ಲಕ್ನೋ: ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತರ ಗೆಳೆತನ ಒಳ್ಳೆಯದಲ್ಲ. ಮೆಸೇಜ್ ಗಳಿಂದ ಶುರುವಾಗುವ ಸ್ನೇಹ ಮಾತುಗಳಿಂದ ಬೆಳೆದು ಮುಂದೆ ಪ್ರೀತಿ – ಪ್ರೇಮಕ್ಕೆ ತಿರುಗಿ ಕೊನೆಗೆ ಬೇರೆಲ್ಲೋ ಹೋಗಿ ಮುಗಿದು ಹೋಗುತ್ತದೆ.
ಈ ಮಾತಿಗೆ ತಕ್ಕ ಹಾಗಿನ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರ ಮೂಲದ ದೀಪೇಂದ್ರ ಸಿಂಗ್(20) ಎನ್ನುವ ಯುವಕನೊಬ್ಬ ಕಳೆದ ಕೆಲ ಸಮಯದಿಂದ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ಮೆಸೇಜ್ ಮಾಡುತ್ತಿದ್ದ. ಪರಿಚಯವಾದ ಮಹಿಳೆ ತನ್ನ ಪ್ರೊಫೈಲ್ ಪಿಕ್ಚರ್ ನಲ್ಲಿ ಅಂದವಾದ ಫೋಟೋವನ್ನು ಹಾಕಿದ್ದರು. ದೀಪೇಂದ್ರ ಈ ಫೋಟೋವನ್ನು ನೋಡಿ ಇದು ಆಕೆಯದೇ ಫೋಟೋವೆಂದು ಭಾವಿಸಿದ್ದಾನೆ.
ಸ್ನೇಹ ಬೆಳೆಸಿಕೊಂಡ ದೀಪೇಂದ್ರ ಪ್ರತಿನಿತ್ಯ ಮಹಿಳೆಯೊಂದಿಗೆ ಮಸೇಜ್ ಮಾಡುತ್ತಾ,ಪ್ರೀತಿಸಲು ಶುರು ಮಾಡಿದ್ದಾನೆ. ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದು, ದೀಪೇಂದ್ರನಿಗೆ ಪ್ರಿಯತಮೆಯನ್ನು ನೋಡುವ ಆಸೆಯಿಂದಾಗಿ, ಆಕೆಯನ್ನು ಭೇಟಿ ಆಗಲು ಹೇಳಿದ್ದಾನೆ.
ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಯುವತಿಯಂತೆ ಕಾಣಿಸಿಕೊಂಡಿದ್ದ ಮಹಿಳೆ ಹೆಚ್ಚು ವಯಸ್ಸಾದುದನ್ನು ನೋಡಿ ದೀಪೇಂದ್ರ ಆಘಾತಕ್ಕೊಳಗಾಗುತ್ತಾರೆ. ಈ ಬಗ್ಗೆ ಆಕೆಯನ್ನು ವಿಚಾರಿಸಿದಾಗ ಮಹಿಳೆ ತನಗೆ 45 ವರ್ಷ ಆಗಿದೆ ಎಂದು ಹೇಳಿದ್ದಾರೆ.
ಇದರಿಂದ ಕೋಪಗೊಂಡ ದೀಪೇಂದ್ರ ಮಹಿಳೆಯೊಂದಿಗೆ ವಾಗ್ವಾದ ನಡೆಸಿ ಆಕೆಯ ತಲೆಯನ್ನು ನೆಲಕ್ಕೆ ಬಡಿದು ಥಳಿಸಿ, ಆಕೆಯ ಮೊಬೈಲ್ ಕಿತ್ತುಕೊಂಡು ಅಲ್ಲಿಂದ ಪರಾರಿ ಆಗಿದ್ದಾನೆ.
ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ತನಗೆ ಥಳಿಸಿದ್ದು, ತಮ್ಮ ಮೊಬೈಲ್ ಫೋನ್ ಕದ್ದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಇದಾದ ಬಳಿಕ ಪೊಲೀಸರು ಆರೋಪಿ ದೀಪೇಂದ್ರನನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.