ಕಳೆದ ವರ್ಷ ಎಂ 31 ಫೋನನ್ನು ಸ್ಯಾಮ್ ಸಂಗ್ ಬಿಡುಗಡೆ ಮಾಡಿತ್ತು. ಆರಂಭಿಕ ಮಧ್ಯಮ ದರ್ಜೆಯ ಫೋನ್ ಗಳಲ್ಲಿ ಅದು ಬಹಳ ಯಶಸ್ಸನ್ನೂ ಕಂಡಿತ್ತು. ಈ ಬಾರಿ ಅದೇ ಆರಂಭಿಕ ಮಧ್ಯಮ ವಲಯದಲ್ಲಿ ಸ್ಯಾಮ್‍ಸಂಗ್ ಎಂ 32 ಎಂಬ ಹೊಸ ಫೋನನ್ನು ಒಂದು ವಾರದ ಹಿಂದೆಯಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ವಾಸ್ತವಿಕ ಬಳಕೆಯಲ್ಲಿ ಹೇಗಿದೆ? ಎಂಬುದರ ವಿವರ ಇಲ್ಲಿದೆ.
ಇದರ ದರ 4 ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 14,999 ರೂ, 6ಜಿಬಿ ರ್ಯಾಮ್ ಮತ್ತು 128 ಜಿಬಿ ಆವೃತ್ತಿಗೆ 16,999 ರೂ. ಇದೆ. ಅಮೆಜಾನ್.ಇನ್ ನಲ್ಲಿ ದೊರಕುತ್ತದೆ. ಪ್ರಸ್ತುತ ಎಸ್‍ಬಿಐ, ಐಸಿಐಸಿಐ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಕೊಂಡರೆ 1250 ರೂ. ರಿಯಾಯಿತಿ ಇದೆ.
ಗಮನ ಸೆಳೆಯುವ ವಿನ್ಯಾಸ: ಈಗೀಗ ಮಧ್ಯಮ ದರ್ಜೆಯ ಫೋನ್‍ಗಳನ್ನೂ ಆಕರ್ಷಕ ವಿನ್ಯಾಸದಲ್ಲಿ ಕೊಡಲು ಸ್ಯಾಮ್‍ಸಂಗ್ ಯತ್ನಿಸುತ್ತಿದೆ. ಎಂ31 ಫೋನು ಸಾದಾ ಸೀದಾ ಇತ್ತು. ಹೊರ ವಿನ್ಯಾಸದಲ್ಲಿ ಯಾವುದೇ ಆಕರ್ಷಕತೆ ಇರಲಿಲ್ಲ. ಇತರ ಬ್ರಾಂಡ್‍ಗಳ ಪೈಪೋಟಿಯನ್ನು ಎದುರಿಸಬೇಕಾಗಿರುವ ಕಾರಣ ಸ್ಯಾಮ್ ಸಂಗ್ ಮುತುವರ್ಜಿ ವಹಿಸುತ್ತಿದೆ. ಈ ಫೋನಿನ ಹಿಂಬದಿ ಕವಚ ಪ್ಲಾಸ್ಟಿಕ್ ನದಾದರೂ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಕಪ್ಪು ಬಣ್ಣದ ಮೇಲೆ ಸಣ್ಣ ಉದ್ದದ ಗೆರೆಗಳುಳ್ಳ ವಿನ್ಯಾಸ ಚೆನ್ನಾಗಿ ಕಾಣುತ್ತದೆ. ಹಿಂಬದಿಯ ಎಡ ಮೂಲೆಯಲ್ಲಿ ನಾಲ್ಕು ಲೆನ್ಸ್ ಗಳ ಕ್ಯಾಮರಾ ಇರಿಸಲಾಗಿದೆ. ಕ್ಯಾಮರಾ ಕೆಳಗೆ ಫ್ಲಾಶ್ ಲೈಟ್ ಇದೆ.
ಮಧ್ಯಮ ವಲಯದಲ್ಲಿ ಉತ್ತಮ ಪರದೆ: 6.4 ಇಂಚಿನ ಫುಲ್ ಎಚ್‍ಡಿ ಪ್ಲಸ್ ಸೂಪರ್ ಅಮೋಲೆಡ್ ಪರದೆ ಹೊಂದಿದೆ. ಇದಕ್ಕೆ 90 ಹರ್ಟ್ಜ್ ರಿಫ್ರೆಶ್ ರೇಟ್ ಇದೆ. ಅಮೋಲೆಡ್ ಪರದೆಗೆ 800 ನಿಟ್ಸ್ ಹೈ ಬ್ರೈಟ್‍ನೆಸ್ ಮೋಡ್ ಇರುವುದರಿಂದಾಗಿ, ಪರದೆ ಹೆಚ್ಚು ಹೊಳೆಯುತ್ತದೆ. ಅಮೋಲೆಡ್ ಸ್ಕ್ರೀನ್ + 90 ಹರ್ಟ್ಜ್ ರಿಫ್ರೆಶ್‍ರೇಟ್ + 800 ನಿಟ್ಸ್ ನಿಂದಾಗಿ ಈ ದರ ಪಟ್ಟಿಯಲ್ಲಿ ಉತ್ತಮ ಸ್ಕ್ರೀನನ್ನು ಈ ಮೊಬೈಲ್ ಹೊಂದಿದೆ ಎನ್ನಬಹುದು. ಜೊತೆಗೆ ಇದಕ್ಕೆ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಕೂಡ ದೆ. ಮುಂಚಿನಿಂದಲೂ ಸ್ಯಾಮ್‍ಸಂಗ್ ತನ್ನ ಮೊಬೈಲ್ ಗಳ ಡಿಸ್‍ಪ್ಲೇ ವಿಷಯದಲ್ಲಿ ಗುಣಮಟ್ಟ ಕಾಯ್ದುಕೊಂಡು ಬಂದಿದೆ. ಹೀಗಾಗಿ ಅನೇಕ ಬ್ರಾಂಡ್‍ಗಳು ಐಪಿಎಸ್ ಎಲ್‍ಸಿಡಿ ಡಿಸ್‍ಪ್ಲೇ ಹಾಕುತ್ತಿದ್ದಾಗಲೂ, ಸ್ಯಾಮ್‍ಸಂಗ್ ಅಮೋಲೆಡ್ ಡಿಸ್‍ಪ್ಲೇ ಬಳಸುತ್ತಿತ್ತು. ಈಗ ಪ್ರತಿಸ್ಪರ್ಧಿ ಕಂಪೆನಿಗಳು ಮಧ್ಯಮ ದರ್ಜೆಯ ಮೊಬೈಲ್‍ಗಳಲ್ಲಿ ಅಮೋಲೆಡ್ ಪರದೆ ಬಳಸಲು ಶುರು ಮಾಡಿವೆ. (ಉದಾ: ರೆಡ್‍ಮಿ ನೋಟ್ 10).
ಮೀಡಿಯಾ ಟೆಕ್ ಹೀಲಿಯೋ ಜಿ80 ಪ್ರೊಸೆಸರ್: ನೀವು ಗಮನಿಸಿರಬೇಕು. ಕಳೆದ ವರ್ಷವಂತೂ ಸ್ಯಾಮ್ ಸಂಗ್ 12 ಸಾವಿರ ರೂ.ಗಳ ಮೊಬೈಲ್‍ನಿಂದ ಹಿಡಿದು, 25 ಸಾವಿರ ರೂ.ಗಳ ಮೊಬೈಲ್‍ವರೆಗೂ ತನ್ನದೇ ತಯಾರಿಕೆಯ ಎಕ್ಸಿನಾಸ್ 9611 ಪ್ರೊಸೆಸರನ್ನೇ ಬಳಸುತ್ತಿತ್ತು. ಎಂ 31 ನಲ್ಲಿಯೂ ಎಕ್ಸಿನಾಸ್ 9611 ಪ್ರೊಸೆಸರ್ ಇತ್ತು. ಈ ಬಾರಿ ಸ್ಯಾಮ್ ಸಂಗ್ ಒಂಚೂರು ಬದಲಾಗಿದೆ! ಎಂ 32 ಗೆ ಮೀಡಿಯಾ ಟೆಕ್ ಕಂಪೆನಿಯ ಹೀಲಿಯೋ ಜಿ80 ಪ್ರೊಸೆಸರ್ ಬಳಸಿದೆ. ಈ ಪ್ರೊಸೆಸರ್ ಅನ್ನು 9 ಸಾವಿರ ರೂ. ದರದ ಮೊಬೈಲ್‍ಗಳಲ್ಲಿ ಬಳಸಲಾಗಿದೆ. (ಉದಾ: ರಿಯಲ್‍ಮಿ ನಾರ್ಜೋ 30ಎ) ಕೆಲವು ಬ್ರಾಂಡ್‍ಗಳು 15 ಸಾವಿರ ದರದಲ್ಲಿ ಜಿ 80ಗಿಂತಲೂ ಉನ್ನತವಾದ ಹೀಲಿಯೋ ಜಿ95 ಪ್ರೊಸೆಸರ್ ಬಳಸಿವೆ (ಉದಾ: ರೆಡ್‍ಮಿ ನೋಟ್ 10ಎಸ್). ಸ್ಯಾಮ್ ಸಂಗ್ ಈ ಮೊಬೈಲ್‍ನಲ್ಲಿ ಉತ್ತಮ ಪರದೆ ಮತ್ತು ಕ್ಯಾಮರಾಗೆ ಆದ್ಯತೆ ನೀಡಿರುವುದರಿಂದ ಪ್ರೊಸೆಸರ್ ಬಳಕೆಯಲ್ಲಿ ಕೊಂಚ ಕಾಂಪ್ರೊಮೈಸ್ ಮಾಡಿಕೊಂಡಿದೆ ಎಂದರೆ ತಪ್ಪಿಲ್ಲ.
ಈ ಪ್ರೊಸೆಸರ್ ಸಾಧಾರಣ ಬಳಕೆದಾರರ ಅವಶ್ಯಕತೆ ಪೂರೈಸುತ್ತದೆ. ಹೆಚ್ಚಿನ ಮೊಬೈಲ್ ಬಳಕೆದಾರರು ವಾಟ್ಸಪ್, ಫೇಸ್‍ಬುಕ್, ಯೂಟ್ಯೂಬ್ ನೋಡುತ್ತೇವೆ, ನೆಟ್ ಸರ್ಫ್ ಮಾಡುತ್ತೇವೆ. ಫೋನ್‍ಪೇ, ಗೂಗಲ್ ಪೇ ಬಳಸುತ್ತೇವೆ. ಇದಕ್ಕೆಲ್ಲ ಈ ಪ್ರೊಸೆಸರ್ ನ ವೇಗ ಸಾಕು.
ಇದರಲ್ಲಿ ಆಂಡ್ರಾಯ್ಡ್ 11 ಆವೃತ್ತಿ ಇದ್ದು, ಸ್ಯಾಮ್ ಸಂಗ್ ಒನ್ ಯು.ಐ. ಇದೆ. ಎಂದಿನಂತೆ ಯೂಸರ್ ಇಂಟರ್ ಫೇಸ್ ಸ್ಯಾಮ್‍ಸಂಗ್ ಬಳಕೆದಾರರಿಗೆ ಚಿರಪರಿಚಿತ. ಹೊಸ ಥೀಮ್ ಗಳಿವೆ, ಲಾಕ್ ಸ್ಕ್ರೀನ್ ಮೇಲೆ ಆಕರ್ಷಕವಾದ ಹಕ್ಕಿ, ಪ್ರಕೃತಿಯ ಫೋಟೋಗಳು ಪ್ರತಿ ಬಾರಿ ಬದಲಾಗುವಂತಿದ್ದು, ಕಣ್ಮನ ಸೆಳೆಯುತ್ತವೆ.
64 ಮೆ.ಪಿ ಕ್ಯಾಮರಾ: ಈ ದರ ಪಟ್ಟಿಯಲ್ಲಿ 64 ಮೆಗಾಪಿಕ್ಸಲ್ ಕ್ಯಾಮರಾ ನೀಡಿರುವುದು ಒಂದು ಪ್ಲಸ್ ಪಾಯಿಂಟ್. 8 ಮೆ.ಪಿ ವೈಡ್ ಲೆನ್ಸ್, 2 ಮೆ.ಪಿ. ಡೆಪ್ತ್ ಮತ್ತು 2 ಮ್ಯಾಕ್ರೋ ಲೆನ್ಸ್ ಅನ್ನು ಹಿಂಬದಿ ಕ್ಯಾಮರಾ ಒಳಗೊಂಡಿದೆ. 20 ಮೆ.ಪಿ. ಸೆಲ್ಫೀ ಕ್ಯಾಮರಾ ಇದೆ. ಹಿಂಬದಿ ಕ್ಯಾಮರಾದಲ್ಲಿ 10ಎಕ್ಸ್ ಜೂಮ್ ಇದೆ. 0.5 ಎಕ್ಸ್ ನಿಂದ 1, 2, 4 ಹಾಗೂ 10 ಎಕ್ಸ್ ಜೂಮ್‍ವರೆಗೆ ವಿಸ್ತರಿಸಿಕೊಳ್ಳಬಹುದು. 123 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಕೂಡ ಚೆನ್ನಾಗಿದೆ. ಚಿಕ್ಕ ಕೋಣೆಯೊಳಗೆ ನಿಂತು ತುಂಬಾ ಹಿಂದೆ ಹೋಗದೇ ಫೋಟೋಗಳನ್ನು ಕ್ಲಿಕ್ಕಿಸಬಹುದು.
ಆಟೋ ಮೋಡ್‍ನಲ್ಲೇ ಫೋಟೋಗಳು ಚೆನ್ನಾಗಿ ಮೂಡಿಬರುತ್ತವೆ. ಕ್ಯಾಮರಾ ಪರಿಣಿತರು ಪ್ರೊ ಮೋಡ್‍ನಲ್ಲಿ ಇನ್ನೂ ಚೆನ್ನಾಗಿ ಫೋಟೋ ಕ್ಲಿಕ್ಕಿಸಬಹುದು. ಪೋರ್ಟ್ರೈಟ್ ಮೋಡ್‍ನಲ್ಲಿ ಉತ್ತಮ ಫೋಟೋಗಳು ಬರುತ್ತವೆ. ಫೋಟೋ ಅಲ್ಲದೇ, ವಿಡಿಯೋ ಗುಣಮಟ್ಟ ತೃಪ್ತಿದಾಯಕವಾಗಿದೆ.
ಬ್ಯಾಟರಿ: ಬ್ಯಾಟರಿ ವಿಷಯದಲ್ಲಿ ಈ ಮೊಬೈಲ್ ದೈತ್ಯ. 6000 ಎಂಎಎಚ್ ಬ್ಯಾಟರಿ ಹೊಂದಿದೆ! ನೀವು ಒಂದೂವರೆ ದಿನ ಮೊಬೈಲ್ ಬಳಕೆ ಮಾಡಬಹುದು. ಆದರೆ, ಆದರೆ… ಇಷ್ಟು ದೈತ್ಯ ಬ್ಯಾಟರಿಗೆ ನೀಡಿರುವ ಚಾರ್ಜರ್ 15 ವ್ಯಾಟ್ಸ್ ಮಾತ್ರ! ಈ ಚಾರ್ಜರ್ ಬಳಸಿದರೆ ಬ್ಯಾಟರಿ ಫುಲ್ ಆಗಲು ಸುಮಾರು 3 ಗಂಟೆ ತಗುಲುತ್ತದೆ. ನಿಮ್ಮಲ್ಲಿ 25 ವ್ಯಾಟ್ಸ್ ವೇಗದ ಚಾರ್ಜರ್ ಇದ್ದು ಅದನ್ನು ಬಳಸಿದರೆ 1 ಗಂಟೆ 50 ನಿಮಿಷದಲ್ಲಿ ಶೂನ್ಯದಿಂದ ಫುಲ್‍ಚಾರ್ಜ್ ಆಗುತ್ತದೆ. ಚಾರ್ಜಿಂಗ್ ಪೋರ್ಟ್ ಟೈಪ್ ಸಿ ಆಗಿದೆ.
ಆಲ್ವೇಸ್ ಆನ್ ಡಿಸ್‍ಪ್ಲೇ: ಆರಂಭಿಕ ಮಧ್ಯಮ ದರ್ಜೆ ಮೊಬೈಲ್‍ನಲ್ಲಿ ಆಲ್ವೇಸ್ ಆನ್ ಡಿಸ್‍ಪ್ಲೇ ನೀಡಿರುವುದು ಒಳ್ಳೆಯ ಅಂಶ. ಅಂದರೆ ನೀವು ಮೊಬೈಲ್ ಫೋನ್ ಆಫ್ ಮಾಡಿದ್ದಾಗಲೂ ಲಾಕ್ ಸ್ಕೀನ್ ಮೇಲೆ ಸಮಯ, ದಿನಾಂಕ, ಬ್ಯಾಟರಿಯ ಪರ್ಸೆಂಟೇಜ್, ಪರದೆಯ ಮೇಲೆ ಬಂದಿರುವ ನೊಟಿಫಿಕೇಷನ್ ತೋರಿಸುತ್ತದೆ. ನೀವು ಟೇಬಲ್ ಮೇಲಿರುವ ಫೋನನ್ನು ಆನ್ ಮಾಡದೇ ಇವೆಲ್ಲವನ್ನೂ ಕಣ್ಣಳತೆಯಲ್ಲೇ ನೋಡಿಕೊಳ್ಳಬಹುದು.
ಬೇಡವೆಂದರೆ ಇದನ್ನು ನೀವು ಆಫ್ ಮಾಡಿಕೊಳ್ಳಬಹುದು. ಅಥವಾ ಮೊಬೈಲ್ ಆಫ್ ಇದ್ದಾಗ ನೀವು ಪರದೆಯನ್ನು ಟಚ್ ಮಾಡಿದಾಗ 10 ಸೆಕೆಂಡ್ ತೋರಿಸುವಂತೆ ಮಾಡಬಹುದು. ಯಾವಾಗಲೂ ಆನ್ ಇರುವಂತೆ ಅಥವಾ ರಾತ್ರಿ ಮಾತ್ರ ಪರದೆಯ ಮೇಲೆ ಸಮಯ ತೋರುವಂತೆ ಸೆಟಿಂಗ್ ಮಾಡಬಹುದು. ಇದರಿಂದಾಗುವ ದೊಡ್ಡ ಉಪಯೋಗವೆಂದರೆ ರಾತ್ರಿ ಎಚ್ಚರವಾದಾಗ ಮೊಬೈಲ್ ಆನ್ ಮಾಡದೇ ಸಮಯ ನೋಡಬಹುದು.
ಇತರ ಅಂಶಗಳು: ಈ ಮೊಬೈಲ್ ಮೂರು ಸ್ಲಾಟ್ ಹೊಂದಿದೆ. ಅಂದರೆ ಎರಡು ನ್ಯಾನೋ ಸಿಮ್ ಹಾಕಿ ಒಂದು ಮೈಕ್ರೋ ಎಸ್‍ಡಿ ಕಾರ್ಡ್ ಹಾಕಿಕೊಳ್ಳಬಹುದು. ಬೆರಳಚ್ಚು ಸ್ಕ್ಯಾನರ್ ಬಲಬದಿಯ ಆನ್ ಅಂಡ್ ಆಫ್ ಬಟನ್ ನಲ್ಲಿದೆ. ವೇಗವಾಗಿ ಕೆಲಸ ಮಾಡುತ್ತದೆ.
5ಜಿ ಇಲ್ಲ!: ಹಾಂ ಹೌದು! ಇದರಲ್ಲಿ 5ಜಿ ನೆಟ್‍ವರ್ಕ್ ಸೌಲಭ್ಯ ಇಲ್ಲ! ಸಾಧಾರಣ ಈಗ 20 ಸಾವಿರದೊಳಗಿನ ದರಪಟ್ಟಿಯಲ್ಲಿ ಅನೇಕ ಕಂಪೆನಿಗಳು 5ಜಿ ಸೌಲಭ್ಯ ನೀಡಿಲ್ಲ. ಒಂದೋ ಎರಡೋ ಇರಬಹುದು. ಆದರೆ ಅವು ಉಳಿದ ಗುಣಗಳನ್ನು ಕಡಿಮೆ ಮಾಡಿ 5ಜಿ ಸೌಲಭ್ಯ ಕೊಟ್ಟಿವೆ. ಈಗಿನ ಸನ್ನಿವೇಶ ನೋಡಿದರೆ ಭಾರತದಲ್ಲಿ 5ಜಿ ಸೌಲಭ್ಯವನ್ನು ಮೊದಲಿಗೆ ಪರಿಚಯಿಸಲು ಒಂದು ವರ್ಷ ಆಗಬಹುದು. ಅದಾದ ನಂತರ ಅದು ದೊಡ್ಡ ನಗರಗಳನ್ನು ದಾಟಿ, ಪಟ್ಟಣಗಳಿಗೆ ಬರಲು ಇನ್ನೂ ಒಂದು ವರ್ಷ ಆಗಬಹುದು. ಹಾಗಾಗಿ ಈಗ 5ಜಿ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ!
-ಕೆ.ಎಸ್. ಬನಶಂಕರ ಆರಾಧ್ಯ