ಕನ್ನಡ ಚಿತ್ರರಂಗಕ್ಕೆ ಬಾಲನಟನಾಗಿ ಪರಿಚಯವಾಗಿರುವ, ಇತ್ತೀಚೆಗೆ ಬಿಡುಗಡೆಯಾಗಿದ್ದ ವಾಟ್ಸಾಪ್ ಲವ್ ಹಾಗೂ ರಾಜರಾಣಿ ಸಿನೆಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಯುವನಟ ಜಯಪ್ರಕಾಶ್ ರೆಡ್ಡಿ ಈಗ “ಕರ್ಕಿ’ ಚಿತ್ರದ ಮೂಲಕ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಇನ್ನು “ಕರ್ಕಿ’ ಸಮಾಜಕ್ಕೆ ಸಮಾನತೆಯ ಸಂದೇಶ ನೀಡುವ ಹಾಗೂ ಜಾತಿ ವ್ಯವಸ್ಥೆಯಿಂದ ಕೆಲವು ಪ್ರದೇಶಗಳಲ್ಲಿ ನಡೆಯುತ್ತಿರುವ ಶೋಷಣೆಗಳ ಸುತ್ತ ಸಾಗುವ ಕಥೆಯನ್ನುಹೊಂದಿರುವ ಸಿನೆಮಾ ಎಂಬುದು ಚಿತ್ರತಂಡದ ಮಾತು. ಕೆಳ ವರ್ಗದ ಯುವಕನೊಬ್ಬ ತನ್ನ ಜೀವನದ ಹಾದಿಯಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ, ಅವುಗಳನ್ನೆಲ್ಲ ಮೆಟ್ಟಿ ನಿಂತು ಹೇಗೆ ಸಾಧನೆ ಮಾಡುತ್ತಾನೆ ಎಂಬುದನ್ನು ಕರ್ಕಿ’ ಚಿತ್ರದ ಮೂಲಕ ತೆರೆಮೇಲೆ ಹೇಳಲು ಹೊರಟಿದ್ದೇವೆ. ಇಂಥ ಸಾಕಷ್ಟು ಸೂಕ್ಷ್ಮ ಅಂಶಗಳು ಈ ಸಿನೆಮಾದಲ್ಲಿದೆ. “ಕರ್ಕಿ’ ಎಂಬುದು ಈ ಸಿನೆಮಾದಲ್ಲಿ ಬರುವ ಕಪ್ಪು ಬಣ್ಣದ ನಾಯಿಯ ಹೆಸರು.
ಈ ಸಿನೆಮಾದಲ್ಲಿ ನಾಯಿಗೂ ಒಂದು ಪ್ರಮುಖ ಪಾತ್ರವಿದೆ. ಅದು ಏನು? ಹೇಗೆ ಎಂಬುದನ್ನು ಕರ್ಕಿ’ ಸಿನೆಮಾದಲ್ಲೇ ನೋಡಬೇಕು’ ಎಂಬುದು ಚಿತ್ರದ ನಾಯಕ ನಟ ಜಯ ಪ್ರಕಾಶ್ ರೆಡ್ಡಿ ಮಾತು.
ಸುಮಾರು ಎರಡು ವರ್ಷಗಳಿಂದ “ಕರ್ಕಿ’ ಸಿನೆಮಾದ ಕೆಲಸಗಳು ನಡೆಯುತ್ತಿದ್ದು, ಚಿತ್ರವೀಗ ಬಿಡುಗಡೆಯ ಹಂತಕ್ಕೆ ತಲುಪಿದೆ. ತಮಿಳಿನಲ್ಲಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಪವಿತ್ರನ್, “ಕರ್ಕಿ’ ಸಿನೆಮಾದ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಶಿವಮೊಗ್ಗ ದಾವಣಗೆರೆ, ಹುಬ್ಬಳ್ಳಿ, ಬಂಗಾರಪೇಟೆ, ಕೆಜಿಎಫ್, ಬೆಂಗಳೂರು, ಚನ್ನಪಟ್ಟಣ, ಕೋಲಾರ ಹಾಗೂ ಬಾಗಲಕೋಟೆ ಸುತ್ತಮುತ್ತ “ಕರ್ಕಿ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಾಯಿ ಅಭಿನಯದ ದೃಶ್ಯವನ್ನು ತಿರುನೆಲ್ವೇಲಿಯಲ್ಲಿ ಶೂಟ್ ಮಾಡಲಾಗಿದೆ. ಈಗಾಗಲೇ ಸದ್ದಿಲ್ಲದೆ ಬಹುತೇಕ ತನ್ನ ಕೆಲಸಗಳನ್ನು ಪೂರ್ಣಗೊಳಿಸಿರುವ “ಕರ್ಕಿ’ ಸಿನೆಮಾ ಸೆನ್ಸಾರ್ ನಿಂದ “ಯು/ಎ’ ಪ್ರಮಾಣ ಪಡೆದು ರಿಲೀಸ್ ಗೆ ಸಿದ್ದವಾಗಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.