Advertisement

ಸಕಲ ಸರ್ಕಾರಿ ಗೌರವಗಳೊಂದಿಗೆ ಗಾಯಕ ಶಿವಮೊಗ್ಗ ಸುಬ್ಬಣ್ಣ ಅಂತ್ಯಸಂಸ್ಕಾರ, ಪಂಚಭೂತಗಳಲ್ಲಿ ಲೀನ

07:54 PM Aug 12, 2022 | Team Udayavani |

ಬೆಂಗಳೂರು: ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಶಿವಮೊಗ್ಗ ಸುಬ್ಬಣ್ಣ ಅವರು ಶುಕ್ರವಾರ ಮಧ್ಯಾಹ್ನ ಪಂಚಭೂತಗಳಲ್ಲಿ ಲೀನವಾದರು. ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನಡೆದವು.

Advertisement

ಪುತ್ರ ಶ್ರೀರಂಗ ಅವರು ಕುಟುಂಬಸ್ಥರು ಮತ್ತು ಆಪ್ತರ ಉಪಸ್ಥಿತಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರು.

ಅನಾರೋಗ್ಯದ ಕಾರಣ ಸುಬ್ಬಣ್ಣ ಅವರು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹೃದಯಾಘಾತಕ್ಕೊಳಗಾಗಿ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದರು.

ಬನಶಂಕರಿಯಲ್ಲಿರುವ ಅವರ ಮನೆಯಲ್ಲಿ ವಿವಿಧ ವಿಧಿಗಳನ್ನು ಪೂರೈಸಿದ ಬಳಿಕ ಸಾರ್ವಜನಿಕರ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ಸುನಿಲ್‌ಕುಮಾರ್‌ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆದರು.

ಗಣ್ಯರ ಸಂತಾಪ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಚಿವರಾದ ಆರಗ ಜ್ಞಾನೇಂದ್ರ, ಸುನಿಲ್‌ ಕುಮಾರ್‌, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

ಸುಬ್ಬಣ್ಣ ಹೆಸರಿನಲ್ಲಿ ಶಾಶ್ವತ ಯೋಜನೆ
ಶಿವಮೊಗ್ಗ ಸುಬ್ಬಣ್ಣ ಅವರು ನಾಡಿನ ಯುವಶಕ್ತಿಗೆ ಪ್ರೇರಣೆ ಆಗಿದ್ದರು. ಅವರ ಹೆಸರು ಸದಾ ನೆನಪಿನಲ್ಲಿ ಉಳಿಯುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿವಮೊಗ್ಗ ಸುಬ್ಬಣ್ಣ ಅವರ ಹೆಸರಿನಲ್ಲಿ ಸ್ಮಾರಕ, ಪ್ರತಿಷ್ಠಾನ, ಪ್ರಶಸ್ತಿ ಮುಂತಾದವುಗಳ ಬಗ್ಗೆ ಚಿಂತನೆಯಿದ್ದು, ಈ ಕುರಿತು ಕುಟುಂಬಸ್ಥರ ಅಭಿಪ್ರಾಯ ಪಡೆಯುತ್ತೇವೆ. ಸುಬ್ಬಣ್ಣ ಮತ್ತು ನನ್ನ ಜತೆ ಪ್ರೀತಿಯ ಸಂಬಂಧ ಇತ್ತು. ಅವರ ನಿಧನ ಕರ್ನಾಟಕದ ಕಲಾ ಜಗತ್ತಿಗೆ ತುಂಬಲಾಗದ ನಷ್ಟ ಎಂದು ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next