ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಯುವ ಪ್ರತಿಭೆಗಳಾದ ರಾಘವ್ ಮತ್ತು ಸಂಜನಾ ಬುರ್ಲಿ ಜೋಡಿಯಾಗಿ ಅಭಿನಯಿಸಿರುವ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದಲ್ಲಿ ಯಮುನಾ ಶ್ರೀನಿಧಿ, ಲತಾ ಗಿರೀಶ್, ರೇಖಾ, ಗೋಪಿನಾಥ್ ಭಟ್, ಚಿರಾಗ್, ಪ್ರದೀಪ್ ತಿಪಟೂರು, ಗುರು ಹೆಗಡೆ, ಯಶಸ್ವಿ ಶಂಕರ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನೊಂದು ವಿಶೇಷವೆಂದರೆ, ಇತ್ತೀಚೆಗಷ್ಟೇ ಮೇಲುಕೋಟೆ ಶಾಸಕರಾಗಿರುವ ದರ್ಶನ್ ಪುಟ್ಟಣ್ಣಯ್ಯ ಕೂಡ ಸಿನಿಮಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. “ಸಾನ್ವಿ ಪಿಕ್ಚರ್ ಆ್ಯಂಡ್ ಆ್ಯನಿಮೇಶನ್ಸ್’ ಬ್ಯಾನರಿನಲ್ಲಿ ಯಶಸ್ವಿ ಶಂಕರ್ ಹಾಗೂ ಸವಿತಾ ಯಶಸ್ವಿ ನಿರ್ಮಿಸಿರುವ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾಕ್ಕೆ ಎಂ. ಎನ್ ಶ್ರೀಕಾಂತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.
“ಒಂದಷ್ಟು ನೈಜ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ. ಒಂದು ಸಹಜ ಸುಂದರ ಪ್ರೇಮಕಥೆಯ ಜೊತೆಗೆ, ನೋಡುಗರಿಗೆ ಥ್ರಿಲ್ಲಿಂಗ್ ನೀಡುವಂಥ ಹಲವು ವಿಷಯಗಳು ಸಿನಿಮಾದಲ್ಲಿದೆ. ಲವ್, ಆ್ಯಕ್ಷನ್, ಸಸ್ಪೆನ್ಸ್, ಎಮೋಶನ್ಸ್ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಸಿನಿಮಾದಲ್ಲಿದೆ’ ಎಂಬುದು ಕಥಾಹಂದರದ ಬಗ್ಗೆ ಚಿತ್ರತಂಡ ಮಾತು.
ಈಗಾಗಲೇ ಬಿಡುಗಡೆಯಾಗಿರುವ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದ ಟೈಟಲ್ ಪೋಸ್ಟರ್, ಟೀಸರ್ ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅಷ್ಟೇ ಅಲ್ಲದೆ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆಯಾಗಿವೆ.
Related Articles
ಬಿಡುಗಡೆಗೂ ಮೊದಲೇ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಥಿಯೇಟರ್‌ನಲ್ಲೂ ನೋಡುಗರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.
“ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದ ಹಾಡುಗಳಿಗೆ ನವನೀತ್ ಚಾರಿ ಸಂಗೀತ ಸಂಯೋಜಿಸಿದ್ದು, ಹಾಡುಗಳಿಗೆ ಸೋನು ನಿಗಂ, ಅನುರಾಧಾ ಭಟ್, ನವೀನ್ ಸಜ್ಜು, ಹರಿಣಿ, ಧಾಮಿನಿ ಮೊದಲಾದವರು ಧ್ವನಿಯಾಗಿದ್ದಾರೆ. ಚಿತ್ರಕ್ಕೆ ವಿಶ್ವಜೀತ್ ರಾವ್ ಛಾಯಾಗ್ರಹಣವಿದೆ. ಚಿತ್ರಕ್ಕೆ ಸೆನ್ಸಾರ್‌ನಿಂದ “ಯು/ಎ’ ಪ್ರಮಾಣಪತ್ರ ಸಿಕ್ಕಿದೆ. ಕಳೆದ ಕೆಲ ದಿನಗಳಿಂದ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಇಂದು (ಜೂ. 2) ಚಿತ್ರವನ್ನು ರಾಜ್ಯಾದ್ಯಂತ ಸುಮಾರು 50ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ತರುತ್ತಿದೆ.