ವಿಜಯಪುರ: ಮಹಾರಾಷ್ಟ್ರದ ನೆಲದಲ್ಲಿರುವ ಕನ್ನಡ ಹಳ್ಳಿಗಳಿಗೆ ಕುಡಿಯುವ ನೀರು ಕೊಡುವ ಯೋಗ್ಯತೆ ಇಲ್ಲದ ಮಹಾರಾಷ್ಟ್ರ ಸರ್ಕಾರ ಕನ್ನಡದ ಗ್ರಾಮಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಇಂತ ಸ್ಥಿತಿಯಲ್ಲಿ ರಾಜಕೀಯ ಕಾರಣಕ್ಕೆ ಕನ್ನಡದಲ್ಲಿರುವ ನಗರಗಳು ಬೇಕೆಂದು ಮಹಾರಾಷ್ಟ್ರ ನಾಯಕರು ಕನ್ನಡಿಗರನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಗಡಿಯಲ್ಲಿ ಮಹಾರಾಷ್ಟ್ರದ ನೆಲದಲ್ಲಿ ಇರುವ ಕನ್ನಡ ಹಳ್ಳಿಗಳಲ್ಲಿ ಕನ್ನಡಿಗರು ಅತ್ಯಂತ ದುಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಮಹಿಷಾಳ ಏತ ನೀರಾವರಿ ಯೋಜನೆಗಾಗಿ ಕಳೆದ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಸ್ಪಂದಿಸುವ ಸೌಜನ್ಯ ಮಹಾರಾಷ್ಟ್ರ ಸರ್ಕಾರ ಮಾಡಿಲ್ಲ. ಈ ಬಗ್ಗೆ ನಾವು ಮಾತಮಾಡಬಾರದು ಎಂದಾದರೂ ಮಹಾರಾಷ್ಟ್ರ ನಾಯಕರ ವರ್ತನೆಗಾಗಿ ಕನ್ನಡಿಗರ ಪರ ಧ್ವನಿ ಎತ್ತಲೇ ಬೇಕಿದೆ ಎಂದರು.
ವಿಜಯಪುರ ಜಿಲ್ಲೆಯ ಗಡಿಯಲ್ಲಿ ಇರುವ ಕನ್ನಡದ ಗ್ರಾಮಗಳ ಜನರ ದುಸ್ಥಿತಿ ನೋಡಲಾಗದೇ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಮಾನವೀಯ ನೆಲೆಯಲ್ಲಿ ತುಬಚಿ-ಬಬಲೇಶ್ವರ ಯೋಜನೆ ಕೊನೆ ಭಾಗದ ನೀರನ್ನು ಮಹಾರಾಷ್ಟ್ರದ ಗಡಿ ಗ್ರಾಮಗಳಿಗೆ ಹರಿಸುವಂತೆ ಮಾಡಿದ್ದೇ. ಗುಡ್ಡಾಪುರ, ಸಂಖ, ತಿಕ್ಕುಂಡಿ ಭಾಗದಲ್ಲಿ ಕನ್ನಡಿಗರು ಮೂಲಭೂತ ಸೌಕರ್ಯಗಳಿಲ್ಲದೇ ಅತ್ಯಂತ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಬೆಳಗಾವಿ, ಕಾರವಾರ ಬೇಕು ಎಂದು ಅನಗತ್ಯವಾಗಿ ಭಾಷಾ ಸಾಮರಸ್ಯ ಹಾಳುಮಾಡುವ ಕೆಲಸವನ್ನು ಮಹಾರಾಷ್ಟ್ರ ನಾಯಕರು ಬಿಡಬೇಕು. ರಾಜಕೀಯ ಪ್ರೇರಿತ ಪ್ರಚೋದನಾತ್ಮಕ ಹೇಳಿಕೆ ನೀಡುವ ಮೊದಲು ತನ್ನ ನೆಲದಲ್ಲಿರುವ ಕನ್ನಡಿಗರಿಗೆ ಕುಡಿಯುವ ನೀರು, ರಸ್ತೆ, ಆರೋಗ್ಯ, ಶಿಕ್ಷಣದಂಥ ಮೂಲಭೂತ ಸೌಲಭ್ಯ ಕಲ್ಪಿಸಲು ಯೋಜಿಸಿ, ಅನುಷ್ಠಾನ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.