Advertisement

ಹತ್ತಿ ನೆಲದ ನೆತ್ಯಾಗ ತೆಲಿ ಎತ್ತಿತ್ರಪಾ ಕನ್ನಡಾ…

11:36 PM Jan 08, 2023 | Team Udayavani |

ಹಾವೇರಿ: ಏ ಮಗನಾ ನಿನ್ನ ಜಿಲ್ಲಾ ಅಷ್ಟ … ದೊಡ್ಡದನ ನಮ್ಮ ಜಿಲ್ಲಾದಾಗನೂ ಗಂಡಸೂರ ಅದೇವಿ. ನಾವು ನಮ್ಮ ಸ್ವಂತ ರೊಕ್ಕಾ ಖರ್ಚ ಮಾಡಿ ಸಮ್ಮೇಳಾನಾ ಮಾಡುವಂಗ ಅದೇವಿ. ಮಾಡಿ ತೋರಸ್ತೇವಿ, ಹೊಳ್ಳಾಮಳ್ಳಾ ಮಾತಾಡ್‌ಬ್ಯಾಡ್‌. ಯಾನೋ ಎಲ್ಲಿಂದ ಬಂದಿ ನಮ್ಮ ಜಿಲ್ಲಾ ಏನ ಕಡಿಮೇಯೇನ್‌?

Advertisement

ಓಯ್‌ ಮಾರಾಯಾ ಸ್ವಲ್ಪ ಸುಮ್ಮನಿರಿ ಎಷ್ಟು ಜಗಳ ಮಾರಾಯಾ ನಿಮ್ಮದು. ಮಂಡೆ ಬಿಸಿಯಾಗಿ ಹೋಯ್ತು. ಏ ಅದೆಲ್ಲ ಗೊತ್ತಿಲ್ರಪ್ಪಾ ನಮ್ಗೆ, ಈ ಸಲಾ ಕೊಡ್ತಿವಿ ಅಂದಿದ್ದರಿ ಕೊಡಬೇಕು ಅಷ್ಟೇ. ಒಓ… ಏನಾ ಎಲ್ಲಾ ಸಲಾ ಇತ್ಲಾಗೇನಾ? ಇರ್ಲಿ ಬಿಡ್‌ ಕಣಪ್ಪ. ನಮಗೂ ವಸಿ ನೋಡಿ ಅಂದ್ರು ಮಂಡ್ಯದ ಗೌಡ್ರು.

ಹತ್ರಪಾ ಕೌಂಟರ್‌ನ್ಯಾಗ್‌ ಜಗಳ. ಐವತ್ತರ ನೋಟನ್ಯಾಗ್‌ ನಿನ್ನ ಜಿಲ್ಲಾನ ಖರೀದಿ ಹಿಡಿತೇನ ಅಂತಾನ ಕಿಸೇಕ್‌ ಕೈ ಹಾಕತಾನ್‌. ಸ್ವಂತ ಖರ್ಚನ್ಯಾಗ ಸಮ್ಮೇಳನಾ ಮಾಡುವಂಗ ಅದೇನೋ ಅಂತಾನ ಕಚ್ಚಿ ಗಟ್ಟೆಗೆ ಹಿಡಕೋತಾನ. ಒಟ್ಟನ್ಯಾಗ ಕೌಟಂರ್‌ ಜಗಳ ರಾತ್ರಿ ಎಲ್ಲಾ ಮುಗಿಲಿಲ್ಲ. ಕಡೀಕ ಬೆಳ್ಳಂಬೆಳಗ್ಗೆ ಎದ್ದು ಸರ್ಕಿಟ್‌ ಹೌಸ್‌ನ್ಯಾಗ ಹೋಗಿ ಅಂತೂ ಮತದಾನದ ಮೂಲಕವೇ ಮಂಡ್ಯ ಜಿಲ್ಲೆಗೆ ಸಮ್ಮೇಳನಾ ಮಾಡೂದಂತ ನಿರ್ಧಾರ ಮಾಡಿದ್ರಪಾ. ಭರಪೂರ ಮಂದಿ ಸಮ್ಮೇಳನಾ ನೋಡಾಕ ಹೊರಗ ಮಸ್ತ ಓಡ್ಯಾಡಾತಿದ್ದರು. ಸೆಲ್ಫಿ ಗಿಲ್ಪಿ ತೆಗೆಸಕೊಂಡ ಊಟಾ ಹೊಡದ ಸುತ್ತಾಡುವಾಗ ನಮ್ಮ ಕದರ ಮಂಡಲಗಿ ಹನಮಪ್ಪನ ಚಿಗವ್ವನ ಕಾಕಾನ ಅಜ್ಜಿ ಮಗಳ ಗಂಡ ಬಸು ಸಮ್ಮೇಳನದ ಒನ್ನೆ ಗೇಟನ್ಯಾಗ ನಿಂತ ಅವರ ಊರಿನ ಮಂದಿ ಮುಂದ ಜೋರ ನಗಾಕತ್ತಿದ್ದಾ. ಅವನ ಕೂಡ ಬಂದವರೆಲ್ಲಾ ಯಾಕೋ ಏನಾತಪಾ ನಿಂಗ ಅಂತಂದರು. ಏನಿಲ್ರಪಾ ಸಮ್ಮೇಳನದಾಗ ಕಸಾಪ ಜಿಲ್ಲಾ ಅಧ್ಯಕ್ಷರು ಹೊಡದಾಡಾತಾರಂತ ಅಂದ.

ಬಸು ಹೇಳಿಕೇಳಿ ಹಾವೇರಿಯಂವಾ ಅಲ್ಲಿ ನೋಡಿಬಂದಿದ್ದನ್ನ ಹಂಗ ಎಲ್ಲಾರೂ ಮುಂದ ಹೇಳಿದಾ. ಕಸಾಪ ಅಧ್ಯಕ್ಷ ಗೋವಿಂದ ಭಟ್‌ರ ಮೊಮ್ಮಗಾ ಅಂತ ಹೇಳಕೊಂತನ ಸ್ಟ್ರಿಕ್ಟ ರೂಲ್ಸ್‌ ಮಾಡಾಕ ಹೊಂಟಾರಂತ ಅದಕ್ಕ ಎಲ್ಲಾ ಜಿಲ್ಲಾಧ್ಯಕ್ಷರು ಒಮ್ಮೆ ಮುಗಿ ಬಿದ್ರಪಾ ಆವರ ಮ್ಯಾಲ. ಹೇಳತೇನಿ ಪಾಪ ಅವರ ತಲ್ಯಾಗಿಂದ ಕಪಾಳಕಡೆ ಎಲ್ಲ ಬೇವರ ಹನಿ ನೀರು ಹರಕೊಂತ ಗಂಟಲ ಮಟಾ ಬಂದಿದ್ದು.

ಭಲೇರೇ..ಭಲೇರೆ..ಅಂದ್ರ ಯಾರೋ ಅಂಬರಾ ಹಾಕಿದ್ದರಂತ ಹಂಗಾತು ಭಟ್ಟರ ಮೊಮ್ಮಗನ ಹ್ವಾರೆ. ಚಲೋ ಟೆಂಟ್‌ ಹಾಕಸಿಪಾ ಅಂತ ಶಬ್ಟಾಶ ಗಿರಿ ಕೊಟ್ಟರ, ಇವರು ದೊಡ್ಡ ದೊಡ್ಡ ಸಾಹಿತಿ ಮಂದಿನ, ಜಿಲ್ಲಾ ಅಧ್ಯಕ್ಷರನ್ನ, ಪತ್ರಿಕೆ ಸಂಪಾದಕರನ್ನು ಒಳಗ ಬಿಡಲಂಗ ಟ್ರಿಕ್ಸ ರೂಲ್ಸ ಮಾಡಿ ಬಿಡೂದ. ನಾ| ಡಿಸೋಜಾ ಸೇರಿ ಅನೇಕರಿಗೆ ಕಸಿವಿಸಿಯಾಗಿದ್ದಕ್ಕ ಜೋಶಿ ಅವರ ಬಗ್ಗೆ ಹಂಗೆ ಬ್ಯಾಡಗಿ ಮೆಣಸಿನಕಾಯಿ ಹಂಗ ಖಾರ್‌ ಖಾರ್‌ ಮಾತಾಡಾತಾರ ನೋಡ್ರಿ.

Advertisement

ಇರ್ಲರೇಪಾ ಅವೆಲ್ಲಾ ಇರೂದ. ಏ ನೀವೇನ ಸಮ್ಮೇಳನ ಮಾಡತಿರಿ ಹಾವೇರಿಯವರು. ಅಲ್ಲೇನು ಸೌಲಭ್ಯನ ಇಲ್ಲಾ ಅಂದಿದ್ದವರಿಗೆ ಗುದ್ದ ಕೊಡುವಂತ ಸಮ್ಮೇಳನ ಮಾಡಿ ತೋರಿಸಿದ್ರು ಹಾವೇರಿಯವರು. ಮೊದಲ ಹತ್ತಿ ಬೇಳಿಯು ಮಂದಿ, ಕಪ್ಪು ನೆಲದ ಕಣ ಕಣದಲ್ಲೂ ಕನ್ನಡ ನುಡಿ ಕೇಳಸುವಂಗ ಮಾಡಿದ್ರು. ಗೋವಿಂದ,ಭಟ್ರಾ, ಜೋಶಿ, ಪಂಜೋ,ಟೀಕೆ, ಟಿಪ್ಪಣಿ ಏನೇ ಇರಲಿ. ಒಟ್ಟಿನಲ್ಲಿ ಹತ್ತಿ ನೆಲದ ನೆತ್ತಿಮ್ಯಾಲೆ ಕನ್ನಡ ತಲಿ ಎತ್ತಿ ನಿಲ್ಲೊಹಂಗ ಆತು ಸಮ್ಮೇಳನ. ಭಪ್ಪರೇ ಹಲಿಗೋಳ ಅನ್ನಾಕತ್ತಿದ್ದರು ಸಮ್ಮೇಳನಕ್ಕ ಬಂದ ಬ್ಯಾರೇ ಊರಿನ ಮಂದಿ.

-ಬಸವರಾಜ್‌ ಹೊಂಗಲ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next