ಬೆಂಗಳೂರು: ನಗರದ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಇತೀ¤ಚೆಗೆ “ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ಅವರು ಬ್ಯಾಂಕಿನಲ್ಲಿ ಕನ್ನಡ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ಸಿಂಡಿಕೇಟ್ ಬ್ಯಾಂಕ್ ಕಳೆದ ಏಳು ತಿಂಗಳಲ್ಲಿ ಮಾಡಿರುವ ಕನ್ನಡದ ಕಾರ್ಯ ಸಾಧನೆಯನ್ನು ಶ್ಲಾಘಿಸಿದ ಅವರು, ಕನ್ನಡ ವಿಭಾಗದಿಂದ “ನುಡಿಮುತ್ತುಗಳ ಪುಸ್ತಕ’ ಹಾಗೂ “ತ್ರಿಭಾಷಾ ಕಚೇರಿ ಟಿಪ್ಪಣಿ’ ಕೈಪಿಡಿ ಹೊರತಂದಿರುವ ಕುರಿತು ಸಂತಸ ವ್ಯಕ್ತಪಡಿಸಿದರು.
ಕಾರ್ಯನಿರ್ವಾಹಕ ನಿರ್ದೇಶಕ ಸಿಎಚ್ ಎಸ್.ಎಸ್. ಮಲ್ಲಿಕಾರ್ಜುನ ರಾವ್ ಅವರು ಮಾತನಾಡಿ, ಕರ್ನಾಟಕದಲ್ಲಿ ಬಹುತೇಕ ಗ್ರಾಹಕರು ಕನ್ನಡಿಗರಾಗಿದ್ದು, ಅವರ ಜತೆ ನಮ್ಮ ಸಿಬ್ಬಂದಿ ಕನ್ನಡದಲ್ಲೇ ವ್ಯವಹರಿಸಿ ಅವರ ಅಪೇಕ್ಷೆಗಳನ್ನು ಪೂರೈಸಬೇಕು. ಕನ್ನಡ ಬಾರದ ಸಿಬ್ಬಂದಿ ಕನ್ನಡ ಕಲಿಯಲು ಮುಂದಾಗಬೇಕು. ಸಿಂಡಿಕೇಟ್ ಬ್ಯಾಂಕಿನ ಎಲ್ಲ ವಿಭಾಗಗಳಲ್ಲೂ ಕನ್ನಡವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ನಮ್ಮಿಂದ ಸಾಧ್ಯವಿರುವ ಎಲ್ಲ ರೀತಿಯ ಪ್ರೋತ್ಸಾಹ, ಸಹಕಾರ ಸಿಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತಿ ಬೋಳುವಾರು ಮಹಮದ್ ಕುಂಞ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಸ್. ಕೃಷ್ಣನ್, ಪ್ರಧಾನ ವ್ಯವಸ್ಥಾಪಕ ಭಾಸ್ಕರ್ ಹಂದೆ, ಶೋಭಾ ಚಂದ್ರಹಾಸ್, ವಿಶೇಷ ಅತಿಥಿ ಪ್ರಭಾಕರ್ ಪಾಟೀಲ್, ನಿಗಮ ಕಚೇರಿ ಹಾಗೂ ವಲಯ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.