ತನ್ನ ಟೈಟಲ್, ಟ್ರೇಲರ್ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿರುವ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರದ “ಪಂಪ’ ಈ ವಾರ ರಾಜ್ಯಾದ್ಯಂತ ಸುಮಾರು 100 ಕೇಂದ್ರಗಳಲ್ಲಿ ತೆರೆಕಾಣುತ್ತಿದೆ. ಬಿಡುಗಡೆಗೂ ಮುನ್ನ “ಪಂಪ’ನಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾ ಥಿಯೇಟರ್‌ನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು.
“ಕೀ ಕ್ರಿಯೆಶನ್ಸ್’ ಬ್ಯಾನರ್‌ನಲ್ಲಿ ಲಕ್ಷ್ಮೀಕಾಂತ್ ವಿ. ನಿರ್ಮಿಸಿರುವ “ಪಂಪ’ ಚಿತ್ರಕ್ಕೆ ಹಿರಿಯ ನಿರ್ದೇಶಕ ಎಸ್. ಮಹೇಂದರ್ ನಿರ್ದೇಶನವಿದೆ. ಚಿತ್ರದ ಹಾಡುಗಳಿಗೆ ಹಂಸಲೇಖ ಸಾಹಿತ್ಯ-ಸಂಗೀತವಿದೆ.
ಇನ್ನು “ಪಂಪ’ ಬಿಡುಗಡೆಗೂ ಮುನ್ನ ಮಾತನಾಡಿದ ನಿರ್ಮಾಪಕ ಲಕ್ಷ್ಮೀಕಾಂತ್ ವಿ, “ಕನ್ನಡದಲ್ಲಿ “ಪಂಪ’ ಒಂದು ವಿಭಿನ್ನ ಕಥಾಹಂದರದ ಸಿನಿಮಾ. ಪ್ರಸ್ತುತ ಕನ್ನಡದ ವಿಷಯವನ್ನು ಇಟ್ಟುಕೊಂಡು ಸಸ್ಪೆನ್ಸ್ ಕಂ ಕೈ-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಇದು ಕನ್ನಡದವರೇ ಮಾಡಿರುವ, ಕನ್ನಡದವರೇ ನೋಡಬೇಕಾದ, ಅಪ್ಪಟ ಕನ್ನಡ ಸಿನಿಮಾ. ಎಲ್ಲೂ ಡಬಲ್ ಮೀನಿಂಗ್ ಡೈಲಾಗ್ಸ್, ಅಪಹಾಸ್ಯವಿಲ್ಲದೆ, ಮನರಂಜನೆ ಮತ್ತು ಬೋಧನೆ ಎರಡೂ ಇರಬೇಕು ಎನ್ನುವ ಉದ್ದೇಶದಿಂದ “ಪಂಪ’ ಸಿನಿಮಾ ಮಾಡಿದ್ದೇವೆ.
ತಿಂಗಳುಗಳ ಕಾಲ ಚರ್ಚೆ ಮಾಡಿ, ಪ್ರತಿ ಹಂತದಲ್ಲೂ ರಿಸ್ಕ್ ತೆಗೆದುಕೊಂಡು, ಕನ್ನಡದಲ್ಲಿ ಲ್ಯಾಂಡ್ ಮಾರ್ಕ್ ಆಗಿ ಉಳಿಯುವಂಥ ಸದಭಿರುಚಿ ಸಿನಿಮಾ ಮಾಡಿದ್ದೇವೆ ಎಂಬ ತೃಪ್ತಿ ನಮಗಿದೆ. ಇಂಥ ಸಿನಿಮಾಗಳನ್ನು ಕನ್ನಡಿಗರು ಗೆಲ್ಲಿಸಬೇಕು. ಇಂಥ ಸಿನಿಮಾ ಗೆದ್ದರೆ, ಮುಂದೆ ಇಂಥದ್ದೇ ಪ್ರಚಲಿತ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡಲು ನಮಗೂ ಸ್ಫೂರ್ತಿ, ಪ್ರೇರಣೆ, ಸಾಮರ್ಥ್ಯ ಬರುತ್ತದೆ’ ಎನ್ನುತ್ತಾರೆ.
“ಇತ್ತೀಚೆಗೆ “ಪಂಪ’ ಸಿನಿಮಾವನ್ನು ಚೆನ್ನೈನಲ್ಲಿ ನೋಡಿದ ಒಂದಷ್ಟು ತಮಿಳು ತಂತ್ರಜ್ಞರು ಸಾಕಷ್ಟು ಸಿನಿಮಾದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿ ದ್ದಾರೆ. ಒಂದು ಭಾಷೆಯ ವಿಷಯವನ್ನು ಇಟ್ಟುಕೊಂಡು ಈ ಥರದಲ್ಲೂ ಸಿನಿಮಾ ಮಾಡಬಹುದು ಅನ್ನೋದನ್ನು “ಪಂಪ’ ಸಿನಿಮಾದಲ್ಲಿ ತುಂಬ ಚೆನ್ನಾಗಿ ತೋರಿಸಿದ್ದೀರಿ ಎಂದು ಅನೇಕರ ಪರಭಾಷಿಕರೂ ಬೆನ್ನುತಟ್ಟಿದ್ದಾರೆ. ಇನ್ನೇನಿದ್ದರೂ, ಕನ್ನಡಿಗರು ನಮ್ಮ ಕೈ ಹಿಡಿಯಬೇಕು. ಇಂಥ ಸಿನಿಮಾ ಸೋತರೆ ಅದು ನನ್ನ ವೈಯಕ್ತಿಕ ಸೋಲಲ್ಲ, ಕನ್ನಡಿಗರ ಸೋಲು’ ಎನ್ನುವುದು ಲಕ್ಷ್ಮೀಕಾಂತ್ ಮಾತು.
“ಪಂಪ’ ಚಿತ್ರದಲ್ಲಿ ಕೀರ್ತಿ ಭಾನು, ಸಂಗೀತಾ ಶೃಂಗೇರಿ, ಅರವಿಂದ ರಾವ್, ಆದಿತ್ಯ ಶೆಟ್ಟಿ, ರಾಘವ್ ನಾಯಕ್, ಕೃಷ್ಣ ಭಟ್, ರೇಣುಕಾ, ರವಿ ಭಟ್, ಶ್ರೀನಿವಾಸ ಪ್ರಭು, ಪೃಥ್ವಿರಾಜ್, ಚಿಕ್ಕ ಹೆಜ್ಜಾಜಿ ಮಹದೇವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಜಿ. ಎಸ್. ಕಾರ್ತಿಕ ಸುಧನ್