ಚಿಕ್ಕಮಗಳೂರು ಜಿಲ್ಲೆಯ ಕಾಡು ಮಧ್ಯದಲ್ಲಿರುವ ಪೊಲೀಸ್ ಠಾಣೆಗೆ ಹೊಸದಾಗಿ ನೇಮಕವಾದ ಎಸ್‌ಐ ಮುಂದೆ ಹುಡುಗಿಯೊಬ್ಬಳು ತನ್ನ ಮೇಲೆ ರೇಪ್ ಆಗಿದೆ ಎಂದು ದೂರು ನೀಡುತ್ತಾಳೆ. ಜನ ಸೇವೆಯೇ ಗುರಿ ಎಂದುಕೊಂಡಿರುವ ಎಸ್‌ಐ ತನಿಖೆ ಆರಂಭಿಸುತ್ತಾನೆ. ಅಲ್ಲಿಂದ ಸಿನಿಮಾದ ಹಾದಿ ಕೂಡಾ ಬದಲಾಗುತ್ತಾ ಹೋಗುತ್ತದೆ. ಹೊಸ ಹೊಸ ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಅಷ್ಟಕ್ಕೂ ಆ ಅಂಶಗಳು ಏನು ಎಂಬ ಕುತೂಹಲ ನಿಮಗಿದ್ದರೆ ನೀವು ಈ ವಾರ ತೆರೆಕಂಡಿರುವ “ಮೇರಿ’ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.
ವಾರ ವಾರ ಚಿತ್ರಮಂದಿರಕ್ಕೆ ಬರುವ ಹೊಸಬರ ಸಿನಿಮಾಗಳು ಒಂದಷ್ಟು ಹೊಸತನವನ್ನು ಪ್ರಯತ್ನಿಸುತ್ತಿವೆ. ತಮಗೆ ಇರುವ ಸೀಮಿತ ಅವಕಾಶವನ್ನು ಸದು ಪಯೋಗಪಡಿಸಿಕೊಳ್ಳುವ ಮೂಲಕ ಭರವಸೆ ಮೂಡಿಸುತ್ತಿರುವುದಂತೂ ಸುಳ್ಳಲ್ಲ. “ಮೇರಿ’ ಕೂಡಾ ಅಂತಹ ಒಂದು ಪ್ರಯತ್ನ ಎನ್ನಬಹುದು.
ನಿರ್ದೇಶಕ ಮನೋಜ್ ಒಂದು ಥ್ರಿಲ್ಲರ್ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಹುಡುಗಿಯೊಬ್ಬಳು ಪೊಲೀಸ್ ಸ್ಟೇಷನ್‌ಗೆ ಎಂಟ್ರಿಕೊಡುವುದರಿಂದ ಆರಂಭವಾಗುವ ಸಿನಿಮಾ ಬಹುತೇಕ ಅಲ್ಲೇ ಸಾಗುತ್ತದೆ. ಒಂದು ಥ್ರಿಲ್ಲರ್ ಸಿನಿಮಾವಾಗಿ ಟ್ವಿಸ್ಟ್-ಟರ್ನ್ಗಳೊಂದಿಗೆ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನವನ್ನು ನೀಟಾಗಿ ಮಾಡಲಾಗಿದೆ. ಆರಂಭದಲ್ಲಿ ಇದೊಂದು ಶೋಷಣೆಗೆ ಒಳಗಾದ ಹೆಣ್ಣೊಬ್ಬಳ ಕಥೆ ಎಂದು ಭಾಸವಾಗುವ ಸಿನಿಮಾ, ಮುಂದೆ ಸಾಗುತ್ತಾ ಹೊಸ ಬಣ್ಣವನ್ನು ಪಡೆದುಕೊಳ್ಳುತ್ತದೆ.
ಪ್ರೇಕ್ಷಕ ಏನು ಊಹಿಸಿಕೊಳ್ಳುತ್ತಾನೋ, ತೆರೆಮೇಲೆ ಅದಕ್ಕೆ ವಿರುದ್ಧವಾಗಿ ನಡೆಯುತ್ತಿರುವುದೇ ಸಿನಿಮಾದ ಪ್ಲಸ್ ಪಾಯಿಂಟ್. ಯಾವುದೇ ಪಾತ್ರಗಳಿಗೂ ಅತಿಯಾದ ಬಿಲ್ಡಪ್, ಅನವಶ್ಯಕ ಎಳೆದಾಟಗಳಿಲ್ಲದೇ, ಇರುವ ಪಾತ್ರಗಳಲ್ಲಿ ಇಡೀ ಸಿನಿಮಾವನ್ನು ಎಲ್ಲೂ ಬೋರ್ ಆಗದಂತೆ ಕಟ್ಟಿಕೊಡಲಾಗಿದೆ. ಆ ಮಟ್ಟಿಗೆ ಹೊಸಬರ ಪ್ರಯತ್ನವನ್ನು ಮೆಚ್ಚಬಹುದು.
Related Articles
ಚಿತ್ರದಲ್ಲಿ ವಿಕಾಶ್ ಉತ್ತಯ್ಯ, ಅನೂಷ ಕೃಷ್ಣ, ವಿಕ್ಕಿ, ತೇಜಸ್ವಿನಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಎಸ್‌ಐ ಆಗಿ ನಟಿಸಿರುವ ವಿಕಾಶ್ ಉತ್ತಯ್ಯ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಸುಮಂತ್, ದೀಪಕ್ ಗೌಡ ನಟಿಸಿದ್ದಾರೆ.