Advertisement

ರಾಜ್ಯದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ

11:12 PM Sep 15, 2019 | Lakshmi GovindaRaju |

“ಒಂದು ದೇಶ, ಒಂದು ಭಾಷೆ’ಯ ಪರಿಕಲ್ಪನೆ ಅಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ “ಭಾರತದ ಅಧಿಕೃತ ಭಾಷೆ ಹಿಂದಿ’ ಎಂದು ಪರಿಗಣಿಸಲ್ಪಟ್ಟರೆ ಒಳಿತು ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಎಲ್ಲೆಡೆ ಅಸಮಾಧಾನದ ಮಾತುಗಳು ಕೇಳಿ ಬಂದಿವೆ. ರಾಜ್ಯಾದ್ಯಂತ ಎಲ್ಲಾ ವಲಯಗಳಿಂದ ಪಕ್ಷಾತೀತವಾಗಿ ಕನ್ನಡಪರ ಧ್ವನಿ ಮೊಳಗಿದೆ. ಕನ್ನಡ ಭಾಷೆಗೆ 2,500 ವರ್ಷಗಳ ಸುದೀರ್ಘ‌ ಇತಿಹಾಸವಿದ್ದು, ಯಾರೇ ಬಂದರೂ, ಕನ್ನಡ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ ಎಂಬ ಪ್ರತಿಪಾದನೆ ನಾಯಕರಿಂದ ಕೇಳಿ ಬಂದಿದೆ. ಏಕ ದೇಶಕ್ಕೆ ಒಪ್ಪುವ ನಾವು ಏಕ ಭಾಷೆಗೆ ಒಪ್ಪಲಾರೆವು ಎನ್ನುತ್ತಿದ್ದಾರೆ ಕನ್ನಡಿಗರು. ಇದೊಂದು ಹಿಂದಿಯನ್ನು ಬಲವಂತವಾಗಿ ಹೇರುವ ಕುತಂತ್ರ ಎಂಬ ಆಕ್ರೋಶದ ಕೂಗು ಎಲ್ಲೆಡೆ ಕೇಳಿ ಬಂದಿದೆ.

Advertisement

ಹಿಂದಿ ಭಾಷೆ ಹೇರಿಕೆ ಒಪ್ಪಲ್ಲ
ಹುಬ್ಬಳ್ಳಿ: ಹಿಂದಿ ಭಾಷೆ ಹೇರಿಕೆ ಮೂಲಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಗೊಂದಲ ಸೃಷ್ಟಿಸುವ ಕೆಲಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಂದಾಗಿದ್ದಾರೆಂದು ಮಾಜಿ ಸಚಿವ ಎಚ್‌.ಕೆ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಒಂದು ಭಾಷೆ ಯನ್ನು ದೇಶಾ ದ್ಯಂತ ಹೇರುವುದು ಸರಿಯಲ್ಲ. ಆದರೆ, ಕೇಂದ್ರ ಸರ್ಕಾರ ಒಂದು ದೇಶ ಒಂದು ಭಾಷೆ ಹೆಸರಲ್ಲಿ ಹಿಂದಿ ಹೇರಲು ಮುಂದಾಗಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ನಿರ್ಧಾರಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳ ಮೂಲಕ ಸಮ ಜಾಯಿಷಿ ನೀಡುವ ಕೆಲಸ ಬಿಜೆಪಿ ನಾಯಕರಿಂದ ನಡೆಯುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಈ ಪ್ರಯತ್ನ ಕೈಬಿಡಬೇಕು ಎಂದರು.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಕರ್ನಾಟಕ ಹಾಗೂ ಕನ್ನಡಿಗರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜನರಿಗೆ ಬೇಡವಾದ ಮೇಲೆ ಇದನ್ನು ಹೇರುವ ಪ್ರಯತ್ನ ಮಾಡುತ್ತಿರುವುದರ ಹಿಂದಿನ ಮರ್ಮ ಏನೆಂಬುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಈ ಪ್ರಯತ್ನದ ಹಿಂದೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಗೊಂದಲ ಮೂಡಿಸುವ ಹುನ್ನಾರವಿದೆ. ಈ ಭಾಗದ ಪ್ರಾದೇಶಿಕ ಭಾಷೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಕೇಂದ್ರ ಸರ್ಕಾರ ಹಿಂದಿ ಹೇರಲು ಮುಂದಾಗಿದೆ. ಅಮಿತ್‌ ಶಾ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಹಿಂದಿ ಹೇರಿಕೆ ಬಗ್ಗೆ ಮಾತನಾಡಲು ಎಚ್ಡಿಕೆಗೆ ನೈತಿಕತೆಯೇ ಇಲ್ಲ
ಧಾರವಾಡ: ಎಚ್‌.ಡಿ.ಕುಮಾರಸ್ವಾಮಿಯವರು ತಾವು ಮುಖ್ಯಮಂತ್ರಿಯಾಗಿದ್ದಾಗಲೇ ಇಂಗ್ಲಿಷ್‌ ಹೇರಿಕೆ ಮಾಡಿದ್ದು, ಇದೀಗ ಹಿಂದಿ ಭಾಷೆ ಬಗ್ಗೆ ಮಾತ ನಾಡಲು ಅವರು ನೈತಿಕತೆ ಹೊಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್‌ ಶಾ ಅವರು, “ಒಂದು ರಾಷ್ಟ್ರ; ಒಂದು ಭಾಷೆ’ ಎಂದು ಪ್ರತಿಯೊಬ್ಬರೂ ಹಿಂದಿ ಕಲಿಯಲೆಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆಯೇ ಹೊರತು, ಅದು ಹಿಂದಿ ಹೇರಿಕೆ ಅಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಿ ಸೇರಿ ಇತರ ಭಾಷೆಗಳ ಕಲಿಕೆ ಬೇಡವೆಂದಿಲ್ಲ.

ಅವರ ಹೇಳಿಕೆಯನ್ನು ಅನಗತ್ಯ ವಿವಾದಕ್ಕೆ ಎಡೆಮಾಡಿದ್ದು ಸರಿಯಲ್ಲ. ಹಿಂದಿ ಕಲಿತರೆ ತಪ್ಪೇನೂ ಇಲ್ಲ ಎಂದರು. ದೇಶದಲ್ಲಿ ಹಿಂದಿ ಮಾತನಾಡುವವರ ಪ್ರಮಾಣ ಹೆಚ್ಚಿರುವುದರಿಂದ ಎಲ್ಲರೂ ಹಿಂದಿ ಕಲಿಯಬೇಕು ಎಂದು ಅಮಿತ್‌ ಶಾ ಹೇಳಿದ್ದಾರೆ. ಹಿಂದಿ ಕಲಿಯಬೇಕೆಂದು ಹೇಳಿರುವುದನ್ನು ಏಕೆ ವಿರೋ ಧಿಸಲಾಗುತ್ತಿದೆ ಎಂಬುದು ಅರ್ಥ ವಾಗುತ್ತಿಲ್ಲ. ಮೆಟ್ರೋದಲ್ಲಿ ಆಂಗ್ಲ ಫಲಕಗಳಿದ್ದರೆ ನಡೆಯುತ್ತದೆ, ಹಿಂದಿ ಫಲಕಗಳು ಬೇಡ ಎಂಬುದು ಯಾವ ನ್ಯಾಯ? ಹಿಂದಿ ಹೇರಿಕೆ ಎಂಬ ಪ್ರಶ್ನೆಯೇ ಇಲ್ಲ. ಇದನ್ನು ಅನಗತ್ಯವಾಗಿ ವಿವಾದ ಮಾಡಲಾಗುತ್ತಿದೆ ಎಂದರು.

Advertisement

ಒಂದು ದೇಶ-ಒಂದು ಭಾಷೆ ಚರ್ಚೆಯಾಗಲಿ
ಹುಬ್ಬಳ್ಳಿ: “ಒಂದು ದೇಶ ಒಂದು ಭಾಷೆ’ ಸರ್ಕಾರದ ನಿರ್ಧಾರವಲ್ಲ. ಈ ಕುರಿತು ವಿಪಕ್ಷಗಳು ರಾಜಕೀಯ ಮಾಡುವುದನ್ನು ಬಿಟ್ಟು ರಚನಾತ್ಮಕ ಚರ್ಚೆಯಲ್ಲಿ ತೊಡಗಲಿ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯ ರೆಲ್ಲ ಒಂದಾಗಿ ಕೆಲಸ ಮಾಡುವ ದೂರದೃಷ್ಟಿ ಇಟ್ಟುಕೊಂಡು ಅಮಿತ್‌ ಶಾ ಅಭಿಪ್ರಾಯ ವ್ಯಕ್ತಪ ಡಿಸಿದ್ದಾರೆ. ಹಿಂದಿ ಭಾಷೆ ಹೇರಿಕೆ ಬಗ್ಗೆ ಹೇಳಿಲ್ಲ ಎಂದರು.

ನ್ನಡ ಭಾಷೆ ಯಾರಿಂದಲೂ ಅಳಿಸಲಾಗಲ್ಲ
ಬಾಗಲಕೋಟೆ: “ಏಕ ದೇಶ-ಏಕ ಭಾಷೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಕನ್ನಡ ಭಾಷೆಗೆ 2,500 ವರ್ಷಗಳ ಸುದೀರ್ಘ‌ ಇತಿಹಾಸವಿದೆ. ಯಾರೇ ಬಂದರೂ, ಕನ್ನಡ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ. ಈ ದೇಶವನ್ನು ಮುಸ್ಲಿಮರು, ಪೋರ್ಚ್‌ಗೀಸರು ಹಾಗೂ ಬ್ರಿಟಿಷರು ಆಳಿದ್ದಾರೆ. ಅವರಿಂದಲೇ ಕನ್ನಡ ಭಾಷೆಗೆ ಏನೂ ಮಾಡಲು ಆಗಿಲ್ಲ. ಯಾರೇ ಬಂದರೂ ಕನ್ನಡ ಭಾಷೆ ಅಳಿಸಲು ಸಾಧ್ಯವಿಲ್ಲ. ಕನ್ನಡ ಇದ್ದೇ ಇರುತ್ತದೆ. ಈ ಭೂಮಿ ಮೇಲೆ ಜನರು ಇರುವವರೆಗೂ ಕನ್ನಡ ಭಾಷೆ ಇರುತ್ತದೆ ಎಂದರು.

ಒಂದು ದೇಶ, ಒಂದು ಭಾಷೆ ಎನ್ನುವುದು ರಾಷ್ಟ್ರದ್ರೋಹ. 2,600 ಭಾಷೆಗಳಿರುವ ದೇಶದಲ್ಲಿ ಅಷ್ಟೇ ಪ್ರಮಾಣದ ಸಂಸ್ಕೃತಿ ರೂಪುಗೊಂಡಿವೆ. 2 ಸಾವಿರ ವರ್ಷಗಳಿಂದ ಬಳಸುತ್ತಿರುವ ಕನ್ನಡದ ಮಹತ್ವವನ್ನು ಮುಖ್ಯವಾಗಿ ಅರಿಯಬೇಕಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಶತಮಾನಗಳಿಂದ ನಮ್ಮ ಕನ್ನಡವನ್ನು ಕಟ್ಟಿಕೊಟ್ಟಿವೆ. ಆದರೆ, ಕನ್ನಡ ಮುದುಕರ ಭಾಷೆಯಾಗಿ ನಮ್ಮ ತಲೆಮಾರಿಗೆ ಮಾಯವಾಗುತ್ತಿದೆ.
-ಡಾ.ಓ.ಎಲ್‌. ನಾಗಭೂಷಣ್‌ಸ್ವಾಮಿ, ಹಿರಿಯ ವಿದ್ವಾಂಸ

ಈ ಹಿಂದೆ ನಾನು ಮತ್ತು ಎಸ್‌.ಎಲ್. ಭೈರಪ್ಪ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದಾಗ ಪ್ರಾದೇಶಿಕ ಭಾಷೆಗಳ ಉಳಿವಿಗೆ ಶ್ರಮಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರು. ಆದರೆ, ಈಗ ಮತ್ತೆ ಹಿಂದಿ ವಿಚಾರ ಚರ್ಚೆಗೆ ಬಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಎಲ್ಲ ಭಾಷೆಯ ಸಾಹಿತಿಗಳಿದ್ದಾರೆ. ಎಲ್ಲ ಪ್ರಾದೇಶಿಕ ಭಾಷೆಗಳೂ ಉಳಿಯಬೇಕು. ಈ ಬಗ್ಗೆ ಅಕಾಡೆಮಿಯ ಸಭೆ ಕರೆದು 22 ಭಾಷೆಗಳ ಸದಸ್ಯರ ಜತೆ ಚರ್ಚಿಸಿದ ನಂತರ ನಮ್ಮ ನಿಲುವು ತಿಳಿಸುತ್ತೇವೆ.
-ಚಂದ್ರಶೇಖರ ಕಂಬಾರ, ಜ್ಞಾನಪೀಠ ಪುರಸ್ಕೃತ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next