ನವೆಂಬರ್ 1ರಿಂದ ಆಂಗ್ಲ ಭಾಷೆಯ ಟಿಪ್ಪಣಿ ಇರುವ ಕಡತಗಳಿಗೆ ಸಹಿ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಆದರೆ, ಅಧಿಕಾರಿ ವರ್ಗ ಇದಕ್ಕೆ ಎಷ್ಟರ ಮಟ್ಟಿಗೆ ಸಹಕರಿಸುತ್ತದೆ ಎಂಬ ಪ್ರಶ್ನೆ ಮೂಡಿದೆ. ಆಡಳಿತದಲ್ಲಿ ಕನ್ನಡ ಬಳಕೆ ಸಂಬಂಧ ಇದುವರೆಗೂ 305 ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಕೆಲವು ಅಧಿಕಾರಿಗಳನ್ನು ಹೊರತುಪಡಿಸಿದರೆ ಬಹುತೇಕ ಐಎಎಸ್-ಐಪಿಎಸ್ ಅಧಿಕಾರಿಗಳಿಗೆ ಇಂದಿಗೂ ಇಂಗ್ಲಿಷ್ ಪ್ರಿಯವಾದ ಭಾಷೆ. ಹೀಗಾಗಿ, ಕನ್ನಡ ಬಳಕೆ ಸುತ್ತೋಲೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.
ಸಚಿವ ಸಂಪುಟದ ಟಿಪ್ಪಣಿಗಳು ಕನ್ನಡದಲ್ಲಿ ಸಿದ್ಧವಾಗಬೇಕು ಎಂಬ ಬೇಡಿಕೆ ಎರಡು ದಶಕಗಳಿಂದ ಇದೆ. ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಆದರೆ, ಅದೂ ಸಹ ಇನ್ನೂ ಜಾರಿಯಾಗಿಲ್ಲ. ನವೆಂಬರ್ 1 ರಿಂದ ನನ್ನ ಮುಂದೆ ಬರುವ ಎಲ್ಲ ಕಡತಗಳೂ ಕನ್ನಡದಲ್ಲೇ ಇರಬೇಕು. ಆಂಗ್ಲ ಭಾಷೆಯಲ್ಲಿದ್ದರೆ ನಾನು ಸಹಿ ಮಾಡುವುದಿಲ್ಲ ಎಂದು ಕುಮಾರಸ್ವಾಮಿಯವರು ಮುಖ್ಯ ಕಾರ್ಯದರ್ಶಿ ಸಹಿತ ಎಲ್ಲ ಇಲಾಖಾ ಕಾರ್ಯದರ್ಶಿಗಳಿಗೆ ಹಾಗೂ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಜತೆಗೆ, ಸಂಪುಟ ಸಭೆಯ ಟಿಪ್ಪಣಿ ಹಾಗೂ ಕತಡಗಳು ಸಹ ಕನ್ನಡದಲ್ಲೇ ಇರಬೇಕು. ಆ ನಿಟ್ಟಿನಲ್ಲಿ ಎಲ್ಲ ಇಲಾಖೆ ಅಧಿಕಾರಿಗಳಿಗೂ ನಿರ್ದೇಶನ ನೀಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ಜತೆ ಪತ್ರ ವ್ಯವಹಾರ ನಡೆಸುವ ಸಂದರ್ಭದಲ್ಲಿ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಪತ್ರ ರವಾನಿಸುವ ಸಂದರ್ಭದಲ್ಲಿ ಮಾತ್ರ ಇಂಗ್ಲೀಷ್ ಇರಲಿ. ಉಳಿದಂತೆ ಎಲ್ಲ ಕಡತಗಳು ಕನ್ನಡದಲ್ಲೇ ಇರಲಿ ಎಂದು ಸೂಚನೆ ನೀಡಿದ್ದಾರೆ. ಕನ್ನಡ ಬಳಕೆ ತಮ್ಮ ಕಚೇರಿಯಿಂದಲೇ ಪ್ರಾರಂಭ ವಾಗಬೇಕು ಎಂಬ ನಿಟ್ಟಿನಲ್ಲಿ ವಿಧಾನ ಸೌಧದಲ್ಲಿರುವ ಮುಖ್ಯಮಂತ್ರಿ ಯವರ ಕಚೇರಿ, ಗೃಹ ಕಚೇರಿ ಕೃಷ್ಣಾದಿಂದ ಬೇರೆ ಬೇರೆ ಇಲಾಖೆಗಳಿಗೆ ರವಾನೆಯಾಗುವ ಎಲ್ಲ ಪತ್ರ ವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಸೂಚನೆ ನೀಡಿದ್ದಾರೆ. ಅಧಿಕಾರಿ ವರ್ಗ ಸಿಎಂ ಆಶಯಕ್ಕೆ ಹೇಗೆ ಸ್ಪಂದಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಗಳ ಸಹಿತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕನ್ನಡ ಅನುಷ್ಟಾನ, ಬಳಕೆಗೆ ಸಾಕಷ್ಟು ಸುತ್ತೋಲೆಗಳನ್ನು ಹೊರಡಿಸಿ ಕೆಲವೊಮ್ಮೆ ತಪಾಸಣೆ ಸಹ ಮಾಡಿದೆ. ಆಗ, ಕನ್ನಡ ಬಳಕೆಯಲ್ಲಿ ಸ್ಥಳೀಯ ಅಧಿಕಾರಿಗಳೇ ಹಿಂದೇಟು ಹಾಕುತ್ತಿರುವುದು ಪತ್ತೆಯಾಗಿದೆ. ಇಂಗ್ಲೀಷ್‌ನಲ್ಲಿ ಆದೇಶ ಹೊರಡಿ ಸುತ್ತಿದ್ದ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಸಂಘರ್ಷಕ್ಕೆ ಇಳಿದ ಉದಾಹರಣೆ ಉಂಟು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಆಂಗ್ಲ ಭಾಷೆಯ ಕಡತಗಳಿಗೆ ಸಹಿ ಮಾಡುವುದಿಲ್ಲ ಎಂಬ ದಿಟ್ಟ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಇದಕ್ಕಾಗಿ ಅಭಿನಂದಿಸುತ್ತೇವೆ. ಆದರೆ, ಅಧಿಕಾರಿ ವರ್ಗ ಇದಕ್ಕೆ ಸ್ಪಂದಿಸಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ತಾಕೀತು ಮಾಡಬೇಕು. ಬೇಸರದ ಸಂಗತಿ ಎಂದರೆ ನಮ್ಮಲ್ಲಿನ ಕೆಲವು ಐಎಎಸ್-ಐಪಿಎಸ್ ಅಧಿಕಾರಿಗಳಿಗೆ ಕನ್ನಡದ ವಿಚಾರದಲ್ಲಿ ಇಚ್ಛಾಶಕ್ತಿ ಇರುವುದಿಲ್ಲ.
ಟಿ.ಎ.ನಾರಾಯಣಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
ಎಸ್. ಲಕ್ಷ್ಮಿನಾರಾಯಣ