Advertisement

ಪೈಗಂಬರ್ ವಿರುದ್ಧ ಹೇಳಿಕೆ: ಕಾನ್ಪುರದಲ್ಲಿ ಎರಡು ಗುಂಪಿನ ನಡುವೆ ಗಲಭೆ; 18 ಮಂದಿ ಬಂಧನ

09:08 AM Jun 04, 2022 | Team Udayavani |

ಕಾನ್ಪುರ: ಉತ್ತರ ಪ್ರದೇಶದ ಬಿಜೆಪಿಯ ನಾಯಕಿ ನೂಪುರ್‌ ಶರ್ಮಾ ಅವರು ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಹೇಳಲಾಗಿದ್ದು ಈ ವಿಚಾರದ ಕಾರಣಕ್ಕೆ ಕಾನ್ಪುರದಲ್ಲಿ ಶುಕ್ರವಾರ ರಾತ್ರಿ ಗಲಭೆ ನಡೆದಿದೆ.

Advertisement

ಟಿವಿಯಲ್ಲಿ ಮೂಡಿಬಂದ ಚರ್ಚೆಯೊಂದರಲ್ಲಿ, ನೂಪುರ್‌ ಶರ್ಮಾರ ಹೇಳಿಕೆಯನ್ನು ಖಂಡಿಸಿದ ಸ್ಥಳೀಯ ಮುಸ್ಲಿಂ ಸಂಘಟನೆಯೊಂದು, ಕಾನ್ಪುರದ ಅತೀ ದೊಡ್ಡ ಸಗಟು ವ್ಯಾಪಾರ ಮಾರುಕಟ್ಟೆಯಾದ ಪರೇಡ್‌ ಮಾರ್ಕೆಟನ್ನು ಮುಚ್ಚುವಂತೆ ಕರೆ ನೀಡಿತ್ತು. ಇದರ ನಡುವೆಯೇ ಪರೇಡ್‌ ಚೌಕ್‌ನಲ್ಲಿ ಎರಡು ಗುಂಪುಗಳು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಲಾಠಿಚಾರ್ಜ್‌ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 18 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಇದರಲ್ಲಿ 40 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಇನ್ನೂ 1,000 ಜನರನ್ನು ಗುರುತಿಸಬೇಕಾಗಿದೆ.

ಆಗಿದ್ದೇನು?

ಜ್ಞಾನವಾಪಿ ವಿಷಯದ ಕುರಿತು ಇತ್ತೀಚೆಗೆ ನಡೆದ ಸುದ್ದಿ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳನ್ನು ವಿರೋಧಿಸಿ ಕಾನ್ಪುರದ ಕೆಲವು ಮುಸ್ಲಿಂ ಮುಖಂಡರು ಶುಕ್ರವಾರ ಅಂಗಡಿಗಳನ್ನು ಮುಚ್ಚುವಂತೆ ಕರೆ ನೀಡಿದ್ದರು. ಶುಕ್ರವಾರದ ಪ್ರಾರ್ಥನೆಯ ನಂತರ ನಗರದ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಪರೇಡ್ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಮುಚ್ಚಲು ಒಂದು ಗುಂಪು ಬಂದಿತು. “ಇದ್ದಕ್ಕಿದ್ದಂತೆ, ಸುಮಾರು 50-100 ಜನರು ಬಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು, ಇದನ್ನು ಇನ್ನೊಂದು ಕಡೆಯಿಂದ ವಿರೋಧಿಸಲಾಯಿತು. ನಂತರ ಕಲ್ಲು ತೂರಾಟ ನಡೆಯಿತು” ಎಂದು ಕಾನ್ಪುರ ಪೊಲೀಸ್ ಕಮಿಷನರ್ ವಿಜಯ್ ಸಿಂಗ್ ಮೀನಾ ಹೇಳಿದರು.

Advertisement

ನಗರದ ಪರೇಡ್ ಚೌಕ್ ಪ್ರದೇಶದಲ್ಲಿ ಎರಡು ಗುಂಪುಗಳು ಹೊಡೆದಾಡಿಕೊಂಡವು. ಜನರು ಕಲ್ಲುಗಳನ್ನು ಎಸೆಯುವುದು ಮತ್ತು ಪರಸ್ಪರ ದಾಳಿ ಮಾಡುವ ದೃಶ್ಯಗಳು ವಿಡಿಯೋಗಳಲ್ಲಿ ಸೆರೆಯಾಗಿದೆ. ಬಾಂಬ್‌ಗಳನ್ನು ಎಸೆಯಲಾಯಿತು ಮತ್ತು ಗುಂಡು ಹಾರಿಸಲಾಯಿತು ಎಂದು ವರದಿ ತಿಳಿಸಿದೆ.

ಗುಂಪು ಚದುರಿಸಲು ಮತ್ತು ಹೆಚ್ಚಿನ ಹಿಂಸಾಚಾರವನ್ನು ತಡೆಯಲು ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಮೀನಾ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯ (ಪಿಎಸಿ) 12 ಕಂಪನಿಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಹಿರಿಯ ಅಧಿಕಾರಿಗಳನ್ನು ಸಹ ಅಲ್ಲಿಗೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.