ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಹತ್ತಾರು ಸಿನಿಮಾಗಳಲ್ಲಿ ಹಾಸ್ಯ ನಟ ನಾಗಿ ಪ್ರೇಕ್ಷಕರ ಮನರಂಜಿಸಿರುವ ನಟ ಧರ್ಮಣ್ಣ ಕಡೂರು, ಇತ್ತೀಚೆಗೆ “ರಾಜಯೋಗ’ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಎಂಟ್ರಿಯಾಗಿದ್ದು ನಿಮಗೆ ಗೊತ್ತಿರಬಹುದು. ಇದೀಗ ಧರ್ಮಣ್ಣ ಕಡೂರು ನಾಯಕ ನಟನಾಗಿ ನಟಿಸಿರುವ “ರಾಜಯೋಗ’ ಸಿನಿಮಾ ಸದ್ದಿಲ್ಲದೆ ಐವತ್ತು ದಿನಗಳನ್ನು ಪೂರೈಸಿದೆ.
ಔಟ್ ಆ್ಯಂಡ್ ಔಟ್ ಕಾಮಿಡಿ ಕಂ ಫ್ಯಾಮಿಲಿ ಕಥಾಹಂದರ ಹೊಂದಿರುವ “ರಾಜಯೋಗ’ ಸಿನಿಮಾವನ್ನು ಲಿಂಗರಾಜ ಉಚ್ಚಂಗಿದುರ್ಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, “ಶ್ರೀರಾಮರತ್ನ ಪ್ರೊಡಕ್ಷನ್ಸ್’ ಬ್ಯಾನರ್‌ನಡಿ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆ. ಎನ್, ಅರ್ಜುನ್ ಅಣತಿ, ಹೊನ್ನಪ್ಪ ಕಡೂರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಇನ್ನು ತಾನು ನಾಯಕ ನಟನಾಗಿ ಅಭಿನಯಿಸಿರುವ ಚೊಚ್ಚಲ ಸಿನಿಮಾ “ರಾಜಯೋಗ’ 50 ದಿನಗಳನ್ನು ಪೂರೈಸಿದ ಖುಷಿಯನ್ನು ಹಂಚಿಕೊಂಡಿರುವ ನಟ ಧರ್ಮಣ್ಣ ಕಡೂರು, “ಇದೊಂದು ಕಂಟೆಂಟ್ ಆಧಾರಿತ ಸಿನಿಮಾ. ಈ ಸಿನಿಮಾದಲ್ಲಿ ಕಥೆಯೇ ಹೀರೋ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ ಅಷ್ಟೇ. ಪ್ರಾಮಾಣಿಕವಾಗಿ ದುಡಿದರೆ ಖಂಡಿತವಾಗಿಯೂ “ರಾಜಯೋಗ’ ಬಂದೇ ಬರುತ್ತದೆ ಎನ್ನುವುದನ್ನು ನಿರ್ದೇಶಕರು ತುಂಬ ಸೊಗಸಾಗಿ ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಇದೊಂದು ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯಿರುವ ಸಿನಿಮಾವಾದರೂ, ಎಲ್ಲರಿಗೂ ಮನಮುಟ್ಟು ತ್ತಿದೆ. ಸಮಾಜ, ಸಂಬಂಧ, ಸಂಸಾರ ಎಲ್ಲದರ ಬಗ್ಗೆಯೂ ಸಿನಿಮಾದಲ್ಲಿ ಹೇಳಿದ್ದೇವೆ. ಸಿನಿಮಾ ನೋಡಿದವರು ಮೆಚ್ಚಿಕೊಂಡು ಪ್ರಶಂಸಿಸುತ್ತಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಸಿನಿಮಾ 50 ದಿನ ಯಶಸ್ವಿಯಾಗಿ ಪೂರೈಸಿದೆ. ಗ್ರಾಮೀಣ ಭಾಗದಲ್ಲೂ ಜನ ಸಿನಿಮಾವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ನಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ’ ಎನ್ನುತ್ತಾರೆ.