ಮೊನ್ನೆ ಬೆಂಗಳೂರು ಮಹಾನಗರಿಯ ಕಾಲೇಜೊಂದರಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮೂರ್ನಾಲ್ಕು ದಿನಗಳು ಬಹಳಷ್ಟು ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ನಾನೂ ಭಾಗಿಯಾಗಿದ್ದೆ. ಕನ್ನಡ ಕೂಟ ಎಂಬ ಸೂರಿನಡಿಯಲ್ಲಿ ಕಾಲೇಜಿನ ಯುವ ಸಮೂಹವೇ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಕನ್ನಡದ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಸಂವಾದ, ಕನ್ನಡದ ಪ್ರಸಿದ್ಧ ಗಾಯಕರ ಗಾಯನ, ಕೊನೆಯ ದಿನ ಕನ್ನಡ ಹಾಡುಗಳ ಸಂಗೀತ ವೈಭವ ನಡೆಸಿ, ಹಾಡುಗಳಿಗೆ ಯುವ ಪಡೆ ಸಂಭ್ರಮಿಸಿ ಕುಣಿದಾಡಿದರು. ಕಾಲೇಜು ರಂಗದಲ್ಲಿ ಪರಭಾಷೆಯಲ್ಲಿ ಮಾತಾಡಿದರೆ ಮಾತ್ರ ಹೆಚ್ಚು ಅಪ್ ಡೇಟೆಡ್ ಆಗಿದ್ದೇವೆ ಎಂದುಕೊಳ್ಳುವ,ಎಛಿnಘ(ಎಛಿnಘ ಗಳೆಂದರೆ ತಂತ್ರಜ್ಞಾನದೊಂದಿಗೆ ಬೆಳೆದಿರುವ, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿರುವ ಯುವಜನತೆ) ಗಳನ್ನು ಕನ್ನಡದ ಕಲರವರದತ್ತ ಸೆಳೆಯುವಲ್ಲಿ ಇಂತಹ ಕಾರ್ಯಕ್ರಮಗಳು ಗಮನಾರ್ಹವಾಗಿವೆ.
ಇಂದಿನ ಕಾಲೇಜು ಶಿಕ್ಷಣ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಕಂಡುಕೊಳ್ಳುವಲ್ಲಿ ವಿದ್ಯಾರ್ಥಿಗಳನ್ನು ಸಿದ್ಧತೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿದೆ. ಹಾಗೆಂದ ಮಾತ್ರಕ್ಕೆ ಈ ನೆಲದ ಭಾಷೆಯನ್ನು ಬದಿಗೊತ್ತಿ, ಮಾತು ಕೃತಿ ಎಲ್ಲದರಲ್ಲೂ ಯುವ ಜನತೆ ಪರಭಾಷೆಯನ್ನು ಮೈಗೂಡಿಸಿಕೊಳ್ಳಬೇಕೇ? ಕೇವಲ ಪರ ಭಾಷೆಯ ಚಲನಚಿತ್ರ ಹಾಡಿಗೆ ಡಿಜೆ ಹಾಕಿಕೊಂಡು ಹೆಜ್ಜೆ ಹಾಕುವ ಉತ್ಸಾಹ ಎಷ್ಟಿರುತ್ತದೋ,ಅದಕ್ಕೆ ಸರಿಸಮನಾದ ಉತ್ಸಾಹ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕುವಾಗ ಮೂಡಬೇಕು.
ಇಲ್ಲಿ ಹಾಡು, ಕುಣಿತ ಮಜರಂಜನೆಯ ಉದಾಹರಣೆ ಅಷ್ಟೇ. ಪರಭಾಷಿಕರು ಕನ್ನಡ ನಾಡಿನಲ್ಲಿ ಬದುಕು ಕಟ್ಟಿಕೊಳ್ಳುವಾಗ, ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯುವಾಗ ಕನ್ನಡ ಮಾತನಾಡುವ ಅನಿವಾರ್ಯತೆ ಬಂದಾಗ ಕನ್ನಡ ಕಲಿತು ಬದುಕು ಕಟ್ಟಿಕೊಳ್ಳುತ್ತಾರಲ್ಲವೆ? ಇಂದು ಸಣ್ಣ ಸಣ್ಣ ಪಟ್ಟಣಗಳಲ್ಲೂ ದೇಶದ ಬೇರೆ ಬೇರೆ ರಾಜ್ಯದ ವ್ಯಾಪಾರಿಗಳು ಬಂದು ಕನ್ನಡ ಕಲಿತು ವ್ಯಾಪಾರ ಮಾಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ಪರಭಾಷಿಕರಿಗೆ ಅನಿವಾರ್ಯತೆ ಎದುರಾದಾಗ ಕನ್ನಡ ಆಪ್ತವಾಗುತ್ತದೆ. ಆದರೆ,ನಾವು ಕನ್ನಡ ನೆಲದಲ್ಲೇ ಹುಟ್ಟಿ ಬೆಳೆದು ಕಾಲೇಜು ಶಿಕ್ಷಣಕ್ಕಾಗಿ ಮಹಾನಗರದತ್ತ ಬಂದಾಗ ತಾಯ್ನುಡಿಯನ್ನು ಮರೆಯುವುದು ಸರಿಯೇ? ಎಂಬುದನ್ನು ಯುವಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜಾಗತಿಕ ಮಟ್ಟದಲ್ಲಿ ಪೈಪೋಟಿ ನಡೆಸಲು, ವಿವಿಧ ಕ್ಷೇತ್ರಗಳಲ್ಲಿ ಪ್ರಪಂಚದ ಸಾಧಕರ ಸಾಲಿನಲ್ಲಿ ನಿಲ್ಲಲು ಆಂಗ್ಲಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಕಲಿಯುವುದು ಅಗತ್ಯ ಕೂಡ ಹೌದು.
ಆದರೆ ಕನ್ನಡ ನಾಡಿನ ಎಲ್ಲೆಯ ಒಳಗೆ ದಿನ ನಿತ್ಯದ ವ್ಯವಹಾರ, ನಮ್ಮ ಓರಗೆಯವರೊಡನೆ ತೆರೆದ ಮನದ ಮಾತಿಗೆ ಕನ್ನಡವನ್ನೇ ಬಳಸಿದರೆ ಅದೆಷ್ಟು ಚೆನ್ನ! ಕನ್ನಡ ಕಾವ್ಯಗಳನ್ನೋದುವಾತನು ಅಮೇರಿಕೆಯಲ್ಲಿದ್ದರೂ ಅದು ಕರ್ನಾಟಕವೆ. ಪಂಪನನೋದುವ ನಾಲಿಗೆ’ ಮಿಸಿಸಿಪ್ಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೆ. ಕುಮಾರವ್ಯಾಸನನಾಲಿಪ ಕಿವಿ’ ಆಂಡೀಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೆ. ಎಂಬ ರಸ ಋಷಿ ಕುವೆಂಪುರವರ ವಾಣಿಯಂತೆ, ಸಪ್ತ ಸಾಗರದಾಚೆಗೆ ನಾವು ಔದ್ಯೋಗಿಕ ನೆಲೆ ಕಂಡುಕೊಂಡಿದ್ದರೂ, ಕನ್ನಡ ಸಾಹಿತ್ಯದ ಓದು, ಭಾಷೆಯ ಸೊಗಡು ನಮ್ಮ ಬದುಕಿನ ಭಾಗವಾಗಿರಬೇಕು. ಒಂದು ಭಾಷೆಯ ಉಳಿವು ಆ ಭಾಷೆಯ ಬಳಕೆಯಲ್ಲಿರುತ್ತದೆ. ಬಳಸದೇ ಬಳಲುವ ಭಾಷೆ ನಮ್ಮದಾಗಬೇಕೆ? ಬಳಸಿ ಬೆಳೆಯುವ ಕಂಪಿನ ಭಾಷೆ ನಮ್ಮದಾಗಿಸಲು ಯುವ ಜನತೆ ಕಂಕಣಬದ್ಧರಾಗಬೇಕಿದೆ.
ವಿಶ್ವ ವಿದ್ಯಾಲಯದ ಹಂತದಲ್ಲಿ ವೃತ್ತಿಪರ ಶಿಕ್ಷಣ ಪಡೆಯುವಾಗ ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟಿರುತ್ತದೆ. ಕನ್ನಡದ ವಿದ್ಯಾರ್ಥಿಗಳು ಆ ಪರಭಾಷಿಕ ವಿದ್ಯಾರ್ಥಿಗಳ ಜತೆಗೆ ಸಂವಹನ ನಡೆಸುವಾಗ ಆಂಗ್ಲಭಾಷೆ ಅನಿವಾರ್ಯ ಎನಿಸುವುದು ಸಹಜ.ಆದರೆ ಶೈಕ್ಷಣಿಕ ಕೋರ್ಸುಗಳನ್ನು ಮುಗಿಸುವ ತನಕವೂ ಅವರೊಂದಿಗೆ ಆಂಗ್ಲ ಭಾಷೆಯಲ್ಲೇ ಮಾತನಾಡುದಕ್ಕಿಂತ ಅವಕಾಶ ಸಿಕ್ಕಾಗೆಲ್ಲ ಪರಭಾಷಿಕ ಸ್ನೇಹಿತರ ಜತೆಗೆ ಕನ್ನಡ ಮಾತನಾಡುತ್ತ ಅವರಿಗೂ ಕನ್ನಡ ಕಲಿಕೆಯಲ್ಲಿ ಆಸಕ್ತಿ ಮೂಡಿಸಬಹುದಲ್ಲವೆ? ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಾಗ ಕನ್ನಡ ಗೀತೆಗಳು,ಉಪನ್ಯಾಸ ಇಂತಹವುಗಳನ್ನು ಸೇರಿಸಿಕೊಂಡು ಈ ನೆಲದ ಭಾಷೆಯ ಸೊಗಡನ್ನು ಪಸರಿಸುವಲ್ಲಿ ಯುವ ಶಕ್ತಿ ಚಿತ್ತ ಬೆಳೆಸಬೇಕಿದೆ.
ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ – ಮೂಗ್ನಲ್ ಕನ್ನಡ್ ಪದವಾಡ್ತೀನಿ ! ನನ್ನ ಮನಸನ್ಸ್ ನೀ ಕಾಣೆ !
ಎಂದು ಜಿ.ಪಿ.ರಾಜರತ್ನಂ ರವರು ಕನ್ನಡದ ಕಿಚ್ಚು ಹೆಚ್ಚಿಸಿದಂತೆ, ನಾವಿಂದು ಹೆಮ್ಮೆಯಿಂದ ಕನ್ನಡವನ್ನು ಮಾತನಾಡಬೇಕಿದೆ. ಕಾಲೇಜುಗಳಲ್ಲಿ ಯುವ ಪಡೆ ಉಡುಗೆ ತೊಡುಗೆಗಳನ್ನು ತೊಟ್ಟು ಸಂಭ್ರಮಿಸಲು ಸಾಂಪ್ರದಾಯಿಕ ಉಡುಗೆಗಳ ದಿನವನ್ನು ಆಚರಿಸಿದಂತೆ, ಕನ್ನಡದ ಕಲರವ ನಿತ್ಯೋತ್ಸವವಾಗಲು ನಿತ್ಯವೂ ಕನ್ನಡ ಸಂವಹನದ ಮೂಲಕ ಕನ್ನಡ ದಿನವನ್ನಾಗಿ ಆಚರಿಸಬೇಕಿದೆ.ಭಾಷೆ ನಿಂತ ನೀರಾಗದೆ ಸಲಿಲವಾಗಿ ಹರಿಯುವ ನದಿಯಂತಾಗಲು ಯುವ ಬಳಗ ದೃಢ ಹೆಜ್ಜೆಯನ್ನಿಡೋಣವೆ?
ಅನೀಶ್ ಬಿ.ಕೊಪ್ಪ
ಪಿ.ಇ.ಎಸ್. ವಿಶ್ವವಿದ್ಯಾಲಯ,
ಬೆಂಗಳೂರು