Advertisement

ಎರಡು ತಿಂಗಳು 58+ ಸಿನಿಮಾ; ಸ್ಯಾಂಡಲ್‌ವುಡ್‌ ಅರ್ಧಶತಕ!

11:32 AM Mar 03, 2023 | Team Udayavani |

2023ರ ಹೊಸವರ್ಷದ ಕ್ಯಾಲೆಂಡರ್‌ನಲ್ಲಿ ಕೇವಲ ಎರಡು ತಿಂಗಳಷ್ಟೇ ಕಳೆದಿದೆ. ಈ ಎರಡೇ ತಿಂಗಳಿನಲ್ಲಿ ಕನ್ನಡ ಚಿತ್ರರಂಗ ಸಿನಿಮಾಗಳ ಬಿಡುಗಡೆಯ ವಿಷಯದಲ್ಲಿ ಸದ್ದಿಲ್ಲದೇ ಹೊಸದೊಂದು ದಾಖಲೆ ಬರೆದಿದೆ. ಹೌದು, ಜನವರಿ 1ರಿಂದ ಮಾರ್ಚ್‌ 3ರವರೆಗೆ ಉರುಳಿ ಹೋಗಿದ್ದು 9 ವಾರಗಳು. ಈ 9 ವಾರಗಳ ಅವಧಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 58ಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ ಬಂದಿವೆ ಎಂದರೆ ನೀವು ನಂಬಲೇಬೇಕು!

Advertisement

ಕನ್ನಡ ಚಿತ್ರರಂಗದ ಸುದೀರ್ಘ‌ ಇತಿಹಾಸದಲ್ಲಿ, ಕೇವಲ ಎರಡೇ ತಿಂಗಳಲ್ಲಿ ಇಷ್ಟೊಂದು ಸಂಖ್ಯೆ ಯಲ್ಲಿ ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿದ್ದು, ಇದೇ ಮೊದಲು ಎನ್ನುತ್ತಿವೆ ಚಿತ್ರರಂಗದ ಅಂಕಿ- ಅಂಶಗಳು. ಒಂದು ಕಾಲದಲ್ಲಿ ಎರಡು-ಮೂರು ವರ್ಷಗಳಲ್ಲಿ ತೆರೆ ಕಾಣುತ್ತಿದ್ದಷ್ಟು ಸಂಖ್ಯೆಯ ಸಿನಿಮಾಗಳು ಈಗ ಕೇವಲ ಎರಡೇ ತಿಂಗಳಿನಲ್ಲಿ ತೆರೆ ಕಂಡಿರುವುದು, ಕನ್ನಡ ಚಿತ್ರರಂಗ ಬೃಹತ್ತಾಗಿ ಬೆಳೆದಿರುವ ರೀತಿಗೆ ಹಿಡಿದಿರುವ ಸಣ್ಣ ಕೈಗನ್ನಡಿ ಎಂದರೂ ತಪ್ಪಾಗಲಾರದು.

ಕಳೆದ ಎರಡು ತಿಂಗಳಿನಲ್ಲಿ ತೆಲುಗಿನಲ್ಲಿ ಕೇವಲ 37ಕ್ಕೂ ಹೆಚ್ಚು ಸಿನಿಮಾಗಳು, ತಮಿಳಿನಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳು ಮತ್ತು ಮಲಯಾಳಂನಲ್ಲಿ 22ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಇನ್ನು ಭಾರತೀಯ ಚಿತ್ರರಂಗದ ಬಿಗ್‌ ಬ್ರದರ್‌ ಎಂದೇ ಕರೆಸಿಕೊಳ್ಳುವ ಬಾಲಿವುಡ್‌ನ‌ಲ್ಲಿ ಕಳೆದ ಎರಡು ತಿಂಗಳಿನಲ್ಲಿ ಬಿಡುಗಡೆಯಾಗಿ ತೆರೆಗೆ ಬಂದಿರುವುದು ಕೇವಲ 32 ಸಿನಿಮಾಗಳು. ಇವುಗಳ ಪೈಕಿ ಸುಮಾರು 13ಕ್ಕೂ ಹೆಚ್ಚು ಸಿನಿಮಾಗಳು ಥಿಯೇಟರ್‌ಗಳ ಜೊತೆ ಜೊತೆಗೆ ಓಟಿಟಿಯಲ್ಲೂ ತೆರೆಕಂಡಿವೆ ಎಂದರೆ ನೀವು ನಂಬಲೇಬೇಕು. ಒಟ್ಟಾರೆ ಈ ಎಲ್ಲ ಅಂಕಿ-ಅಂಶಗಳ ದಾಖಲೆಗಳನ್ನು ಮುಂದಿಟ್ಟುಕೊಂಡು ನೋಡುವುದಾದರೆ, ಸ್ಯಾಂಡಲ್‌ವುಡ್‌ ಸದ್ಯದ ಮಟ್ಟಿಗೆ ಇಡೀ ಭಾರತೀಯ ಚಿತ್ರರಂಗದಲ್ಲೇ ಸಿನಿಮಾಗಳ ಬಿಡುಗಡೆಯ ವಿಷಯದಲ್ಲಿ ನಂಬರ್‌ ಒನ್‌ ಎಂದು ಎದೆ ತಟ್ಟಿಕೊಂಡು ಹೇಳಬಹುದು.

ಇದು ಸಿನಿಮಾಗಳ ಬಿಡುಗಡೆಯ ವಿಷಯದಲ್ಲಿ ಕನ್ನಡ ಚಿತ್ರರಂಗದ ದಾಖಲೆಯಾದರೆ, ಬಿಡುಗಡೆಯಾದ ಇಷ್ಟೊಂದು ಸಿನಿಮಾಗಳ ಪೈಕಿ ಗೆದ್ದ ಸಿನಿಮಾಗಳೆಷ್ಟು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ಆದರೆ ಇದಕ್ಕೆ ಮಾತ್ರ ನೀರಸ ಉತ್ತರ ಸಿಗುತ್ತದೆ. ಎರಡು ತಿಂಗಳಿನಲ್ಲಿ ಐವತ್ತಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಯಾಗಿ ತೆರೆಗೆ ಬಂದರೂ, ಅದರಲ್ಲಿ ಗೆದ್ದ ಸಿನಿಮಾಗಳು ಮಾತ್ರ ಬೆರಳೆಣಿಕೆ ಯಷ್ಟು. ಕಳೆದ ಎರಡು ತಿಂಗಳಿನಿಂದ ಕನ್ನಡದಲ್ಲಿಯೇ ವಾರಕ್ಕೆ ಕನಿಷ್ಟ 5-6 ಸಿನಿಮಾಗಳಿಂದ ಗರಿಷ್ಟ 10-12 ಸಿನಿಮಾಗಳವರೆಗೆ ಬಿಡುಗಡೆಯಾಗುತ್ತಿರುವುದರಿಂದ, ಪರಭಾಷಾ ಸಿನಿಮಾಗಳಿಗಿಂತ ಹೆಚ್ಚಾಗಿ ನಮ್ಮ ಸಿನಿಮಾಗಳ ನಡುವೆಯೇ ಪೈಪೋಟಿ ಹೆಚ್ಚಾಗುತ್ತಿದೆ. ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿರುವುದರಿಂದ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ ಗಳಲ್ಲೂ ಸಾಕಷ್ಟು ಶೋಗಳು ಸಿಗುತ್ತಿಲ್ಲ. ಅದರಲ್ಲೂ ಬಹುತೇಕ ಹೊಸಬರ ಸಿನಿಮಾಗಳಿಗೆ ಸಿಂಗಲ್‌ ಸ್ಕ್ರೀನ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ದಿನಕ್ಕೆ ಒಂದು ಶೋ ಸಿಕ್ಕರೂ ಅದು ದೊಡ್ಡ ವಿಷಯ ಎಂಬಂತಾಗಿದೆ.

ಇಂಥ ಸಂದರ್ಭದಲ್ಲಿ ಅತಿಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿವೆ ಎಂದು ಬೀಗುವುದೋ ಅಥವಾ ಬಿಡುಗಡೆಯಾದ ಸಿನಿಮಾಗಳು ಗೆಲ್ಲುತ್ತಿಲ್ಲ ಎಂದು ಕೊರಗುವುದೋ ಯಾವುದೂ ಅರ್ಥವಾಗದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ಚಿತ್ರರಂಗದ ಮಂದಿ.

Advertisement

 ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next