Advertisement

ಮರಾಠಿಗರ ಪುಂಡಾಟಿಕೆಗೆ ಕಡಿವಾಣ ಅಗತ್ಯ

03:08 PM Feb 07, 2021 | Team Udayavani |

ಮಳವಳ್ಳಿ: ಬೆಳಗಾವಿಯ ಕರ್ನಾಟಕ ಗಡಿಭಾಗದಲ್ಲಿ ಮರಾಠಿಗಳ ಪುಂಡಾಟಿಕೆ ಹೆಚ್ಚಾಗಿದ್ದು, ಸರ್ಕಾರ ಕಡಿವಾಣ ಹಾಕಬೇಕು ಎಂದು ಸಾಹಿತಿ ಎಂ.ಬಸಪ್ಪ ನೆಲಮಾಕನಹಳ್ಳಿ ಆಗ್ರಹಿಸಿದರು.

Advertisement

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದ ಶ್ರೀ ಷಡಕ್ಷರ ದೇವ ವೇದಿಕೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ಸಂಸದರು ಕನ್ನಡ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಬೇಕು. ದೇಶದ 14 ಭಾಷೆಗಳು ಸಂಸತ್ತಿನಲ್ಲಿ ಧ್ವನಿಗೂಡಬೇಕು. ಬರಗೂರು ರಾಮಚಂದ್ರಪ್ಪ ಹಾಗೂ ಸರೋಜಿನಿ ಮಹಿಷಿ ವರದಿ ಸಂಪೂರ್ಣವಾಗಿ ಜಾರಿಯಾಗಬೇಕು. ಆಯಾ ಪ್ರದೇಶ ಭಾಷೆಗೆ ಸಂಪೂರ್ಣ ಬೆಂಬಲ ನೀಡಬೇಕು. ಈಚೆಗೆ ರಾಜ್ಯ ಸರ್ಕಾರ ಘೋಷಿಸಿರುವ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರದ್ದುಪಡಿಸಿ ಅದೇ ಹಣವನ್ನು ರಾಜ್ಯದ ಗಡಿ ಭಾಗದಲ್ಲಿ ಇರುವ ಸರ್ಕಾರಿ ಶಾಲೆಗಳಿಗೆ ಹಾಗೂ ಬಡವರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಆಗ್ರಹಿಸಿದರು.

ಸಾಹಿತ್ಯದಿಂದ ಮನುಷ್ಯನ ಕ್ರೌರ್ಯ ದೂರ: ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮನುಷ್ಯನ ಕ್ರೌರ್ಯ ದೂರವಾಗಬೇಕಾದರೆ ನಮ್ಮ ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಸಾಹಿತ್ಯ ದಿನನಿತ್ಯದ ಬದುಕಿನ ಭಾಗವಾಗಿದ್ದು, ಸಾಹಿತ್ಯ ಪ್ರತಿಯೊಬ್ಬ ವ್ಯಕ್ತಿಯ ಸರಿ ತಪ್ಪುಗಳನ್ನು ತಿದ್ದುವ ಸಾಧನವಾಗಿದ್ದು, ಕ್ರೌರ್ಯ, ಹಿಂಸೆ ಹೆಚ್ಚಾಗುತ್ತಿದೆ ಎಂದರೆ ಜಾನಪದ ಕಲೆಯನ್ನು ಮರೆಯುತ್ತಿದ್ದೇವೆ ಎಂದು ಅರ್ಥ ಮಾಡಿಕೊಳ್ಳಬೇಕಿದೆ. ಹಿಂದಿನ ಕಾಲದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಒಂದಲ್ಲ ಒಂದು ಜಾನಪದ ಗೀತೆ ಹಾಡುವ ಮೂಲಕ ಸಾಹಿತ್ಯ ಕಲೆಯನ್ನು ನೆನೆಯುತ್ತಿದ್ದರು. ಅಂಥ ಸಾಹಿತ್ಯ ಇತ್ತೀಚಿಗೆ ಮರೆಯಾಗುತ್ತಿರುವುದು ವಿಷಾದನೀಯ ಎಂದರು.

ಜಾನಪದ ಸಾಹಿತ್ಯ ನಮ್ಮ ಬದುಕಿನ ಭಾಗವಾಗಿ ಬದುಕಿನೊಟ್ಟಿಗೆ ಸಾಗಿ ಬಂದಿದೆ. ಸಾಹಿತ್ಯ ಸಂಸ್ಕೃತಿ ಎಲ್ಲಿ ಆಚರಣೆಯಲ್ಲಿ ಇರುತ್ತದೆಯೋ?, ಅಲ್ಲಿ ಸಾಮಾಜಿಕ ನೆಮ್ಮದಿ ಕಾಣಬಹುದಾಗಿದೆ. ಕನ್ನಡ ಭಾಷೆ, ನಾಡು, ನುಡಿ ಉಳಿವಿಗಾಗಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಯುವ ಸಾಹಿತಿಗಳು ಸಮ್ಮೇಳನದ ಮೂಲಕ ಬೆಳಕಿಗೆ ಬರಲು ಸಹಾಯಕವಾಗಿದೆ ಎಂದು ಹೇಳಿದರು.

Advertisement

ಇದನ್ನೂ ಓದಿ :ದೆಹಲಿ ರೈತರ ಹೋರಾಟ ಬೆಂಬಲಿಸಿ ನಿರಶನ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವಿಕುಮಾರ ಚಾಮಲಾಪುರ ಹಾಗೂ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ ಅವರು ಸಾಹಿತ್ಯ ಪರಿಷತ್ತು ನಡೆದು ಬಂದ ಬಗ್ಗೆ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ಟಿ.ನಂದಕುಮಾರ್‌, ಸದಸ್ಯರಾದ ಪ್ರಶಾಂತ್‌ ಕುಮಾರ್‌, ನೂರುಲ್ಲಾ, ಪ್ರಮೀಳಾ, ಕುಮಾರ್‌,ವಡ್ಡರಹಳ್ಳಿ ಸಿದ್ದರಾಜು, ಜಿಪಂ ಸದಸ್ಯ ಹನುಮಂತು, ಟಿಎಪಿಸಿಎಂಎಸ್‌ ನಿರ್ದೇಶಕ ರಾಜೇಶ್‌, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮ.ಸಿ.ನಾರಾಯಣ, ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು, ಮುಖಂಡರಾದ ಯಮಂದೂರು ಸಿದ್ದರಾಜು, ಆಶೋಕ್‌ ಕುಮಾರ್‌, ಸೇರಿದಂತೆ ಜೆಡಿಎಸ್‌ ಮುಖಂಡರು ಇದ್ದರು.

 ಧ್ವಜಾರೋಹಣ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಾಸಕ ಡಾ.ಕೆ.ಅನ್ನದಾನಿ ರಾಷ್ಟ್ರಧ್ವಜ,  ತಹಶೀಲ್ದಾರ್‌ ಎಂ.ವಿಜಯಣ್ಣ ನಾಡಧ್ವಜ ಮತ್ತು ಪರಿಷತ್ತಿನ ಜಿಲ್ಲಾಧ್ಯಕ್ಷ ರವಿಕುಮಾರ ಚಾಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ತಾಪಂ ಕಚೇರಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು ಚಾಲನೆ ನೀಡಿದರು. ವಿವಿಧ ಜಾನಪದ ಕಲಾ ತಂಡಗಳು, ಮಹಿಳೆಯರು ಪೂರ್ಣಕುಂಭ ಹೊತ್ತು ಸಮ್ಮೇಳನಾಧ್ಯಕ್ಷ ಎಂ.ಬಸಪ್ಪ ನೆಲಮಾಕನಹಳ್ಳಿ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಅಭಿನಂದಿಸಲಾಯಿತು. ಶಿವಾರ ಉಮೇಶ್‌ ಅವರಿಂದ ಸುಗಮ ಸಂಗೀತ ನಡೆಯಿತು. ಐದು ಪುಸ್ತಕ ಮಳಿಗೆಗಳು ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next