ಸದ್ಯ “ಕಾಂತಾರ’ ಸಿನಿಮಾದ ಸದ್ದು ವಿದೇಶಗಳಲ್ಲೂ ಮುಂದುವರೆದಿದೆ. ಭಾರತದಲ್ಲಿ ಈಗಾಗಲೇ ಹಲವು ಭಾಷೆಗಳಲ್ಲಿ ಡಬ್ಬಿಂಗ್ ಆಗುವ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ “ಕಾಂತಾರ’ ಎಲ್ಲ ಭಾಷೆಗಳಲ್ಲೂ ಉತ್ತಮ ಕಲೆಕ್ಷನ್ ಮಾಡಿತ್ತು. ಇದೀಗ ಭಾರತದ ಭಾಷೆಗಳು ಮಾತ್ರವಲ್ಲದೆ, “ಕಾಂತಾರ’ ವಿದೇಶಿ ಭಾಷೆಗಳಿಗೂ ಡಬ್ಬಿಂಗ್ ಆಗುತ್ತಿದೆ.
ಹೌದು, ಸದ್ಯ “ಕಾಂತಾರ’ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ಬಿಂಗ್ ಆಗುತ್ತಿದೆ. ಅಂದಹಾಗೆ, ಇಂಥದ್ದೊಂದು ಸುದ್ದಿಯನ್ನು “ಕಾಂತಾರ’ ಸಿನಿಮಾದ ನಿರ್ಮಾಣ ಸಂಸ್ಥೆ “ಹೊಂಬಾಳೆ ಫಿಲಂಸ್’ ಖಚಿತಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ “ಹೊಂಬಾಳೆ ಫಿಲಂಸ್’, “ಈ ವಿಷಯ ತಿಳಿಸಲು ನಮಗೆ ಖುಷಿ ಎನಿಸುತ್ತಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು.
ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲಿ “ಕಾಂತಾರ’ ಚಿತ್ರವನ್ನು ಎಡಿಟ್ ಮಾಡಲಾಗುತ್ತಿದೆ’ ಎಂದು ಇಟಾಲಿಯನ್ ಭಾಷೆಯಲ್ಲಿ “ಹೊಂಬಾಳೆ ಫಿಲಂಸ್’ ಟ್ವೀಟ್ ಮಾಡಿದೆ. ಆರಂಭದಲ್ಲಿ “ಕಾಂತಾರ’ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಮೊದಲ ದಿನವೇ ಈ ಚಿತ್ರಕ್ಕೆ ಭರ್ಜರಿಪ್ರತಿಕ್ರಿಯೆ ಸಿಕ್ಕಿತು. ಹೀಗಾಗಿ ಪರಭಾಷೆ ಪ್ರೇಕ್ಷಕರು ಕೂಡ “ಕಾಂತಾರ’ ಕಡೆಗೆ ಆಸಕ್ತಿ ತೋರಿಸಿದ್ದರಿಂದ ಕೆಲ ದಿನಗಳಲ್ಲೇ ಸಿನಿಮಾವನ್ನು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಅಲ್ಲದೆ, ಓಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್ ವರ್ಷನ್ ಕೂಡ ರಿಲೀಸ್ ಆಗಿತ್ತು. ಈಗ “ಕಾಂತಾರ’ವನ್ನು ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಮಾಡಲಾಗುತ್ತಿರುವ ಸುದ್ದಿ ಹೊರಬಂದಿದೆ. ಇದರ ನಡುವೆಯೇ “ಕಾಂತಾರ’ ಸಿನಿಮಾವನ್ನು ಜಪಾನಿ ಭಾಷೆಯಲ್ಲೂ ರಿಲೀಸ್ ಮಾಡಿ ಎಂಬ ಬೇಡಿಕೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.