ಪೃಥ್ವಿ ಅಂಬಾರ್ ನಾಯಕರಾಗಿ ನಟಿಸಿರುವ “ಶುಗರ್‌ಲೆಸ್’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. “ಶುಗರ್‌ಲೆಸ್’ ಚಿತ್ರಕ್ಕೆ ಶಶಿಧರ್ ಕೆ.ಎಂ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದು, ಚಿತ್ರವನ್ನು ಜುಲೈ 08ಕ್ಕೆ ತೆರೆಗೆ ತರಲು ನಿರ್ಧರಿಸಿದ್ದಾರೆ.
ವಿಭಿನ್ನ ಟೈಟಲ್ ಹೊಂದಿರುವ ಈ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಇರೋದಂತು ಸುಳ್ಳಲ್ಲ. ಯಾಕೆ ಈ “ಶುಗರ್‌ಲೆಸ್’ ಟೈಟಲ್ ಎಂಬ ಪ್ರಶ್ನೆಯನ್ನು ನಿರ್ದೇಶಕರ ಮುಂದಿಟ್ಟರೆ, “ಅವರಿಂದ ಬರುವ ಉತ್ತರ ಹೀಗಿದೆ, “ನಮ್ಮ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದು ಡಯಾಬಿಟಿಕ್ (ಸಕ್ಕರೆ ಖಾಯಿಲೆ) ಸುತ್ತ ನಡೆಯುವ ಸಿನಿಮಾ. ಹಾಗಾಗಿ ಸಿನಿಮಾದ ಸಬ್ಜೆಕ್ಟ್ ಗೆ ಹೊಂದಾಣಿಕೆಯಾಗುತ್ತದೆ ಅನ್ನೋ ಕಾರಣಕ್ಕೆ ಈ ಸಿನಿಮಾಕ್ಕೆ “ಶುಗರ್‌ಲೆಸ್’ ಅಂಥ ಟೈಟಲ್ ಇಟ್ಟಿದ್ದೇವೆ. ಚಿಕ್ಕ
ವಯಸ್ಸಿನಲ್ಲಿ ಶುಗರ್ ಬಂದ ಹುಡುಗನೊಬ್ಬನ ಜೀವನ ಹೇಗಿರುತ್ತದೆ. ಅವನ ಜೀವನದಲ್ಲಿ ಡಯಾಬಿಟಿಕ್‌ನಿಂದ ಏನೇನು ತಿರುವುಗಳು ಸಿಗುತ್ತದೆ ಎನ್ನುವುದರ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ’ ಎನ್ನುತ್ತಾರೆ.
ಇದನ್ನೂ ಓದಿ:ಶಿವಣ್ಣನ ಚಿತ್ರಕ್ಕೆ ಅರ್ಜುನ್ ಜನ್ಯ ನಿರ್ದೇಶನ
“ಭಾರತದಲ್ಲಿ ಇಲ್ಲಿಯವರೆಗೆ ನೂರಾರು ವಿಷಯಗಳ ಮೇಲೆ ಸಾವಿರಾರು ಸಿನಿಮಾಗಳು ಬಂದಿವೆ. ಆದ್ರೆ ಡಯಾಬಿಟಿಕ್ (ಶುಗರ್) ಕುರಿತು ಯಾವುದೇ ಸಿನಿಮಾಗಳು ಬಂದಿಲ್ಲ. ನಮಗೆ ಗೊತ್ತಿರುವಂತೆ ಇಡೀ ಭಾರತದಲ್ಲೇ ಡಯಾಬಿಟಿಕ್ ಸಬೆjಕ್ಟ್ ಮೇಲೆ ಬರುತ್ತಿರುವ ಮೊದಲ ಸಿನಿಮಾ ನಮ್ಮದು. ಸಾಮಾನ್ಯವಾಗಿ ಡಯಾಬಿಟಿಕ್ ವಿಷಯ ಅಂದ್ರೆ, ಬಹುತೇಕರು ತುಂಬ ಸೀರಿಯಸ್ ಆಗುತ್ತಾರೆ. ಆದ್ರೆ ನಾವು ಸಿರಿಯಸ್ ವಿಷಯವಾದ್ರೂ ಅದನ್ನು ಹ್ಯೂಮರಸ್ ಆಗಿ, ನೋಡುಗರಿಗೆ ಮುಟ್ಟುವಂತೆ ತೆರೆಮೇಲೆ ತರುತ್ತಿದ್ದೇವೆ. ಇದರಲ್ಲಿ ಲವ್, ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ ಜೊತೆಗೊಂದು ಮೆಸೇಜ್, ಹೀಗೆ ಎಂಟರ್‌ಟೈನ್ಮೆಂಟ್‌ಗೆ ಏನೇನು ಎಲಿಮೆಂಟ್ಸ್ ಇರಬೇಕೋ, ಅದೆಲ್ಲವೂ “ಶುಗರ್‌ಲೆಸ್’ನಲ್ಲಿದೆ’ ಎನ್ನುತ್ತಾರೆ ನಿರ್ಮಾಪಕ ಕಂ ನಿರ್ದೇಶಕ ಶಶಿಧರ್ ಕೆ.ಎಂ.
ಪೃಥ್ವಿ ಅಂಬಾರ್, ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ, ಧರ್ಮಣ್ಣ ಕಡೂರ್, ಎಸ್. ನಾರಾಯಣ್, ನವೀನ್ ಪಡೀಲ್, ಪದ್ಮಜಾ ರಾವ್, ಜತ್ತಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಲವಿತ್ ಚಾಯಾಗ್ರಹಣ, ಅನೂಪ್, ರವಿಚಂದ್ರನ್ ಸಂಕಲನ, ಗುರು ಕಶ್ಯಪ್ ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.