“ಶಿವಾನಿ ಫಿಲಂಸ್’ ಬ್ಯಾನರಿನಲ್ಲಿ ಎಂ. ಸಿ. ಎಂ ಆರಾಧ್ಯ ನಿರ್ಮಿಸಿರುವ “ಪರಿಸ್ಥಿತಿ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ಪರಿಸ್ಥಿತಿ’ ಸಿನಿಮಾದ ಟ್ರೇಲರ್ ಮತ್ತು ಆಡಿಯೋವನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್, ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಅರಸ್, ನಿರ್ಮಾಪಕ ಭಾಸ್ಕರ ನಾಯ್ಕ ಮೊದಲಾದ ವರು ಸಮಾರಂಭದಲ್ಲಿ ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು.
ಪ್ರತಿಯೊಬ್ಬರು ಜೀವನದಲ್ಲಿ ಅನೇಕ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಕೆಲ ಪರಿಸ್ಥಿತಿಗಳನ್ನು ನಿಭಾಯಿಸಲು ಆ ವ್ಯಕ್ತಿ ಅಥವಾ ಆತನ ಸುತ್ತಲೂ ಇರುವ ಜನ ತೆಗೆದುಕೊಳ್ಳುವ ನಿರ್ಧಾರಗಳು ಆತನ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಅದೇ ರೀತಿ ರಸ್ತೆಯಲ್ಲಿ ಚಿತ್ರಬಿಡಿಸುತ್ತ ಜೀವನ ಸಾಗಿಸುವ ಗಣಪತಿ ಎಂಬ ಚಿತ್ರ ಕಲಾವಿದನೊಬ್ಬನ ಜೀವನದಲ್ಲಿ ಅನಿರೀಕ್ಷಿತವಾಗಿ ಬರುವ ಪರಿಸ್ಥಿತಿ’ಯೊಂದು ಅವನನ್ನು ಬೀದಿಗೆ ಬರುವಂತೆ ಮಾಡುತ್ತದೆ. ಅದರಿಂದ ಆತ ಹೇಗೆಲ್ಲ ಬಳಲುತ್ತಾನೆ ಎಂಬುದು ಪರಿಸ್ಥಿತಿ’ ಸಿನಿಮಾದ ಕಥೆಯ ಒಂದು ಎಳೆ. ಎಂಬುದು ಚಿತ್ರತಂಡದ ಮಾತು.
“ಹಾರ್ಟ್ ಬೀಟ್’ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಆರ್. ಎಸ್. ಗಣೇಶ ನಾರಾಯಣ್ ಮುಖ್ಯಭೂಮಿಕೆಯಲ್ಲಿ ನಟಿಸಿ, ನಿರ್ದೇಶಿಸಿ, ಸಂಗೀತ ಸಂಯೋಜಿಸಿರುವ “ಪರಿಸ್ಥಿತಿ’ ಸಿನಿಮಾದಲ್ಲಿ ನಮ್ರತಾ, ಅಜಿತ ಕುಮಾರ್, ಸಾಯಿಕೃಷ್ಣ, ಸುಜಯ ಶಾಸ್ತ್ರೀ, ಶಿಲ್ಪಾ, ಜ್ಯೋತಿ ರಾಜನ್, ತಂಗಾಳಿ ನಾಗರಾಜ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Related Articles
“ಪರಿಸ್ಥಿತಿ’ ಚಿತ್ರಕ್ಕೆ ಶ್ರೀ ಕ್ರೇಜಿಮೈಂಡ್ಸ್, ಗೌತಂ ಮನು ಛಾಯಾಗ್ರಹಣ, ವಿಷ್ಣುವರ್ಧನ್ ಮತ್ತು ರಂಜಿತ್ ಕುಮಾರ್ ಸಂಕಲನವಿದೆ. ಸಾಮಾಜಿಕ ಮತ್ತು ಸಾಂಸಾರಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಫೆಬ್ರವರಿ ವೇಳೆಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ