Advertisement
ಆಂಗ್ಲಭಾಷೆಯೇ ಬದುಕಿನ ಭಾಷೆಯಾಗಿರುವ ಈ ಹೊತ್ತಲ್ಲಿ, ಮಾತೃ ಭಾಷೆಯ ಬಗೆಗೆ ಅಗಾಧ ಅಭಿಮಾನವನ್ನು ಇಟ್ಟು, ನಾಡು, ನುಡಿಯ ರಕ್ಷಿಸಬೇಕೆನ್ನುವ ಪಣತೊಟ್ಟು, ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಲು ಪವನ್ ಎಂಬ ಅಚ್ಚ ಕನ್ನಡ ಪ್ರೇಮಿ “ಕನ್ನಡ ಮನಸುಗಳ ಪ್ರತಿಷ್ಠಾನ’ವನ್ನು ರೂಪಿಸಿದ. ಮೊದಲು ಈ ಸಂಘ 15- 20 ಜನರಿಂದ ಕೂಡಿತ್ತು. ಈಗ ಆ ಸಂಖ್ಯೆ 250ಕ್ಕೂ ಮೀರಿದೆ.
Related Articles
Advertisement
ಸಮಸ್ಯೆ ಹೇಗೆ ತಿಳಿಯುತ್ತದೆ?: “ಮೊದಲು ನಮ್ಮ ಪರಿಚಿತ ಸ್ನೇಹಿತರಿಂದ ಹಾಗೂ ಫೇಸ್‌ಬುಕ್‌ನ ಪೋಸ್ಟ್‌ಗಳಿಂದ ಕನ್ನಡದ ಕುರಿತಾದ ಸಮಸ್ಯೆಗಳ ಬಗ್ಗೆ ತಿಳಿಯುತ್ತೇವೆ. ಸಮಸ್ಯೆಗೆ ಪರಿಹಾರ ಒದಗಿಸಲು ವಾಟ್ಸ್ ಆ್ಯಪ್‌ನಲ್ಲಿ ಚರ್ಚಿಸಿ, ನಂತರ ಎಲ್ಲ ಸಂಗತಿಯನ್ನೂ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುತ್ತೇವೆ. ಪ್ರತಿಷ್ಠಾನದ ಹೆಸರಿನಲ್ಲಿ ಪ್ರತ್ಯೇಕ ಅಕೌಂಟ್ ಇದೆ. ನಮ್ಮ ಕೆಲಸದಲ್ಲಿ ಕೈ ಜೋಡಿಸಲು ಬಯಸುವವರು ಸಹಾಯ ಮಾಡುತ್ತಾರೆ.
ಹೀಗೆ ಒಟ್ಟಾದ ಹಣದ ಜೊತೆಗೆ, ನಮ್ಮಲ್ಲಿದ್ದಷ್ಟನ್ನು ಹಾಕಿಕೊಂಡು ಕೆಲಸ ಆರಂಭಿಸಲಾಗುತ್ತದೆ. ಹೆಚ್ಚುವರಿಯಾಗಿ ಹಣ ಉಳಿದರೆ, ಅದನ್ನು ಮುಂದಿನ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತದೆ. ಖರ್ಚಿನ ಸಂಪೂರ್ಣ ಮಾಹಿತಿಯನ್ನು ಪಟ್ಟಿಮಾಡಿ ಫೇಸ್‌ಬುಕ್‌ನಲ್ಲೇ ಪ್ರಕಟಿಸಿ, ತಂಡದ ಎಲ್ಲರಿಗೂ ತಿಳಿಸುತ್ತೇವೆ’ ಎನ್ನುತ್ತಾರೆ ಪವನ್.
ಕನ್ನಡ ಬಾವುಟ ಮೆರವಣಿಗೆ: “ಬೆಂಗಳೂರಿನ ಮಾವಳ್ಳಿ ಸರ್ಕಾರಿ ಶಾಲೆಯಲ್ಲಿ ಇವರ ಮೊದಲ ಕಾರ್ಯಕ್ರಮ ಶುರುವಾದದ್ದು, ಇಲ್ಲಿಯವರೆಗೆ 20 ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಳೆದವರ್ಷ ರಾಜ್ಯೋತ್ಸವಕ್ಕೆ ಸಂಗಂ ವೃತ್ತದಿಂದ ಎಂ.ಜಿ. ರೋಡ್‌ವರೆಗೆ 20×40 ಮೀಟರ್ ಉದ್ದದ ಕನ್ನಡ ಬಾವುಟವನ್ನು ಮೆರವಣಿಗೆ ಮಾಡಿದ್ದೆವು. ಬೆಂಗಳೂರಿನ ಸುತ್ತಮುತ್ತ ಸೇರಿದಂತೆ ಹೊರ ಭಾಗಗಳಲ್ಲಿ ಇದುವರೆಗೂ 50 ರಿಂದ 60 ಹಾಳಾದ ಕನ್ನಡ ಬಾವುಟಗಳನ್ನು ಗುರ್ತಿಸಿ, ತೆಗೆದು ಹಾಕಿ ಹೊಸದನ್ನು ಹಾಕಿದ್ದೇವೆ’ ಎಂದು ಪವನ್, ತಮ್ಮ ಬಳಗದ ಒಂದೊಂದೇ ಹೆಜ್ಜೆಗಳನ್ನು ಹೇಳಿಕೊಂಡರು.
ಶಾಲೆಗಳ ಪ್ರಗತಿಗೆ ಹೆಗಲಾಗಿ…: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆಯಲಾಗಿದೆ. ಎರಡೂ ಶಾಲೆಗಳಿಗೆ ಸುಣ್ಣ-ಬಣ್ಣ ಹೊಡೆಸಲಾಗಿದೆ. ಲಾಳನಕೆರೆ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಣವನ್ನು ಆರಂಭಿಸಲಾಗಿದೆ. ಅಲ್ಲಿನ ಮಕ್ಕಳಿಗೆ ನೋಟ್ ಪುಸ್ತಕಗಳು, ಪೆನ್ನು ಕೊಡುವುದರ ಜೊತೆಗೆ ಎರಡೂ ಶಾಲೆಗಳ ಹೊರಾಂಗಣದಲ್ಲಿ ಸುಮಾರು 60 ಗಿಡಗಳನ್ನು ನೆಡಲಾಗಿದೆ.
ಇತ್ತೀಚೆಗಷ್ಟೇ ಸುಳ್ಯ ಸಮೀಪದ ಕೊಳ್ಚಾರ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ನೀಡಿರುವುದು, ಶಾಲೆಗೂ ಅಗತ್ಯವಿದ್ದ ಹಲವು ವಸ್ತುಗಳನ್ನು ಕೊಟ್ಟಿರುವುದು. ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಹಳೆಯ ಕಲ್ಯಾಣಿಯೊಂದರ ಹೂಳು ತೆಗೆದಿರುವುದು, ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹ ಬಂದಾಗ ಎರಡು ಕೋಟಿ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿ, ಪ್ರವಾಹ ಪೀಡಿತ ಜನರಿಗೆ ನೆರವಾಗಿದ್ದು- ಹೀಗೆ… ಈ ಪ್ರತಿಷ್ಠಾನದ ಪುಣ್ಯ ಕೆಲಸಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಪುಟ್ಟ ಕಂದನಿಗೆ ಚಿಕಿತ್ಸೆ ಕೊಡಿಸಿದ್ದು…: “ಗಂಗಾವತಿ ಮೂಲಕ ಮೂರು ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾದದ್ದು, ನಮ್ಮ ತಂಡದ ಪಾಲಿನ ಸಾರ್ಥಕ ಕ್ಷಣ. ಆ ಪುಟ್ಟ ಮಗುವಿಗೆ ಹೃದಯದ ಶಸ್ತ್ರ ಚಿಕಿತ್ಸೆ ಆಗಬೇಕಿತ್ತು. ವಿಷಯ ತಿಳಿದ ತಕ್ಷಣ, ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದೆವು. ಆ ಮಗುವಿನ ಚಿಕಿತ್ಸೆಗೆ ತಗುಲಿದ ಹಣ, ನಮ್ಮ ಪ್ರತಿಷ್ಠಾನದ ಸದಸ್ಯರು ಮತ್ತು ವಿದೇಶಗಳಲ್ಲಿರುವ ಗೆಳೆಯರೆಲ್ಲರ ಕಡೆಯಿಂದ ಬಂತು. ಕಡೆಗೆ, ಆ ಮಗುವನ್ನು ಕಾರಿನಲ್ಲಿ ಗಂಗಾವತಿಯ ಅವರ ಮನೆಗೆ ಬಿಟ್ಟು ಬಂದ್ವಿ…’ ಎನ್ನುತ್ತಾರೆ, ಪವನ್.
ಈ ಬಳಗದ ಸಂಪರ್ಕ ಸಂಖ್ಯೆ: 9916026497
* ಯೋಗೇಶ್ ಮಲ್ಲೂರು