ರಾಯಚೂರು: ನಗರದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಶುಕ್ರವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಅದಕ್ಕೂ ಮುನ್ನ ಕರ್ನಾಟಕ ಸಂಘದಲ್ಲಿ ಭುವನೇಶ್ವರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಆಚರಣೆಗೆ ಚಾಲನೆ ನೀಡಿದರು. ಅಲ್ಲಿಂದ ಡಿಎಆರ್ ಮೈದಾನದವರೆಗೆ ವಿವಿಧ ಕಲಾ ತಂಡಗಳ ನೇತೃತ್ವದಲ್ಲಿ ಭುವನೇಶ್ವರಿ ದೇವಿ ಮೂರ್ತಿ ಮೆರವಣಿಗೆ ನಡೆಯಿತು.
ನಂತರ ಮಾತನಾಡಿದ ಶ್ರೀರಾಮುಲು, ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡುತ್ತಿದ್ದು ನಮ್ಮ ದೇಶ ವಿಶ್ವಗುರುವಾಗುತ್ತ ಹೆಜ್ಜೆ ಹಾಕಿದೆ. ಅದಕ್ಕೆ ಎಲ್ಲರೂ ಕೈ ಜೋಡಿಸಿ ಶ್ರಮಿಸಬೇಕು ಎಂದರು. ಹಿಂದಿನ ಸರ್ಕಾರ ಮಕ್ಕಳ ವಿಚಾರದಲ್ಲೂ ರಾಜಕೀಯ ಮಾಡಿತ್ತು. ಕಲ್ಕಡ್ಕ ಪ್ರಭಾಕರ ಭಟ್ ಅವರ ಶಾಲೆಗೆ ಬಿಸಿಯೂಟವನ್ನೆ ನಿಲ್ಲಿಸಿತ್ತು. ನಮ್ಮ ಸರ್ಕಾರ ಇಂದಿನಿಂದ ಮತ್ತೆ ಬಿಸಿಯೂಟ ಆರಂಭಿಸುವ ಮಕ್ಕಳ ವಿಚಾರದಲ್ಲಿ ರಾಜಕೀಯ ಸಲ್ಲದು ಎಂಬ ಸಂದೇಶ ರವಾನಿಸಲಿದ್ದೇವೆ ಎಂದರು.
ನೆರೆ ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರ ಸಂಕಷ್ಟಕ್ಕೆ ಮಿಡಿಯುವ ವ್ಯಕ್ತಿಯಾಗಿದ್ದಾರೆ. ನಾನು ಈ ಹಿಂದೆ ಸಚಿವನಾಗಿದ್ದಾಗಲೂ ರಾಯಚೂರು ಉಸ್ತುವಾರಿ ನೀಡಲಾಗಿತ್ತು. ಈಗಲೂ ಇದೇ ಜಿಲ್ಲೆ ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳು ಪಾಲ್ಗೊಂಡಿದ್ದರು.