Advertisement

ಕೇರಳ ಸರಕಾರದಿಂದ ಕನ್ನಡ ಭಾಷೆ,ಸಂಸ್ಕೃತಿಗೆ ಮತ್ತೆ ಆಘಾತ: ಪುನರೂರು

06:00 AM Aug 11, 2018 | |

ಕಾಸರಗೋಡು: ಶತಮಾನ ಗಳಿಂದ ಕನ್ನಡ  ಭಾಷೆ ಮತ್ತು ಸಂಸ್ಕೃತಿಯನ್ನು ಉಸಿರಾಡುತ್ತಿದ್ದ ಕಾಸರಗೋಡಿನ ಕನ್ನಡಿಗರ ಮೇಲೆ ಕೇರಳ ಸರಕಾರ ಕಡ್ಡಾಯ ಮಲಯಾಳ ಕಲಿಕೆ ಆದೇಶ ಹೊರಡಿಸುವ ಮೂಲಕ ಮತ್ತೆ ಆಘಾತ ತಂದೊಡ್ಡಿದೆ. ಭಾಷಾ ಅಲ್ಪಸಂಖ್ಯಾಕ ಕನ್ನಡಿಗರಿಗೆ ನೀಡಿರುವ ಸಂವಿಧಾನಬದ್ಧ ಹಕ್ಕು ಸವಲತ್ತುಗಳನ್ನು ಕಸಿದುಕೊಳ್ಳುತ್ತಾ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ನಾಶಕ್ಕೆ ಪಣತೊಟ್ಟಿದೆ. ಇದರ ವಿರುದ್ಧ ಕಾಸರಗೋಡಿನ  ಕನ್ನಡಿಗರು ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕದ ಕನ್ನಡಿಗರ ಸಂಪೂರ್ಣ ಬೆಂಬಲ ಅಗತ್ಯವಿದೆ ಎಂದು ಧರ್ಮದರ್ಶಿ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

Advertisement

ಕಾಸರಗೋಡು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯ ಮಲಯಾಳ ಕಲಿಸುವ ಆದೇಶದ ರದ್ದತಿ ಸಹಿತ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಹಾಗೂ ಕೇರಳ ಸರಕಾರದ ಮುಂದೆ ಕರ್ನಾಟಕ ಸರಕಾರ ಒತ್ತಡ ಹೇರಲು ಕನ್ನಡ ಹೋರಾಟ ಸಮಿತಿ ಕಾಸರಗೋಡು ಇದರ ಆಶ್ರಯದಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ
ಮಂಗಲ್ಪಾಡಿ ಶಾಲೆಯಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಜ್ಞಾನವಿಲ್ಲದ ಮಲಯಾಳ ಅಧ್ಯಾಪಕನನ್ನು ನೇಮಿಸುವ ಮೂಲಕ ಕನ್ನಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೇರಳ ಸರಕಾರ ಚೆಲ್ಲಾಟವಾಡುತ್ತಿದೆ. ಇದರ ವಿರುದ್ಧ ಕನ್ನಡ ಕಂದಮ್ಮಗಳು ನಡೆಸುತ್ತಿರುವ ಹೋರಾಟಕ್ಕೂ ಕರ್ನಾಟಕದ ಕನ್ನಡಿಗರು ಬೆಂಬಲ ನೀಡಬೇಕಾಗಿದೆ ಎಂದರು.

ಕಾಸರಗೋಡಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಇದೀಗ ಮಂಗಲ್ಪಾಡಿ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಲಯಾಳ ಅಧ್ಯಾಪಕನನ್ನು ನೇಮಿಸುವ ಮೂಲಕ ಕನ್ನಡ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ನಾಲೆಗೆ ಸರಿಯುವಂತಾಗಿದೆ ಎಂದು ಕಾಸರಗೋಡು ಜಿಲ್ಲಾ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್‌ ಅವರು ಹೇಳಿದರು. ಕನ್ನಡಿಗರ ಅಸ್ತಿ¤ತ್ವ ಉಳಿಸಲು ಮತ್ತು ಕನ್ನಡಿಗರ ಸಂರಕ್ಷಣೆಗೆ ಕರ್ನಾಟಕ ಸರಕಾರ ನೇತೃತ್ವ ವಹಿಸಬೇಕೆಂದರು.

ಕಾಸರಗೋಡಿನ ಕನ್ನಡಿಗರು ವಲಸಿಗರಲ್ಲ. ಕನ್ನಡವನ್ನೇ ಉಸಿರಾಡುತ್ತಾ ಬಾಳಿ ಬದುಕಿದವರು. ಆದರೂ ಕೇರಳ ಸರಕಾರ ನಿರಂತರವಾಗಿ ಕನ್ನಡಿಗರ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಇದರ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಕರ್ನಾಟಕದ ಕನ್ನಡಿಗರು ನಮ್ಮ ಜೊತೆ ನಿಲ್ಲಬೇಕು ಎಂದು ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅವರು ಹೇಳಿದರು.

Advertisement

ಕಾಸರಗೋಡಿನ ಕನ್ನಡಿಗರು ನಮ್ಮವರೇ. ಅವರು ನಡೆಸಿಕೊಂಡು ಬರುತ್ತಿರುವ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅನಿಲ್‌ದಾಸ್‌ ಹೇಳಿದರು. ಕಾಸರಗೋಡಿನ ಕನ್ನಡಿಗರಿಗಾಗುತ್ತಿರುವ ಅನ್ಯಾಯದ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಅವರು ಹೇಳಿದರು. ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಅವರು ಮಾತನಾಡಿ, ಕನ್ನಡಿಗರಿಗೆ ನ್ಯಾಯದೊರಕುವ ತನಕ ಹೋರಾಟ ನಡೆಯಲಿದೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಮೊಹಮ್ಮದ್‌ ಹಾಜಿ ಕುಕ್ಕುವಳ್ಳಿ, ರವೀಂದ್ರ ಶೆಟ್ಟಿ ಉಳಿತೊಟ್ಟು, ನಿಟ್ಟೆ ಶಶಿಧರ ಶೆಟ್ಟಿ, ಕರಾವಳಿ ಲೇಖಕಿಯರ ವಾಚಕರ ಸಂಘದ ಅರುಣಿ ನಾಗರಾಜ್‌, ಕರ್ನಾಟಕ ರಕ್ಷಣಾ ವೇದಿಕೆಯ ಮಧುಸೂದನ, ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್‌.ವಿ.ಭಟ್‌, ಸಿರಿಗನ್ನಡ ಬಳಗದ ರಕ್ಷಿತ್‌ ಮೊದಲಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಹೋರಾಟ ಸಮಿತಿ ಸಂಚಾಲಕ ಎಂ.ವಿ.ಮಹಾಲಿಂಗೇಶ್ವರ ಭಟ್‌ ಅಧ್ಯಕ್ಷತೆ ವಹಿಸಿ ಮಂಗಳೂರಿನಲ್ಲಿ ಧರಣಿ ಮಾಡುವ ಉದ್ದೇಶವನ್ನು ತಿಳಿಸಿದರು. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಕಬೈಲು ಸತೀಶ್‌ ಅಡಪ ವಂದಿಸಿದರು.ಧರಣಿಯ ಬಳಿಕ ದ.ಕ.ಜಿಲ್ಲಾಡಳಿತಕ್ಕೆ ಕಾಸರಗೋಡು ಕನ್ನಡಿಗರ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.

ಹೋರಾಟದ ಧ್ವನಿ ದಿಲ್ಲಿಗೆ ತಲುಪಲಿ
ಸಂವಿಧಾನಬದ್ಧವಾಗಿ ಕಾಸರಗೋಡಿನ ಕನ್ನಡಿಗರಿಗೆ ಸರಕಾರದ ಆದೇಶ, ಸುತ್ತೋಲೆಗಳನ್ನು ಕನ್ನಡದಲ್ಲೇ ನೀಡಬೇಕೆಂದಿದ್ದರೂ ಇದ್ಯಾವುದನ್ನು ನೀಡದೆ ಕನ್ನಡಿಗರಿಗೆ ವಂಚಿಸುತ್ತಲೇ ಬಂದಿದೆ. ಎಲ್ಲ  ಸವಲತ್ತುಗಳನ್ನು ಕಸಿದುಕೊಳ್ಳುತ್ತಾ ಕನ್ನಡ ಭಾಷೆ, ಸಂಸ್ಕೃತಿಯ ನಾಶಕ್ಕೆ ಕೇರಳ ಸರಕಾರ ಮುಂದಾಗಿದೆ. ಇದರ ವಿರುದ್ಧ ನಡೆಯುತ್ತಿರುವ ಹೋರಾಟದ ಧ್ವನಿ ದಿಲ್ಲಿಗೂ ಕೇಳಿಸಬೇಕು. 
– ಪ್ರದೀಪ್‌ ಕುಮಾರ್‌ ಕಲ್ಕೂರ 
ಅಧ್ಯಕ್ಷ , ಕನ್ನಡ ಸಾಹಿತ್ಯ ಪರಿಷತ್‌ ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next