ಗದಗ: ಕರ್ನಾಟಕ ಏಕೀಕರಣ ಹೋರಾಟ ಸಂದರ್ಭ ಹುಯಿಲಗೋಳ ನಾರಾಯಣ ರಾಯರು ರಚಿಸಿದ ಹಾಗೂ ರಾಜ್ಯದ ಮೊದಲ ನಾಡಗೀತೆ ಎಂದೇ ಖ್ಯಾತಿ ಪಡೆದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಗೆ ಈಗ ಶತಮಾನೋತ್ಸವದ ಸಂಭ್ರಮ.
1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಈ ಗೀತೆಯನ್ನು ಹಿಂದೂಸ್ಥಾನಿ ಗಾಯಕಿ ಗಂಗೂಬಾಯಿ ಹಾನಗಲ್ ಮೊದಲ ಬಾರಿಗೆ ಸ್ವಾಗತ ಗೀತೆಯಾಗಿ ಹಾಡಿದ್ದರು. ಕರ್ನಾಟಕ ಏಕೀಕರಣ ಸಂದರ್ಭ ಈ ಗೀತೆ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಆದರೆ 1970ರಲ್ಲಿ ಅಧಿಕೃತ ನಾಡಗೀತೆ ಪಟ್ಟಿಯಿಂದ ಇದನ್ನು ತೆಗೆದುಹಾಕಲಾಯಿತು. ಆದರೆ ಇಂದೂ ಕೂಡ ಈ ಗೀತೆ ಜನಪ್ರಿಯವಾಗಿಯೇ ಇದೆ.
ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈಗಾಗಲೇ “ಗಾಂಧಿ ಭಾರತ’ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ಜತೆಗೆ ರಾಜ್ಯದ ಹೆಮ್ಮೆಯಾದ, ಶತಮಾನೋತ್ಸವ ಸಂಭ್ರಮದಲ್ಲಿರುವ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಗೂ ಮನ್ನಣೆ ದೊರೆಯಬೇಕು ಎಂಬುದು ಗದಗ ಜಿಲ್ಲೆಯ ಜನರ ಕನಸಾಗಿದೆ.
ಬಂಕಿಮಚಂದ್ರ ಚಟರ್ಜಿ ಅವರ “ವಂದೇ ಮಾತರಂ’ ಗೀತೆಯಷ್ಟೇ ಪರಿಣಾಮವನ್ನು ಈ ಗೀತೆ ಕನ್ನಡಿಗರ ಮೇಲೆ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಗೆ ರಾಜ್ಯ ಸರಕಾರ ವಿಶೇಷ ಮಾನ್ಯತೆ ನೀಡಬೇಕು. ರಾಜ್ಯಾದ್ಯಂತ ಎಲ್ಲ ಕನ್ನಡಿಗರು ಒಪ್ಪಿ, ಅಪ್ಪಿ ಮತ್ತೆ ವರ್ಷವಿಡೀ ಹಾಡುವಂತಾಗಬೇಕು ಎಂಬುದು ಗದುಗಿನ ಕನ್ನಡಾಭಿಮಾನಿಗಳ ಮಹದಾಸೆಯಾಗಿದೆ.
1924ರಲ್ಲಿ ಗಾಂಧೀಜಿ ಅಧ್ಯಕ್ಷತೆ ಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಹೊತ್ತಲ್ಲಿ ರಾಜ್ಯದ ಮೊದಲ ನಾಡಗೀತೆ “ಉದಯ
ವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಶತಮಾನೋತ್ಸವ ಆಚರಣೆಗೂ ಸರಕಾರ ಮುಂದಾಗಬೇಕು.
– ಎಸ್.ಎನ್. ಸೊರಟೂರು, ಹುಯಿಲಗೋಳ
ಅರುಣಕುಮಾರ ಹಿರೇಮಠ