ಕಾನ್ಪುರ: ಅಂತಿಮ ಎಸೆತದವರೆಗೂ ರೋಚಕತೆಯಿಂದ ಸಾಗಿದ ಕಾನ್ಪುರ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಜಯದ ಅತ್ಯಂತ ಸನಿಹದವರೆಗೆ ಸಾಗಿದ್ದ ಟೀಂ ಇಂಡಿಯಾ ಕೊನೆಗೆ ಡ್ರಾಗೆ ಸಮಾಧಾನಪಡಬೇಕಾಯಿತು. ಕೊನೆಯಲ್ಲಿ ಕ್ರೀಸ್ ಕಚ್ಚಿ ನಿಂತ ರಚಿನ್ ರವೀಂದ್ರ ಮತ್ತು ಮಂದ ಬೆಳಕಿನ ಕಾರಣ ಭಾರತ ಸರಣಿಯಲ್ಲಿ ಮುನ್ನಡೆ ಸಾಧಿಸಲು ವಿಫಲವಾಯಿತು.
ಗೆಲುವಿಗೆ 284 ರನ್ ಗುರಿ ಪಡೆದಿದ್ದ ಕಿವೀಸ್ ದಿನದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು.
ನಾಲ್ಕು ರನ್ ಗೆ ಒಂದು ವಿಕೆಟ್ ಕಳೆದುಕೊಂಡಲ್ಲಿಂದ ಐದನೇ ದಿನದಾಟ ಆರಂಭಿಸಿದ ಲ್ಯಾಥಂ ಮತ್ತು ಸೋಮರ್ವಿಲ್ಲೆ ಮೊದಲ ಸೆಶನ್ ಪೂರ್ತಿ ಆಡಿದರು. 36 ರನ್ ಗಳಿಸಿದ್ದ ನೈಟ್ ವಾಚ್ ಮನ್ ಸೋಮರ್ವಿಲ್ಲೆ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಔಟಾದರು. ಟಾಮ್ ಲ್ಯಾಥಂ ಅವರು 52 ರನ್ ಗಳಿಸಿದ್ದ ವೇಳೆ ಅಶ್ವಿನ್ ಎಸೆತದಲ್ಲಿ ಬೌಲ್ಡಾದರು.
ನಂತರ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ದಾಳಿಗೆ ನಲುಗಿದ ಕಿವೀಸ್ ಸತತ ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ಕಿವೀಸ್ 89.2 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡಿತ್ತು. ಭಾರತದ ಗೆಲುವಿಗೆ ಕೇವಲ ಒಂದು ವಿಕೆಟ್ ಸಾಕಿತ್ತು. ಆದರೆ ಪಟ್ಟು ಹಿಡಿದು ನಿಂತ ರಚಿನ್ ರವೀಂದ್ರ ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿದರು. ಕೊನೆಯಲ್ಲಿ ಮಂದಬೆಳಕಿನ ಕಾರಣ 12 ನಿಮಿಷ ಬೇಗನೇ ಅಂತ್ಯ ಮಾಡಬೇಕಾಯಿತು.
ರಚಿನ್ ರವೀಂದ್ರ 91 ಎಸೆತಗಳಿಂದ 18 ರನ್ ಗಳಿಸದರು. ಭಾರತದ ಪರ ಜಡೇಜಾ ನಾಲ್ಕು ವಿಕೆಟ್ ಮತ್ತು ಅಶ್ವಿನ್ ಮೂರು ವಿಕೆಟ್ ಪಡೆದರು.