ರಾಮಾಯಣ ಬರೆದ ವಾಲ್ಮೀಕಿ ಆರಂಭದಲ್ಲಿ ದರೋಡೆಕೋರನಾಗಿದ್ದ, ನಂತರ ಒಂದು ದಿನ ಆ ಕಾಡಿನ ಮಾರ್ಗದಲ್ಲಿ ಆಗಮಿಸಿದ ಸಪ್ತರ್ಷಿಗಳಿಂದಾಗಿ ವಾಲ್ಮೀಕಿಯಾದ ಎಂಬ ಕಥೆ ಎಲ್ಲರಿಗೂ ತಿಳಿಸಿದೆ. ಆದರೆ ಈ ಕಥೆ ವಾಲ್ಮೀಕಿಗೆ ಹೋಲಿಕೆಯಲ್ಲ, ಇದು ಕೂಡಾ ಒಬ್ಬ ದರೋಡೆಕೋರ, ಬಂಡುಕೋರನ ಕಥೆ. ಕರ್ನಾಟಕದ ಶಿವಮೊಗ್ಗದಲ್ಲಿ ಆ ಕಾಲದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನನಾಗಿದ್ದ ಕನ್ನೇಶ್ವರ ರಾಮಾ ಬಗ್ಗೆ ಬಹುತೇಕರಿಗೆ ತಿಳಿದಿಲ್ಲದಿರಬಹುದು.
ಕನ್ನೇಶ್ವರ ರಾಮ ಯಾರೀತ ಎಂಬ ಬಗ್ಗೆ ವಿಕಿಪಿಡಿಯಾದಲ್ಲಿಯೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಗೂಗಲ್ ನಲ್ಲಿ ಕನ್ನೇಶ್ವರ ರಾಮನ ಸಿನಿಮಾದ ಬಗ್ಗೆ ಹೆಚ್ಚು ಮಾಹಿತಿ ಇದೆ. 1977ರಲ್ಲಿ ಎಂಎಸ್ ಸತ್ಯು ಅವರ ನಿರ್ದೇಶನದಲ್ಲಿ ಮೂಡಿ ಬಂದ ಕನ್ನೇಶ್ವರ ರಾಮ ಸಿನಿಮಾ ಬಹಳಷ್ಟು ಜನಪ್ರಿಯತೆ ಪಡೆದಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಗ್ರಾಮದ ಮುಖ್ಯಸ್ಥನ ಅನ್ಯಾಯದ ತೀರ್ಮಾನದ ವಿರುದ್ಧ ಬಂಡೆದ್ದ ಯುವಕ ಕನ್ನೇಶ್ವರ ರಾಮ, ಕೊನೆಗೆ ಗ್ರಾಮಸ್ಥರ ಆಕ್ರೋಶಕ್ಕೆ ಆತ ಬಲಿಯಾಗುತ್ತಾನೆ. ಇದರ ಪರಿಣಾಮ ಕನ್ನೇಶ್ವರ ರಾಮ ಜೈಲು ಸೇರುವಂತಾಗುತ್ತದೆ. ಆದರೆ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನೇಶ್ವರ ಜೈಲಿನಿಂದ ತಪ್ಪಿಸಿಕೊಳ್ಳುತ್ತಾನೆ. ಏತನ್ಮಧ್ಯೆ ಕನ್ನೇಶ್ವರ ರಾಮನ ಬದುಕಿಗೊಂದು ತಿರುವು ಎಂಬಂತೆ ದರೋಡೆಕೋರರ ಗುಂಪಿನಲ್ಲಿ ಸೇರಿಕೊಳ್ಳುತ್ತಾನೆ. ಬಳಿಕ ದರೋಡೆಕೋರರ ಗುಂಪಿನ ಮುಖಂಡನ ಸಾವಿನ ನಂತರ ಕನ್ನೇಶ್ವರ ರಾಮನೇ ಅದಕ್ಕೆ ಮುಖ್ಯಸ್ಥನಾಗುತ್ತಾನೆ.
ಬ್ರಿಟಿಷರ ವಿರುದ್ಧ ಹೋರಾಟ ನಡೆಯುತ್ತಿದ್ದ ಕಾಲಘಟ್ಟವದು, ಮಹಾತ್ಮ ಗಾಂಧೀಜಿಯ ಸತ್ಯಾಗ್ರಹ ಚಳವಳಿ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ ಇತ್ತ ಶಿವಮೊಗ್ಗ ಪ್ರಾಂತ್ಯದಲ್ಲಿದ್ದ ಕನ್ನೇಶ್ವರ ರಾಮ ದರೋಡೆಕೋರನಾಗಿ ಲೂಟಿಗೈಯುತ್ತಿದ್ದ. ಈತನ ಬೆಂಬಲಿಗರು ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗತೊಡಗಿದ್ದರು.ಈ ವೇಳೆ ಸತ್ಯಾಗ್ರಹದಲ್ಲಿ ಪಾಲ್ಗೊಂಡವರನ್ನು ಕನ್ನೇಶ್ವರ ರಾಮ ಜೈಲಿಗೆ ಕರೆದೊಯ್ಯುವುದನ್ನು ತಡೆಯಲು ಅವರನ್ನು ರಕ್ಷಿಸುತ್ತಿದ್ದ. ಹೀಗೆ ಹೋರಾಟಗಾರರ ಸಂಪರ್ಕದಿಂದ ಕನ್ನೇಶ್ವರ ರಾಮನ ಸ್ವಭಾವದಲ್ಲಿ ಬದಲಾವಣೆಯಾಗಲು ಕಾರಣವಾಗುತ್ತದೆ. ತದನಂತರ ಕನ್ನೇಶ್ವರ ರಾಮ ಶ್ರೀಮಂತರನ್ನು ಲೂಟಿಗೈದು ಬಡವರಿಗೆ ಸಹಾಯ ಮಾಡುವ ರಾಬಿನ್ ಹುಡ್ ಆಗಿಬಿಟ್ಟಿದ್ದ!
ಶ್ರೀಮಂತರ ಶೋಷಣೆ, ಅಟ್ಟಹಾಸದ ವಿರುದ್ಧ ಸೆಟೆದು ನಿಂತ ಕನ್ನೇಶ್ವರ ರಾಮ ಜನಸಾಮಾನ್ಯರ ಕಣ್ಣಲ್ಲಿ ಹೀರೋವಾಗಿ ಜನಪ್ರಿಯನಾಗಿದ್ದ. ಬ್ರಿಟಿಷ್ ಪೂರ್ವ ಕಾಲದ ಸಾಮಂತ ಅರಸನಾಗಿದ್ದ ಶಿವಪ್ಪ ನಾಯಕರ ಹಳೇ ಕೋಟೆಯೊಳಗೆ ಕನ್ನೇಶ್ವರ ರಾಮಾ ತನ್ನ ಸಾಮ್ರಾಜ್ಯವನ್ನು ಕಟ್ಟಿ ಅಲ್ಲಿಂದಲೇ ಎಲ್ಲ ಕಾರ್ಯಾಚರಣೆಗೆ ಸಂಚು ರೂಪಿಸುತ್ತಿದ್ದನಂತೆ. ವಿವಾಹಿತನಾಗಿದ್ದ ಕನ್ನೇಶ್ವರ ರಾಮನಿಗೆ ಮಲ್ಲಿ ಎಂಬ ಪ್ರೇಯಸಿ ಇದ್ದಳು. ಸರ್ಕಾರಿ ಖಜಾನೆಗಳನ್ನು, ಶ್ರೀಮಂತರನ್ನು ಲೂಟಿ ಮಾಡುವ ಮೂಲಕ ಕನ್ನೇಶ್ವರ ರಾಮ ಪೊಲೀಸರಿಗೆ, ಬ್ರಿಟಿಷ್ ಆಡಳಿತಕ್ಕೆ ದುಸ್ವಪ್ನವಾಗಿಬಿಟ್ಟಿದ್ದ.
ಅಂತಿಮವಾಗಿ ಪೊಲೀಸರು ಹೆಣೆದ ಸಂಚಿನಂತೆ ಪ್ರೇಯಸಿ ಮಲ್ಲಿಯೇ ಕನ್ನೇಶ್ವರ ರಾಮನನ್ನು ಸೆರೆಹಿಡಿಯಲು ಸಹಕರಿಸಿದ್ದಳು. ತನ್ನ ಕೈಯಲ್ಲಿದ್ದ ಬಂದೂಕನ್ನು ಪೊಲೀಸರಿಗೆ ಒಪ್ಪಿಸಿ ಶರಣಾಗುತ್ತಾನೆ. ಅಲ್ಲಿಯವರೆಗೂ ರಾಬಿನ್ ಹುಡ್ ನಂತಿದ್ದ ಕನ್ನೇಶ್ವರ ರಾಮ ಸಾರ್ವಜನಿಕವಾಗಿ ಕಾಣಿಸಿಕೊಂಡಂತಾಗಿತ್ತು. ಬಂಧಿಸಲ್ಪಟ್ಟ ಕನ್ನೇಶ್ವರ ರಾಮನ ಕಾಲು, ಕೈಗಳನ್ನು ಸರಪಳಿಯಿಂದ ಬಿಗಿದು ಶಿವಮೊಗ್ಗದ ಜಿಲ್ಲೆಯಲ್ಲಿ ಮೆರವಣಿಗೆ ಮಾಡಿಸಲಾಗಿತ್ತು. ಕೋರ್ಟ್ ಕಟಕಟೆಯಲ್ಲಿ ಕನ್ನೇಶ್ವರ ರಾಮನಿಗೆ ಗಲ್ಲುಶಿಕ್ಷೆಯ ತೀರ್ಪು ಹೊರಬೀಳುತ್ತದೆ. ಕಾನೂನು ಪ್ರಕ್ರಿಯೆಯಂತೆ ಬೆಂಗಳೂರು ಜೈಲಿನಲ್ಲಿ ಕನ್ನೇಶ್ವರ ರಾಮನನ್ನು ಗಲ್ಲಿಗೇರಿಸಲಾಗುತ್ತದೆ. ಹೀಗೆ ದರೋಡೆಕೋರನಾಗಿ, ಬಂಡುಕೋರನಾಗಿದ್ದ ಕನ್ನೇಶ್ವರ ರಾಮನ ಕಥೆ ಜನಪದದ ರೀತಿಯಲ್ಲಿ ಇಂದಿಗೂ ಪ್ರಚಲಿತದಲ್ಲಿದೆ.
ಎಸ್.ಕೆ.ನಾಡಿಗ್ ಅವರ ಕಾದಂಬರಿಯಾಧಾರಿತ ಕನ್ನೇಶ್ವರ ರಾಮ ಸಿನಿಮಾವನ್ನು 1977ರಲ್ಲಿ ಎಂ.ಎಸ್.ಸತ್ಯು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಅನಂತ್ ನಾಗ್, ಶಬಾನಾ ಅಜ್ಮಿ, ಅಮೋಲ್ ಪಾಲೇಕರ್, ಟಾಮ್ ಅಲ್ಟೇರ್, ಬಿವಿ ಕಾರಂತ್ ಸೇರಿದಂತೆ ಹಲವು ಪ್ರಮುಖರು ಮುಖ್ಯಭೂಮಿಕೆಯಲ್ಲಿದ್ದಾರೆ.
*ನಾಗೇಂದ್ರ ತ್ರಾಸಿ