ಗುರುದೇಶಪಾಂಡೆ ನಿರ್ಮಾಣ, ನಿರ್ದೇಶನದ “ಪೆಂಟಗನ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಏಪ್ರಿಲ್ 7ರಂದು ಬಿಡುಗಡೆಯಾಗುತ್ತಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಇದರಲ್ಲಿ ಏಕಕಾಲಕ್ಕೆ ಐದು ಕಥೆಗಳನ್ನು ತೆರೆಮೇಲೆ ಹೇಳಲಾಗುತ್ತಿದೆ. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.
ಇನ್ನು, “ಪೆಂಟಗನ್’ ಸಿನಿಮಾದ ಮೂರನೇ ಕಥೆಯಲ್ಲಿ ಬರುವ “ಕಾಮನಬಿಲ್ಲು ಮೂಡುತಿದೆ…’ ಎಂಬ ರೊಮ್ಯಾಂಟಿಕ್ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ.
ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆಗೆ ನಾಗಾರ್ಜುನ ಶರ್ಮಾ ಸಾಹಿತ್ಯವಿದೆ. ಸಂತೋಷ ವೆಂಕಿ ಮತ್ತು ಇಂಚರ ರಾವ್ ಗೀತೆಗೆ ಧ್ವನಿಯಾಗಿದ್ದಾರೆ.
ರಾಘು ಶಿವಮೊಗ್ಗ ನಿರ್ದೇಶನದಲ್ಲಿ ಮೂಡಿಬಂದಿರುವ “ಪೆಂಟಗನ್’ ಮೂರನೇ ಅಧ್ಯಾಯದಲ್ಲಿ ಪ್ರಕಾಶ್ ಬೆಳವಾಡಿ, ತನಿಷಾ ಕುಪ್ಪಂದ, ಪ್ರೇರಣಾ, ಸಾಗರ್, ರಾಕೇಶ್ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಥೆಯಲ್ಲಿ ಸಾಮಾಜಿಕ ಜಾಲತಾಣದ ಮೋಸ, ಅಪರಾಧ ಜಗತ್ತು, ಯುವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ ಎಂಬುದು ಚಿತ್ರತಂಡ ಮಾಹಿತಿ. ಈ ಅಧ್ಯಾಯಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣ, ವೆಂಕಟೇಶ ಯುಡಿವಿ ಸಂಕಲನವಿದೆ.
“ಪೆಂಟಗನ್’ ಸಿನಿಮಾದಲ್ಲಿ ಬರುವ ಒಂದು ಕಥೆಯನ್ನು ಗುರು ದೇಶಪಾಂಡೆ ನಿರ್ದೇಶಿಸಿದರೆ, ಇನ್ನುಳಿದ ನಾಲ್ಕು ಕಥೆಗಳಿಗೆ ಆಕಾಶ್ ಶ್ರೀವತ್ಸ, ರಾಘು ಶಿವಮೊಗ್ಗ, ಚಂದ್ರ ಮೋಹನ್ ಮತ್ತು ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಐದೂ ಕಥೆಗಳ ಕಥಾವಸ್ತು ಬೇರೆಯಾಗಿದ್ದರೂ, ಎಲ್ಲದರಲ್ಲೂ ಒಂದು ಸಾಮಾನ್ಯ ವಿಷಯ ಅಡಕವಾಗಿದೆ. ಈ ವಿಷಯವೇ ಎಲ್ಲ ಕಥೆಗಳಿಗೂ ಒಂದು ಕಾಮನ್ ಕೊಂಡಿಯಾಗಿರುತ್ತದೆ.
ತಮ್ಮ ಬ್ಯಾನರ್ ಬಗ್ಗೆ ಮಾತನಾಡುವ ಗುರು ದೇಶಪಾಂಡೆ, “ನಮ್ಮ ಜಿ ಸಿನಿಮಾಸ್ ಕೇವಲ ಮನರಂಜನೆಯ ಸಿನಿಮಾಗಳನ್ನು ಮಾತ್ರ ಮಾಡದೇ, ಚಿಂತನೆ- ಪ್ರಚೋದನೆ ಹಾಗೂ ಪ್ರಚಲಿತ ವಿಷಯಗಳನ್ನು ಸಿನಿಮಾವಾಗಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಹಲವು ನಿರ್ದೇಶಕರನ್ನು, ತಂತ್ರಜ್ಞರನ್ನು ಮತ್ತು ಹೊಸ ಹೊಸ ಕಲಾವಿದರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದೆ. ಪೆಂಟಗನ್ ಸಿನಿಮಾದಲ್ಲೂ ಇದನ್ನು ಮುಂದುವರೆಸಿದೆ’ ಎನ್ನುತ್ತಾರೆ.