ರ.