ಫೆ. 24ರಂದು ತೆರೆ ಕಂಡಿರುವ (ಕಳೆದ ಶುಕ್ರವಾರ) ಬಿಡುಗಡೆಯಾಗಿರುವ “ಸೌತ್ ಇಂಡಿಯನ್ ಹೀರೊ’ ಚಿತ್ರಕ್ಕೆ ಪ್ರೇಕ್ಷಕರು, ವಿಮರ್ಶಕರು ಮತ್ತು ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. “ಸೌತ್ ಇಂಡಿಯನ್ ಹೀರೊ’ ಬಿಡುಗಡೆಯಾದ ಬಹುತೇಕ ಎಲ್ಲ ಕೇಂದ್ರಗಳಲ್ಲಿ ಹೌಸ್‌ಫುಲ್‌ಪ್ರದರ್ಶನ ಕಾಣುತ್ತಿದ್ದು, ಚಿತ್ರತಂಡದ ಮುಖದಲ್ಲಿ ನಗು ತರಿಸಿದೆ. ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವಂತೆಯೇ, ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದಗಳನ್ನು ತಿಳಿಸಿದೆ.
ಮೊದಲಿಗೆ “ಸೌತ್ ಇಂಡಿಯನ್ ಹೀರೊ’ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದ ನಿರ್ದೇಶಕ ನರೇಶ್ ಕುಮಾರ್, “ಎಲ್ಲ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ನೋಡಿದವರಿಂದ ಒಳ್ಳೆಯ ವಿಮರ್ಶೆ, ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ಸಿನಿಮಾದ ಮಧ್ಯಂತರ ಮತ್ತು ಕ್ಲೆಮಾಕ್ಸ್ ಬಗ್ಗೆಯೇ ಆಡಿಯನ್ಸ್ ಮೆಚ್ಚಿ ಮಾತಾಡುತ್ತಿದ್ದಾರೆ. ಚಿತ್ರರಂಗದ ಪ್ರತಿಯೊಬ್ಬ ಹೀರೊಗಳು ಈ ಸಿನಿಮಾವನ್ನು ನೋಡಲೇಬೇಕು. ಹಾಗಾಗಿ ಇಂಡಸ್ಟಿಯ ಎಲ್ಲಾ ಹೀರೋಗಳಿಗೂ ಈ ಸಿನಿಮಾವನ್ನು ತೋರಿಸುವ ಯೋಚನೆಯಿದೆ. ನಾವು ದುಡ್ಡಿಗಾಗಿ ಈ ಸಿನಿಮಾ ಮಾಡಿಲ್ಲ. ಅವಕಾಶಕ್ಕಾಗಿ ಕಾಯುತ್ತಿರುವ ಹೊಸಬರಿಗಾಗಿ ಈ ಸಿನಿಮಾ ನಿರ್ಮಿಸಿದ್ದೇವೆ. ಬಿಡುಗಡೆಯಾದ ನಂತರ ನಟರಾದ ಉಪೇಂದ್ರ, ತಮಿಳು ನಟ ಸಿಂಬು, ನಿರ್ದೇಶಕ ರಾಮ್ ಗೋಪಾಲ್ ವರ್ಮ, ಪ್ರದೀಪ್ ರಂಗನಾಥನ್ ಹೀಗೆ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಇಂಡಸ್ಟಿಯಿಂದ ಹಲವರು ಪೋನ್ ಮಾಡಿ ವಿಶ್ ಮಾಡಿದ್ದಾರೆ. ಬೇರೆ ಭಾಷೆಗಳ ಡಬ್ಬಿಂಗ್ ಬಗ ಮಾತುಕಥೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾದ ಗಳಿಕೆ ಕೂಡ ಏರಿಕೆಯಾಗುತ್ತಿದೆ’ ಎಂದರು.
ಇದನ್ನೂ ಓದಿ:ಮುಕೇಶ್ ಅಂಬಾನಿ ಮತ್ತು ಕುಟುಂಬಕ್ಕೆ ದೇಶ, ವಿದೇಶದಲ್ಲೂ ಝಡ್ ಪ್ಲಸ್ ಭದ್ರತೆ ನೀಡಿ: ಸುಪ್ರೀಂ
ನಿರ್ಮಾಪಕಿ ಶಿಲ್ಪಾ ಮಾತನಾಡಿ, “ಕೋವಿಡ್ ಲಾಕ್‌ಡೌನ್ ವೇಳೆ ಈ ಕಥೆ ಕೇಳಿದ್ದೆ. ಕಥೆ ಇಷ್ಟವಾಗಿ ಕೊನೆಗೆ ನಾವೇ ನಿರ್ಮಾಣ ಮಾಡಿದೆವು. ನಮ್ಮ ಬ್ಯಾನರ್‌ನ ಮೊದಲ ಸಿನಿಮಾಗೆ ಇಷ್ಟೊಂದು ದೊಡ್ಡ ರೆಸ್ಪಾನ್ಸ್, ಸಪೋರ್ಟ್ ಸಿಕ್ಕಿದ್ದು ಖುಷಿಯಾಗಿದೆ. ಕಲಾವಿದರು ಪ್ರತಿ ಪಾತ್ರಗಳಿಗೂ ಜೀವ ತುಂಬಿ ಅಭಿನಯಿಸಿದ್ದಾರೆ. ಅವರ ಪಾತ್ರಗಳು ನೋಡುಗರ ಮನಸ್ಸಿನಲ್ಲಿ ಉಳಿದು, ಸಿನಿಮಾ ಎಮೋಷನ್ ಆಗಿ ಕನೆಕ್ಟ್ ಆಗುತ್ತಿದೆ. ವಯಸಿನ ಮಿತಿ ಇಲ್ಲದೆ ಎಲ್ಲರೂ ಸಿನಿಮಾ ನೋಡುತ್ತಿದ್ದಾರೆ’ ಎಂದು ಹೇಳಿದರು.
ನಾಯಕ ಸಾರ್ಥಕ್ ಮಾತನಾಡುತ್ತ, “ಇತ್ತೀಚಿನ ದಿನಗಳಲ್ಲಿ ಒಂದು ಹೊಸಬರ ಸಿನಿಮಾಗೆ ಇಷ್ಟೊಂದು ಬಿಗ್ ರೆಸ್ಪಾನ್ಸ್ ಸಿಕ್ಕಿರುವುದು ತುಂಬಾ ಅಪರೂಪ. ಚಿತ್ರಕ್ಕೆ ಇಷ್ಟು ದೊಡ್ಡ ರೇಟಿಂಗ್ಸ್ ಬಂದಿರುವುದು ಇಡೀ ದೇಶಕ್ಕೆ ರೀಚ್ ಆಗಿದೆ. ಬೇರೆ ಬೇರೆ ಭಾಷೆಯ ನನ್ನ ಒಂದಷ್ಟು ಸ್ನೇಹಿತರು, ಫ್ಯಾನ್ಸ್ ಬೆಂಗಳೂರಿಗೆ ಬಂದು ನಮ್ಮ ಸಿನಿಮಾ ನೋಡಿದ್ದಾರೆ’ ಎಂದರು.
ನಾಯಕಿಯರಾದ ಕಾಶಿಮಾ ರಫಿ, ಊರ್ವಶಿ, ವಿಜಯ್ ಚೆಂಡೂರ್ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆ, ಖುಷಿಯನ್ನು ಹಂಚಿಕೊಂಡರು.