ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಮಂಸೋರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ಇಂದು (ಆ.15) ಮುಂಜಾನೆ 5.30ರಿಂದ 6.30ರವರೆಗಿನ ಶುಭ ಮುಹೂರ್ತದಲ್ಲಿ ವಧು ಅಖಿಲಾಗೆ ತಾಳಿ ಕಟ್ಟುವ ಮೂಲಕ ಸತಿ-ಪತಿಯಾಗಿದ್ದಾರೆ.
ಜುಲೈನಲ್ಲಿ ಅಖಿಲಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಂಸೋರೆ, ಇಂದು ಗುರು-ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ಕೂಡ ನೆರವೇರಿದೆ.
ಇನ್ನು ಮಂಸೋರೆ ಅವರ ಸಿನಿ ಜೀವನ ನೋಡೋದಾದರೆ, ಇವರು ನಿರ್ದೇಶಿಸಿದ ಮೊದಲ ಸಿನಿಮಾ ‘ಹರಿವು’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತು. ಆ ಚಿತ್ರದಲ್ಲಿ ಸಂಚಾರಿ ವಿಜಯ್ ಅವರು ಪ್ರಮುಖ ಪಾತ್ರ ಮಾಡಿದ್ದರು. ನೈಜ ಘಟನೆ ಆಧರಿಸಿದ ಆ ಸಿನಿಮಾದಲ್ಲಿ ಬಡ ತಂದೆಯ ಕರುಣಾಮಯ ಕಥೆಯನ್ನು ಹೇಳಲಾಗಿತ್ತು.
ನಂತರ ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ಮುಖ್ಯಭೂಮಿಕೆ ನಿಭಾಯಿಸಿದ್ದ ‘ನಾತಿಚರಾಮಿ’ ಚಿತ್ರಕ್ಕೆ ಮಂಸೋರೆ ನಿರ್ದೇಶನ ಮಾಡಿದರು. ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಆ ಸಿನಿಮಾ ಯಶಸ್ವಿ ಆಯಿತು. ಬಳಿಕ ಮಂಸೋರೆ ಆ್ಯಕ್ಷನ್-ಕಟ್ ಹೇಳಿದ್ದು ‘ಆಯಕ್ಟ್ 1978’ ಚಿತ್ರಕ್ಕೆ. ಈ ಸಿನಿಮಾದಲ್ಲಿ ಸರ್ಕಾರಿ ಅಧಿಕಾರಿಗಳ ಲಂಚಾವತಾರವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ.