Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಹನ್ನೆರಡು ಅಕಾಡೆಮಿಗಳಿಗೆ 2017-18ನೇ ಸಾಲಿನಲ್ಲಿ ಹನ್ನೆರಡು ಕೋಟಿ ರೂ. ಒದಗಿಸಲಾಗಿತ್ತು. 2018-19ನೇ ಸಾಲಿನಲ್ಲಿ ಅದನ್ನು ಎಂಟು ಕೋಟಿ ರೂ.ಗಳಿಗೆ ಇಳಿಸಲಾಗಿದೆ. ಇದರಿಂದ ಎಲ್ಲ ಅಕಾಡೆಮಿಗಳ ಅನುದಾನದಲ್ಲೂ ಕಡಿಮೆಯಾಗಲಿದ್ದು ಪ್ರಶಸ್ತಿ ವಿತರಣೆ, ಕಾರ್ಯಕ್ರಮ ಆಯೋಜನೆ, ಪುಸ್ತಕ ಪ್ರಕಟನೆ, ಸಿಬಂದಿ ವೇತನ-ಭತ್ತೆಗೆ ಹಣ ಸಾಕಾಗದಂತಾಗಿದೆ.
ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಲಲಿತಕಲಾ ಅಕಾಡೆಮಿ, ಕನ್ನಡ ಸಾಹಿತ್ಯ ಅಕಾಡೆಮಿ ಸಹಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಹನ್ನೆರಡು ಅಕಾಡೆಮಿಗಳು ಪ್ರತಿ ವರ್ಷ ಹೊಸ ಕಾರ್ಯಸೂಚಿ ಸಿದ್ಧಪಡಿಸುತ್ತವೆ. ಆದರೆ ಈ ಬಾರಿ ಅನುದಾನ ಇನ್ನೂ ಅಕಾಡೆಮಿಗಳ ಕೈ ಸೇರಿಲ್ಲ. ಹೀಗಾಗಿ ಯಾವ ಕಾರ್ಯಕ್ರಮಕ್ಕೆ ಎಷ್ಟು ಹಣ ಮೀಸಲಿಡಬೇಕು ಎಂಬ ಬಗ್ಗೆ ಗೊಂದಲ ನಿರ್ಮಾಣವಾಗಿದೆ.
Related Articles
ಅನುದಾನ ಹೆಚ್ಚಳಕ್ಕೆ ಆಗ್ರಹಿಸಿ ಈಗಾಗಲೇ ಕೆಲವು ಬಾರಿ ಮನವಿ ಮಾಡಲಾಗಿದೆ. ಇಲಾಖೆಯ ಅಧಿಕಾರಿಗಳು ಆಗಾಗ್ಗೆ ಬದಲಾಗಿ ಬರುತ್ತಾರೆ ಹೊರತು ಸಾಂಸ್ಕೃತಿಕ ಲೋಕದ ಸಮಸ್ಯೆಗಳು ಬಗೆ ಹರಿಯುತ್ತಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಅಕಾಡೆಮಿ ಅಧ್ಯಕ್ಷರೊಬ್ಬರು ದೂರಿದ್ದಾರೆ.
ಸರಕಾರ ನೀಡುವ ಅನುದಾನದಲ್ಲೇ ಸಂಶೋಧನಾ ಫೆಲೋಶಿಪ್, ಸಾಧಕರಿಗೆ ಪ್ರಶಸ್ತಿ, ಪ್ರತಿಭಾ ಪುರಸ್ಕಾರ, ಜೀವಮಾನ ಸಾಧನಾ ಪ್ರಶಸ್ತಿ, ನೀಡುವುದರ ಜತಗೆ ಶಿಬಿರಗಳು, ರಂಗತರಬೇತಿಗಳನ್ನು ಕೂಡ ನಡೆಸಬೇಕಾಗುತ್ತದೆ. ಜೀವಮಾನ ಸಾಧನೆ ಪ್ರಶಸ್ತಿಗೆ 50 ಸಾವಿರ ರೂ. ನಗದು ಇದ್ದರೆ, ಗೌರವ ಪ್ರಶಸ್ತಿಗಳು 25 ಸಾವಿರ ರೂ.ಗಳಾಗಿರುತ್ತದೆ. ಹೀಗಾಗಿ ಯಾವುದಕ್ಕೆ ಎಷ್ಟು ಹಣ ಮೀಸಲಿಡಬೇಕು ಎಂಬುವುದರ ಬಗ್ಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
Advertisement
ಅನುದಾನ ಬಿಡುಗಡೆಯಲ್ಲಿ ಇಲಾಖೆಯ ಪಾತ್ರ ಏನೂ ಇರುವುದಿಲ್ಲ. ಸರಕಾರ ಅಕಾಡೆಮಿಗಳಿಗೆ ಎಷ್ಟು ಹಣ ನೀಡುತ್ತದೆಯೋ ಅಷ್ಟನ್ನು ವಿನಿಯೋಗ ಮಾಡಲಾಗುವುದು.– ಕೆ.ಎಂ. ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಈಗಾಗಲೇ ಸಮಸ್ಯೆಯನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ.
– ಅರವಿಂದ ಮಾಲಗತ್ತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ
- ದೇವೇಶ ಸೂರಗುಪ್ಪ