ಟಾಪರ್ ಆಗಿ ಗತ್ತಲ್ಲಿ ಬೇರೆ ಮಕ್ಕಳ ಸಂದೇಹಗಳಿಗೆ ಉತ್ತರಿಸುತ್ತಿದ್ದವಳಿಗೆ, ಆವತ್ತು ನಾಗರ ಬೆತ್ತದಿಂದ ಏಟು ಬಿದ್ದಾಗ, ಅಳು ಬಂದಿದ್ದರೂ ನುಂಗಿಕೊಂಡೆ. ಕೈಗೂ ನೋವಾಗಿತ್ತು; ಮನಸ್ಸಿಗೆ ಕೂಡ.
ನಾಗರ ಬೆತ್ತದ ಮೇಡಮ್ ಕಂಡರೆ…
ನಾನು ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ಅದು ಸರ್ಕಾರಿ ಅನುದಾನಿತ ಖಾಸಗಿ ಶಾಲೆ. ಅಲ್ಲಿ ಪ್ರಾಥಮಿಕ ಶಿಕ್ಷಣದವರೆಗೆ ಮಾತ್ರ ತರಗತಿಗಳಿದ್ದವು. ನಾನು ಆಟ ಪಾಠಗಳಲ್ಲಿ ಮುಂದಿದ್ದೆ, ತರಗತಿಯಲ್ಲಿ ಮೊದಲಿಗಳಾಗಿದ್ದ ಕಾರಣ, ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದೆ. ಹಾಗಂತ, ತಪ್ಪು ಮಾಡಿದರೆ ಶಿಕ್ಷೆಯೇನೂ ಕಡಿಮೆ ಇರಲಿಲ್ಲ. ಕಿರಿಯ ಮಕ್ಕಳಿಗೆ ಅಡಿಕೋಲಿನಿಂದ ಏಟು. ಆರನೇ, ಏಳನೇ ಕ್ಲಾಸು ತಲುಪಿದಂತೆ ಏಟಿನ ಸಾಧನದಲ್ಲೂ ಪ್ರಮೋಷನ್ ಇರುತ್ತಿತ್ತು, ಅದುವೇ ನಾಗರ ಬೆತ್ತ!
ಇದರ ಹೆಸರು ಕೇಳಲೂ, ನೋಡಲೂ ಭಯವಾಗುತ್ತದೆ. ಅದರಿಂದ ಏಟು ಬಿದ್ದಾಗ ಬರುವ ಸುಂಯ್ ಶಬ್ದ, ಮಕ್ಕಳ ಮುಖದಲ್ಲಿನ ನೋವು, ಅಬ್ಬಬ್ಟಾ! ಅದರಿಂದ ಹೊಡೆತ ಸಿಗುವುದನ್ನು ಕನಸಲ್ಲೂ ಊಹಿಸಲಾರೆವು. ನಮ್ಮ ಶಾಲೆಯ ಹೆಡ್ ಮೇಡಂ ಏಳನೇ ತರಗತಿಗೆ ಮಾತ್ರ ಸಮಾಜ ವಿಜ್ಞಾನ ಕಲಿಸುತ್ತಿದ್ದರು. ಅವರು ತುಂಬಾ ಶಿಸ್ತಿನ ಶಿಕ್ಷಕಿ, ಪಾಠ ಮಕ್ಕಳಿಗೆ ಅರ್ಥವಾಗುವಂತೆ ಕಲಿಸುತ್ತಿದ್ದರು. ತಪ್ಪು ಮಾಡಿದವರಿಗೆ ನಾಗರ ಬೆತ್ತದಿಂದ ಬಾರಿಸುತ್ತಿದ್ದರು. ಏಳನೇ ತರಗತಿ ತಲುಪುವವರೆಗೆ ನಾವುಗಳು ಯಾರೂ ಅವರೊಂದಿಗೆ ಹೆಚ್ಚಿನ ಪರಿಚಯವಿಟ್ಟುಕೊಂಡವರಲ್ಲ. ಎದುರು ಸಿಕ್ಕಾಗ ಆಂಗಿಕವಾಗಿ ವಿಶ್ ಮಾಡುತ್ತಿದ್ದವೇ ಹೊರತು ಮಾತನಾಡಿರಲಿಲ್ಲ. ಕೊನೆಗೂ, ಏಳನೇ ತರಗತಿಯಲ್ಲಿ ಅವರ ಪಾಠವನ್ನು ಕೇಳುವಂತಾಯಿತು. ಆಗೆಲ್ಲ, ಮಕ್ಕಳಿಗೆ ದಸರಾ ರಜೆಯಲ್ಲಿ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರಗಳನ್ನು ಬರೆಯಲು ಹೇಳುತ್ತಿದ್ದರು. ಅದು ಕೂಡ ಒಂದೆರಡು ಸಲ ಅಲ್ಲ, ಪ್ರತೀ ಪ್ರಶ್ನೆಗೆ ಐದು ಸಲದ ಉತ್ತರ!
ಹೀಗೆ ಒಂದು ಸಲ ರಜೆಗೆ ಹೋಗುವ ಮೊದಲು, ಸ್ನೇಹಿತರೆಲ್ಲ ಯಾವುದೆಲ್ಲ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಬೇಕೆಂದು ಚರ್ಚಿಸಿ, ಪ್ಲಾನ್ ಮಾಡಿಕೊಂಡು ತೆರಳಿದ್ದೆವು. ರಜೆ ಮುಗಿಸಿ ಶಾಲೆಗೆ ಮರಳಿ ಬಂದ ದಿನ ಹೆಡ್ ಮೇಡಂ ತರಗತಿಗೆ ಬರುವವರೆಗೂ ಆರಾಮವಾಗಿ ಇದ್ದೋಳಿಗೆ, ಅವರನ್ನು ನೋಡಿದ ತಕ್ಷಣವೇ ಎಲ್ಲೋ ಏನೋ ಮಿಸ್ ಹೊಡಿತಿದೆ ಅನಿಸಿತು. ತತ್ ಕ್ಷಣವೇ ಹೊಳೆದದ್ದು ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆಗೆ ಉತ್ತರಗಳನ್ನು ಬರೆಯಲು ಮರೆತಿದ್ದು. ಆಗಲೇ ಅಂಗೈ, ಮೈಯೆಲ್ಲ ಬೆವರಲು ಶುರುವಾಯಿತು, ಸಣ್ಣಕೆ ನಡುಕ ಕಾಲಲ್ಲಿ. ಮೊದಲ ಬೆಂಚಿನಿಂದ ಒಬ್ಬೊಬ್ಬರದ್ದೇ ಪರಿಶೀಲಿಸುತ್ತಾ, ಬರೆಯದವರಿಗೆ ನಾಗರ ಬೆತ್ತದಿಂದ ಬಾರಿಸುತ್ತಾ ಬರುತ್ತಿದ್ದರು. ಛೇ ನನಗೂ ಕಾದಿದೆ ಎಂದು ಚಡಪಡಿಸಿದೆ, ನನ್ನ ಬೆಂಚಿನ ಬಳಿ ಬಂದಾಗ ಅವರು ಕೇಳುವ ಮೊದಲೇ ಬಾಯಿಬಿಟ್ಟೆ. ನೀನೂ ಬರೆದಿಲ್ವಾ ಅನ್ನುತ್ತಾ ಒಂದು ರೀತಿಯ ನೋಟ ಬೀರಿ, ಅಂಗೈಯೊಡ್ಡಲು ಹೇಳಿದರು.
ಟಾಪರ್ ಆಗಿ ಗತ್ತಲ್ಲಿ ಬೇರೆ ಮಕ್ಕಳ ಸಂದೇಹಗಳಿಗೆ ಉತ್ತರಿಸುತ್ತಿದ್ದವಳಿಗೆ, ಆವತ್ತು ನಾಗರ ಬೆತ್ತದಿಂದ ಏಟು ಬಿದ್ದಾಗ, ಅಳು ಬಂದಿದ್ದರೂ ನುಂಗಿಕೊಂಡೆ. ಕೈಗೂ ನೋವಾಗಿತ್ತು; ಮನಸ್ಸಿಗೆ ಕೂಡ. ಗೆಳತಿಯರೆಲ್ಲ ಮುಸಿ ಮುಸಿ ನಗುತ್ತಿದ್ದರು. ನನ್ನ ಮರೆಗುಳಿತನಕ್ಕಿಷ್ಟು ಅನ್ನುತ್ತಾ ಹಣೆ ಚಚ್ಚಿಕೊಂಡಿದ್ದೆ. ಓಹ್, ಕ್ಲಾಸ್ ಟಾಪರ್‌ಗೂ ಏಟು ಬಿತ್ತಂತೆ ಅನ್ನೋ ಸುದ್ದಿ ನಮ್ಮ ಕ್ಲಾಸಿನಿಂದ ಉಳಿದ ಸೆಕ್ಷನ್‌ಗಳಿಗೂ ಹಬ್ಬಿತು! ಹೇಗಿತ್ತು ಏಟು? ಎಂದು ಗೆಳತಿಯರೆಲ್ಲ ಕಾಲೆಳೆದಾಗ ನಾನು, ಅಳುವುದೋ ನಗುವುದೋ ಅನ್ನೋ ಸ್ಥಿತಿಯಲ್ಲಿದ್ದೆ. ಅವರಿಗೆ ಆಟ, ನನಗೆ ಪ್ರಾಣ ಸಂಕಟ. ಇರೀ, ನಿಮಗೂ ಒಂದು ದಿನ ಬಿದ್ದೇ ಬೀಳುತ್ತೆ ಎಂದು ಮೂತಿ ತಿರುವಿದ್ದೆ. ಈ ಘಟನೆಯಾಗಿದ್ದು ಒಂಥರಾ ಒಳ್ಳೆಯದಾಗಿತ್ತು. ಏಕೆಂದರೆ, ತಲೆಗೆ ಏರಿದ್ದ ಅಹಂಕಾರ ಇಳಿದು ಹೋಗಿ, ಹೋಮ್ ವರ್ಕ್ ವಿಷಯದಲ್ಲಿ ಹೆಚ್ಚೇ ಜಾಗರೂಕಳಾಗಿದ್ದೆ.
ಏಟು ಪಾಠ ಕಲಿಸುತ್ತೆ, ಹೊಡೆಯುವುದೇನೋ ಹೊಡೆದರು. ಆದರೆ, ಅಷ್ಟು ಜೋರಾಗಿ ಹೊಡೆಯಬೇಕಿತ್ತೆ ಎಂದು ಶಿಕ್ಷಕಿಯ ಮೇಲೆ ಆ ಕ್ಷಣಕ್ಕೆ ಹುಸಿ ಕೋಪಿಸಿಕೊಂಡಿದ್ದರೂ, ನಂತರ ದಿನಗಳಲ್ಲಿ ಅವರ ಮೇಲಿನ ಗೌರವ ದುಪ್ಪಟ್ಟಾಗಿತ್ತು. ಕಾರಣ ಮೊದಲ ಬೆಂಚಿನ ವಿದ್ಯಾರ್ಥಿಗಳು ಹಾಗೂ ಕೊನೆಯ ಬೆಂಚಿನ ವಿದ್ಯಾರ್ಥಿಗಳು ಅಂತ ತಾರತಮ್ಯ ಮಾಡಲಿಲ್ಲ. ತಪ್ಪು ಮಾಡಿದ್ದೀಯೋ, ಮನ್ನಿಸಲಾರೆ ನಾನು, ಒಪ್ಪಿಸು ನಿನ್ನನ್ನು ಅನ್ನುವಂತೆ ವರ್ತಿಸಿದ್ದ ಅವರಿಗೆ ನನ್ನದೊಂದು ನಮನ.
ಸುಪ್ರೀತಾ ವೆಂಕಟ್