ದುಬೈ : ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ ಹೆಚ್ಚುತ್ತಿರುವ ಕೂಗು ಕೇಳಿ ಬರುತ್ತಿರುವ ವೇಳೆಯಲ್ಲೇ, ಗಲ್ಫ್ ರಾಷ್ಟ್ರ ದುಬೈನಲ್ಲಿ ಕನ್ನಡಿಗ ಸಂಘಟನೆ ಸದ್ದಿಲ್ಲದೇ ಕನ್ನಡ ಭಾಷೆ ಉಳಿಸಿ ಬೆಳೆಸುವ ಸಂಕಲ್ಪ ಮಾಡಿದೆ. ದುಬೈನಲ್ಲಿರುವ ಕನ್ನಡ ಪಾಠಶಾಲೆ ತನ್ನ 8 ನೇ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿದೆ.
ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಮಿತ್ರರು ಯುಎಇ ಅವರು ನಡೆಸುತ್ತಿರುವ ಕನ್ನಡ ಪಾಠಶಾಲೆಯ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಶಾಲೆಯ ಮಹಾ ಪೋಷಕರಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ (ಕೆ ಎನ್ ಆರ್ ಐ ಅಧ್ಯಕ್ಷ ), ಮೋಹನ್ ನರಸಿಂಹ ಮೂರ್ತಿ (ಕೆ ಎನ್ ಆರ್ ಐ ಉಪಾಧ್ಯಕ್ಷ )ರು ಆನ್ಲೈನ್ ತರಗತಿಗಳಿಗೆ ಚಾಲನೆ ನೀಡಿದರು.
ಕನ್ನಡ ಮಿತ್ರರು ಯುಎಇ ಸಂಘಟನೆಯ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮಾತನಾಡಿ, ಗಲ್ಫ್ ನಲ್ಲಿರುವ ಎಲ್ಲಾ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಪಾಠ ಶಾಲೆಗೆ ಸೇರಿಸಿ ಕನ್ನಡ ಉಳಿಸಿ, ಬೆಳೆಸಲು ಕರೆ ನೀಡಿದರು.
ಕನ್ನಡ ಮಿತ್ರರು ಯುಎಇ ಸಂಘಟನೆಯ ಉಪಾಧ್ಯಕ್ಷ ಸಿದ್ದಲಿಂಗೇಶ್ , ಕಾರ್ಯದರ್ಶಿ ಸುನಿಲ್ ಗವಾಸ್ಕರ್ ಅವರು ಸಂಘಟನೆಯ ಕುರಿತಾಗಿ ಮಾತನಾಡಿ, ಕನ್ನಡ ಭಾಷೆ ಉಳಿಸಿ ,ಬೆಳೆಸಲು ಇಂತಹ ವೇದಿಕೆಗಳ ಪ್ರಯೋಜನ ಪಡೆಯಲು ಹೇಳಿದರು.
ಸಂಘಟನೆಯ ಖಜಾಂಚಿಗಳಾಗಿರುವ ನಾಗರಾಜ್ ರಾವ್ ಮತ್ತು ಮಾಧ್ಯಮ ಸಂಚಾಲಕ ಭಾನುಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.
2014 ರಲ್ಲಿ 30 ಮಕ್ಕಳಿಗೆ ಉಚಿತ ಕನ್ನಡ ಪಾಠ ಮಾಡುವ ಮೂಲಕ ಶುಭಾರಂಭ ಮಾಡಿದ ಸಂಸ್ಥೆ ಪ್ರಸಕ್ತ 20 ಕ್ಕೂ ಹೆಚ್ಚು ಶಿಕ್ಷಕಿಯರು ಕನ್ನಡ ಬೋಧಿಸುತ್ತಿದ್ದು, ರೂಪ ಶಶಿಧರ್ ಅವರು ಇದರ ನೇತೃತ್ವ ವಹಿಸಿದ್ದಾರೆ. ಈಗಾಗಲೇ 300 ಕ್ಕೂ ಹೆಚ್ಚು ಮಕ್ಕಳು ಕನ್ನಡ ಕಲಿಯುವ ಉತ್ಸಾಹದಿಂದ ನೊಂದಾವಣೆ ಮಾಡಿಕೊಂಡಿರುವುದು ಭಾಷಾ ಪ್ರೇಮಿಗಳಿಗೆ ಹೆಮ್ಮೆಯ ವಿಚಾರವಾಗಿದೆ.