Advertisement

ಕನ್ನಡ ಸಾಹಿತ್ಯ ಜಾತ್ರೆಗೆ ಸಜ್ಜಾಗುತ್ತಿದೆ ಕರಾವಳಿ

03:28 AM Jan 11, 2021 | Team Udayavani |

ಮಂಗಳೂರು: ಕನ್ನಡ ನಾಡು ನುಡಿಯ ಸಾಹಿತ್ಯ ಜಾತ್ರೆಗೆ ಕರಾವಳಿ ಸಿದ್ಧಗೊಳ್ಳುತ್ತಿದೆ. ಜನವರಿ 26ರಂದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು, ಫೆಬ್ರವರಿ ಎರಡನೇ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

Advertisement

ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವ ತಾಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಈಗಾಗಲೇ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಸಾಹಿತ್ಯ ಪರಿಷತ್ತು ಸಮಿತಿಗಳ ಸಭೆ ನಡೆದಿದೆ. ಸದ್ಯದ ತೀರ್ಮಾನದಂತೆ ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಮೂರು ದಿನಗಳ ಕಾಲ ದ.ಕ. ಜಿಲ್ಲಾ ಮಟ್ಟದ ಸಮ್ಮೇಳನ ಆಯೋಜನೆ ಮಾಡಲು ನಿರ್ಧರಿಸಲಾಗಿದೆ.

ತಾಲೂಕು ಸಮ್ಮೇಳನಗಳು :

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕ ತಾಲೂಕು ಮಟ್ಟದ ಸಮ್ಮೇಳನಗಳು ನಡೆಯುವ ನಿರೀಕ್ಷೆ ಇದೆ. ಅದರಂತೆ ಫೆ. 9ರಂದು ಮಂಗಳೂರು ತಾಲೂಕು ಸಮ್ಮೇಳನ, ಫೆ. 20ರಂದು ಬಂಟ್ವಾಳದ ಕನ್ನಡ ಭವನದ ಉದ್ಘಾಟನೆ ಮತ್ತು ಫೆ. 21ರಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಾಧ್ಯತೆ ಇದೆ. ಮಾರ್ಚ್‌ ಎರಡನೇ ವಾರದಲ್ಲಿ ಪುತ್ತೂರಿನಲ್ಲಿ ಪುಸ್ತಕ ಮೇಳ ಆಯೋಜನೆ ಮಾಡುವ ಯೋಜನೆಯನ್ನು ಜಿಲ್ಲಾ ಕಸಪಾ ಆಯೋಜಿಸಲಿದೆ.

ಕೋವಿಡ್‌ ನಿಯಮದ ಪ್ರಕಾರವೇ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯಲಿವೆ. ಆನ್‌ಲೈನ್‌, ಜಾಲತಾಣಗಳ ಮೂಲಕ ನೇರಪ್ರಸಾರ ಮಾಡುವ ಯೋಚನೆಯನ್ನು ಮಾಡಲಾಗುತ್ತಿದೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದ್ದು, ಶೀಘ್ರದಲ್ಲಿ ಹೆಸರು ಪ್ರಕಟವಾಗಲಿದೆ.

Advertisement

ಮಂಗಳೂರಿನಲ್ಲೇ  ಜಿಲ್ಲಾ ಸಮ್ಮೇಳನ :

ಈ ಬಾರಿಯ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿಯೇ ನಡೆಯಲಿದೆ. ಜಿಲ್ಲಾ ಕೇಂದ್ರವಾದ ಮಂಗಳೂರು ನಗರದಲ್ಲಿಯೇ ಸಮ್ಮೇಳನ ನಡೆಸಲು ಸಾಹಿತ್ಯಾಸಕ್ತರು ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಕೋವಿಡ್‌ ಕಾರಣಕ್ಕೆ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. 23ನೇ ಸಮ್ಮೇಳನವು ಮಂಗಳೂರಿನ ಪುರಭವನದಲ್ಲಿ ಯಶಸ್ವಿಯಾಗಿ ನಡೆದಿತ್ತು.

ಜ. 26: ಉಡುಪಿ ಜಿಲ್ಲಾ ಸಮ್ಮೇಳನ :

ಉಡುಪಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಚೇತನಾ ಪ್ರೌಢ ಶಾಲೆಯಲ್ಲಿ ಜ. 26ರಂದು ಉಡುಪಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬ್ರಹ್ಮಾವರ, ಹೆಬ್ರಿ, ಕಾರ್ಕಳ, ಕಾಪು ತಾಲೂಕಿನಲ್ಲಿ ತಾಲೂಕು ಸಮ್ಮೇಳನ ನಡೆಸಲು ಈಗಾಗಲೇ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಮಾ. 14ರಂದು ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೋವಿಡ್‌ ಕಾರಣದಿಂದ ಮುಂದೂಡಬೇಕಾಯಿತು. ಈ ವರ್ಷ ಜ. 26ರಂದು ಸಾಹಿತಿ ವೈದೇಹಿ ಅವರ ಅಧ್ಯಕ್ಷತೆಯಲ್ಲಿ ಕೊರೊನಾ ನಿಯಮ ಪಾಲಿಸಿ ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ನಡೆಯಲಿದೆ’ ಎಂದಿದ್ದಾರೆ.

ಪರಿಷತ್ತಿನ ಸೂಚನೆಯಂತೆ ಈ ಬಾರಿ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿದೆ. ಜತೆಗೆ ತಾಲೂಕು ಮಟ್ಟದಲ್ಲಿಯೂ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಸಭೆ ನಡೆಸಿದ್ದು, ಸದ್ಯದಲ್ಲಿಯೇ ಅಧ್ಯಕ್ಷರ ಆಯ್ಕೆ ನಡೆಯಲಿದೆ.– ಪ್ರದೀಪ್‌ ಕುಮಾರ್‌ ಕಲ್ಕೂರ, ಕಸಾಪ ದ.ಕ. ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next