Advertisement

ಕನ್ನಡ ಭಾಷೆ ಅಳಿಯಲು ಸಾಧ್ಯವೇ ಇಲ್ಲ

01:52 PM Nov 24, 2018 | Team Udayavani |

ದಾವಣಗೆರೆ: ಪ್ರತಿಯೊಬ್ಬರ ಹೃದಯದಲ್ಲಿ ಕನ್ನಡತನ ಇರುವ ತನಕ ಕನ್ನಡ ಭಾಷೆ ಉಳಿದು, ಬೆಳೆಯುತ್ತದೆ. ಕನ್ನಡದ ಭವಿಷ್ಯದ ಬಗ್ಗೆ ಆತಂಕಪಡುವ ಅಗತ್ಯವೇ ಇಲ್ಲ ಎಂದು ಖ್ಯಾತ ಸಾಹಿತಿ ಬಿ.ಆರ್‌. ಲಕ್ಷ್ಮಣರಾವ್‌ ಪ್ರತಿಪಾದಿಸಿದ್ದಾರೆ.

Advertisement

ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು ಮತ್ತು ಪತ್ರಕರ್ತರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಶುಕ್ರವಾರ (ಮೊದಲ ದಿನ)ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕನ್ನಡದ ಅಮ್ಮ ಎಲ್ಲಿಯವರೆಗೆ ಇರುವಳ್ಳೋ ಅಲ್ಲಿಯವರೆಗೆ ಕನ್ನಡ ಭಾಷೆಗೆ ಯಾವುದೇ ಆತಂಕ ಇಲ್ಲ. ಕನ್ನಡದ ಅಮ್ಮಂದಿರು ಆಂಗ್ಲ ಭಾಷೆ ಕಲಿಸುವ ಮಮ್ಮಿಗಳಾಗದೆ ಪ್ರೀತಿಯಿಂದ ಕನ್ನಡ, ಸಂಸ್ಕೃತಿಯ ತಿಳಿ ಹೇಳುವಂತಾಗಬೇಕು ಎಂದು ಆಶಿಸಿದರು.

ಕನ್ನಡ ಭಾಷೆ ನಾಶವಾಗುವ ಮಾತುಗಳು ಕೇಳಿ ಬರುತ್ತಿವೆ. ಕನ್ನಡ ಎಂದೆಂದಿಗೂ ಸಾಯುವುದೇ ಇಲ್ಲ. ಕನ್ನಡ ಭಾಷೆಯನ್ನು ಕೇವಲ ಸಾಹಿತಿಗಳಿಂದ ಉಳಿಸಲಿಕ್ಕೆ ಸಾಧ್ಯ ಇಲ್ಲ. ಕವಿಗಳು ಸರ್ವಜ್ಞರೇನು ಅಲ್ಲ. ಕವಿ, ಸಾಹಿತಿಗಳೊಟ್ಟಿಗೆ ವಿಶ್ವವಿದ್ಯಾಲಯ, ವೈದ್ಯರು, ಅಭಿಯಂತರರು, ರೈತರು, ಕಾರ್ಮಿಕರು… ಹೀಗೆ ಪ್ರತಿಯೊಬ್ಬರೂ ಕನ್ನಡವನ್ನ ಹೆಚ್ಚು ಹೆಚ್ಚಾಗಿ ಮಾತನಾಡುವ ಮೂಲಕ ಉಳಿಸಬೇಕು ಎಂದರು.
 
ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಇದೆ. ಸಂಸ್ಕೃತ, ಉರ್ದು ಈಗ ಆಂಗ್ಲ ಭಾಷೆಯ ದಟ್ಟ ಪ್ರಭಾವದ ನಡುವೆಯೂ ಕನ್ನಡ ಭಾಷೆ ತನ್ನನ್ನು ತಾನು ಸಂರಕ್ಷಣೆ ಮಾಡಿಕೊಂಡೇ ಬಂದಿದೆ. ಕನ್ನಡಕ್ಕೆ ತನ್ನನ್ನು ನವೀಕರಿಸಿಕೊಳ್ಳುವ ಧೀಶಕ್ತಿಯೂ ಇದೆ. ಈಗಿನ ಸಾಮಾಜಿಕ ಜಾಲತಾಣದಲ್ಲೂ ಕನ್ನಡ ಬಳಕೆ ಮಾಡಲಾಗುತ್ತದೆ. ಹಾಗಾಗಿ ಕನ್ನಡದ ಭವಿಷ್ಯದ ಬಗ್ಗೆ ಖಂಡಿತವಾಗಿಯೂ ಆತಂಕ ಪಡುವುದು ಬೇಡವೇ ಬೇಡ ಎಂದು ತಿಳಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಪ್ರತಿ ನವಂಬರ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುವ ಪರಿಪಾಠ ಮುಂದುವರೆದಿದೆ. ಅತ್ಯುತ್ತಮ ಕನ್ನಡ ಮಾತನಾಡುವ ಹೆಗ್ಗಳಿಕೆಯ ದಾವಣಗೆರೆಯಲ್ಲಿ ನಗರಸಭೆ ಕಾಲದಿಂದಲೂ ಅತೀ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ, ಸನ್ಮಾನ ನಡೆಸುತ್ತಿರುವುದು ಎಲ್ಲರಿಗೂ ಮಾದರಿ. ಬೆಂಗಳೂರಿನಲ್ಲಿ ಕನ್ನಡಿಗರೇ ತೆಲುಗು, ತಮಿಳುನಲ್ಲಿ ಮಾತನಾಡುವುದು ರೂಢಿ. ಎಲ್ಲಾದರೂ ಇರು, ಹೆಂಗಾದರೂ ಇರು. ನೀನು ಕನ್ನಡಿಗನಾಗಿರು… ಎನ್ನುವಂತೆ ಇರೋಣ ಎಂದು ತಿಳಿಸಿದರು.

ಕರ್ನಾಟಕ ಹೇಗಾಯಿತು ಎಂಬುದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಈಗಿನ ಮಂಗಳೂರು ಮದ್ರಾಸ್‌ ಪ್ರಾಂತ್ಯದಲ್ಲಿತ್ತು. ಬಳ್ಳಾರಿ ಆಂಧ್ರಪ್ರದೇಶದಲ್ಲಿತ್ತು. 63 ವರ್ಷಗಳ ಹಿಂದೆ ಕನ್ನಡ ಮಾತನಾಡುವರನ್ನು ಒಂದುಗೂಡಿಸಿ ಕನ್ನಡಿಗರೆಲ್ಲ ಒಂದೇ ಎಂಬ ಭಾವನೆಯಿಂದ ನಡೆದುಕೊಂಡು ಬಂದಿದೆ. ಅದು ಮುಂದುವರೆಯಬೇಕು. ಕನ್ನಡ ರಾಜ್ಯೋತ್ಸವ ನವಂಬರ್‌ಗೆ ಮಾತ್ರ ಸೀಮಿತವಾಗದೇ ನಿತ್ಯೋತ್ಸವ ಆಗಬೇಕು. ಕನ್ನಡದಲ್ಲೇ ಸರ್ಕಾರಿ ಆದೇಶ, ನ್ಯಾಯಾಲಯದ ತೀರ್ಪುಗಳು ಬರುವಂತಾಗಬೇಕು ಎಂದು ಆಶಿಸಿದರು.

Advertisement

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌ ಮಾತನಾಡಿ, ಕನ್ನಡವನ್ನ ಹೆಚ್ಚು ಬಳಸಿದಂತೆ ಆಯುಸ್ಸು, ಹೊಳಪು ಹೆಚ್ಚಾಗುತ್ತಾ, ಬೆಳೆಯುತ್ತಾ ಹೋಗುತ್ತದೆ. ಹಳ್ಳಿಗಳು ಜೀವಂತ ಇರುವರೆಗೆ ಕನ್ನಡ ಉಳಿಯುತ್ತದೆ. ಅಸೀಮ ಕನ್ನಡದ ಪ್ರೇಮದ ಮೂಲಕ ಕನ್ನಡ ಮಾತನಾಡುವರು ಇರುವರೆಗೆ ಕನ್ನಡಕ್ಕೆ ಸಾವು ಎಂಬುದೇ ಇಲ್ಲ ಎಂದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್‌ ಕೆ. ಚಮನ್‌ಸಾಬ್‌, ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್‌, ಲಯನ್ಸ್‌ ಕ್ಲಬ್‌ ಮಾಜಿ ರಾಜ್ಯಪಾಲ . ನಾಗನೂರು, ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣಗೌಡ ಬಣ) ಜಿಲ್ಲಾ ಅಧ್ಯಕ್ಷ ಎಂ.ಎಸ್‌. ರಾಮೇಗೌಡ, ನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಂದ್ರ ಮೊಯ್ಲಿ, ಎನ್‌. ತಿಪ್ಪಣ್ಣ, ಅನ್ನಪೂರ್ಣ ಪೂಜಾರ್‌ ಬಸವರಾಜ್‌, ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ, ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಎಸ್‌. ಗೋವಿಂದರಾಜ್‌ ಇತರರು ಇದ್ದರು.

ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ನಗರಪಾಲಿಕೆ ಸದಸ್ಯ ಎಂ. ಹಾಲೇಶ್‌ ಸ್ವಾಗತಿಸಿದರು. ಆವರಗೆರೆ ಎಚ್‌.ಜಿ. ಉಮೇಶ್‌ ನಿರೂಪಿಸಿದರು. ಪತ್ರಕರ್ತರಾದ ಡಿ.ಎಂ. ಮಹೇಶ್‌, ಶಾಂತಕುಮಾರ್‌, ಸುರೇಶ್‌ ಕುಣಿಬೆಳಕೆರೆ, ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ಜಸ್ಟಿನ್‌ ಡಿಸೋಜಾ, ಮಹಿಳಾ ಕ್ರಿಕೆಟರ್‌ ರಕ್ಷಿತಾ ಎಂ. ನಾಯಕ ಒಳಗೊಂಡಂತೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next