ಹೊಸಪೇಟೆ: ಕನ್ನಡ ಭಾಷೆ, ಸಂಸ್ಕೃತಿಗಾಗಿ ಹುಟ್ಟಿಕೊಂಡ ಏಕೈಕ ಕನ್ನಡ ವಿವಿಯ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ನೂರು ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕನ್ನಡ ವಿವಿ ಸಂಶೋಧನಾ ವಿದ್ಯಾರ್ಥಿ ಸಂಗಮೇಶ್ ಹಾಗೂ ರಾಗಿಣಿ ಆಗ್ರಹಿಸಿದರು.
ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅಗತ್ಯ ಅನುದಾನ ನೀಡಿದೇ ಕನ್ನಡ ನಾಡು, ನುಡಿಗಾಗಿ ದ್ರೋಹ ಮಾಡುತ್ತಿದೆ. ಇದರಿಂದಾಗಿ ಕನ್ನಡ ಭಾಷೆಯನ್ನು ಕೇವಲ ಕೆಲವೇ ಪ್ರದೇಶಕ್ಕೆ ಸೀಮಿತಗೊಳಿಸಿ, ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ವಿಸ್ತರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಕನ್ನಡ ಭಾಷೆ, ನಾಡು ನುಡಿಗೆ 2021-22 ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡಬೇಕು. ಈಗಾಗಲೇ ಕನ್ನಡ ವಿಶ್ವವಿದ್ಯಾಲಯ 70 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಿದೆ. ಇದು ಕೇವಲ ಆಡಳಿತ್ಮಾಕ ಬೇಡಿಕೆಯಾಗಿದ್ದು, ಕನ್ನಡ ವಿಶ್ವವಿದ್ಯಾಲಯ ನಾಡಿನ ಜನರ ವಿಶ್ವವಿದ್ಯಾಲಯವಾಗಲು ಮತ್ತು ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲು ಕನಿಷ್ಠ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆ: ಕನ್ನಡ ವಿಶ್ವವಿದ್ಯಾಲಯದ ಉಳಿಗಾಗಿ ಸಂಡೂರು ವಿರಕ್ತಮಠ ಪ್ರಭುದೇವರ ಸ್ವಾಮಿ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ಸಮೀಪದ ಅನಂತಶಯನ ಗುಡಿಯಿಂದ ನಗರದ ರೋಟರಿ ವೃತ್ತದಲ್ಲಿ ಫೆ.25ರಂದು ಸಚಿವ ಆನಂದಸಿಂಗ್ ಹಾಗೂ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಇದರ ಭಾಗವಾಗಿ ಮಾ.3ರಂದು ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಚಲೋ ಚಳವಳಿ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕ ಲಾಗುವುದು. ಒಂದೊಮ್ಮೆ ಸರ್ಕಾರ ಮುಂದಿನ ಬಜೆಟ್ ನಲ್ಲಿ ಕನ್ನಡ ವಿವಿಗೆ ಸರ್ಕಾರ ಅನುದಾನಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಡಿಎಚ್‌ಎಸ್ ಮುಖಂಡ ಎಂ.ಜಂಬಯ್ಯ ನಾಯಕ, ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ ಮಾಳಮ್ಮ, ಸಮುದಾಯ ಎಂ.ಮುನಿರಾಜು, ಶಿವಕುಮಾರ್ ಜೆ., ದೊಡ್ಡ ಬಸವರಾಜ, ಪಂಪಾ, ವೆಂಕಟೇಶ್ ಬಾಬು, ಶರಣಪ್ಪ ಇತರರಿದ್ದರು.