Advertisement
ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಕನ್ನಡ ಬಳಗ, ಯು.ಕೆ ಎನ್ನುವ ಚಾರಿಟಬಲ್ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ಯುನೈಟೆಡ್ ಕಿಂಗ್ಡಮ್ ನಲ್ಲಿ ನೆಲಸಿರುವ ಸಹಸ್ರಾರು ಕನ್ನಡಿಗರಿಗೆ ಎರಡನೆಯ ಮನೆಯಂತೆ ಕೆಲಸ ಮಾಡುತ್ತಿದೆ ಎನ್ನುವುದು ಇಲ್ಲಿನ ಹಲವು ಕನ್ನಡಿಗರ ಅಭಿಪ್ರಾಯವಾಗಿದೆ.1983 ನೇ ಇಸವಿಯಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಸಂಘ ವಿದೇಶೀ ನೆಲದಲ್ಲಿ ಕನ್ನಡ ತೇರನ್ನು ಎಳೆಯುವ ಕೆಲಸದಲ್ಲಿ ಅವಿರತ ತೊಡಗಿಕೊಂಡಿದೆ. ದೂರ ದೇಶವೊಂದರಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಕನ್ನಡ ನಾಡಿನ ಮೌಲ್ಯಗಳನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬೆರಳೆಣಿಕೆಯ ಉತ್ಸಾಹಿ ಕನ್ನಡಿಗರಿಂದ ಶುರುವಾದ ಕನ್ನಡ ಬಳಗದಲ್ಲಿ ಇಂದು ಸುಮಾರು 2500 ಮಂದಿ (800 ಕುಟುಂಬಗಳು) ಸಂಸ್ಥೆಯ ಸದಸ್ಯತ್ವ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
Related Articles
Advertisement
ಇದುವರೆಗೆ ನಡಸಿರುವ ಚಟುವಟಿಕೆಗಳು
ಕರ್ನಾಟಕದ ಹೊರಗೆ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ (1988, ಆ27 – 29)
ಕನ್ನಡ ಬಳಗ , ಯು.ಕೆ ಸಂಸ್ಥೆಯು ಮ್ಯಾಂಚೆಸ್ಟೆರ್ ನಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಿದ ಹೆಗ್ಗಳಿಕೆಯನ್ನು ಹೊಂದಿದೆ. ಅಮೆರಿಕ, ಯೂರೋಪ್ , ಇಸ್ರೇಲ್, ಆಸ್ಟ್ರೇಲಿಯ,ನ್ಯೂಜಿಲ್ಯಾಂಡ್,ಭಾರತ ಮತ್ತು ಬ್ರಿಟನ್ ನ ಅನಿವಾಸಿ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಬಹು ಉತ್ಸಾಹದಿಂದ ಭಾಗವಹಿಸಿದ್ದರು.
ಕರ್ನಾಟಕದ ಆಗಿನ ಜನಪ್ರಿಯ ಮುಖ್ಯ ಮಂತ್ರಿಗಳಾದ ಎಸ್ .ಆರ್. ಬೊಮ್ಮಾಯಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.ಶ್ರೀ ಎಂ. ಪಿ. ಪ್ರಕಾಶ್ , ಶ್ರೀ ಜೆ. ಎಚ್.ಪಟೇಲ್, ಪ್ರಸಿದ್ದ ಸಾಹಿತಿಗಳಾದ ಡಾ.ಶಿವರಾಮ ಕಾರಂತರು, ಪ್ರಸಿದ್ಧ ಆಟಗಾರ ಜಿ. ಆರ್. ವಿಶ್ವನಾಥ್, ನಟ ಶಂಕರ್ ನಾಗ್ , ಗೀತಾ, ಶ್ರೀನಾಥ್ , ಶ್ರೀನಿವಾಸ ಪ್ರಭು ಮತ್ತವರ ನಾಟಕ ತಂಡ, ಹಾಡುಗಾರರಾದ ಸಿ. ಅಶ್ವತ್ಥ್ ಇನ್ನಿತರ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಸ್ರಾರು ಅನಿವಾಸಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದರು.
ಕನ್ನಡ ಬಳಗದ ರಜತ ಮಹೋತ್ಸವ(2008, ಆ.22-25)
ಕನ್ನಡ ಬಳಗ ಸಂಸ್ಥೆಯು ತನ್ನ ರಜತ ಮಹೋತ್ಸವ ಸಮಾರಂಭವನ್ನು ಇಂಗ್ಲೆಂಡಿನ ಚೆರ್ಶೈ ನಗರದ ಆಲ್ವಸ್ಟನ್ ಹಾಲ್ ನಲ್ಲಿ ಸಂಭ್ರಮದಿಂದ ಆಚರಿಸಲಾಗಿತ್ತು.ಕರ್ನಾಟಕದ ಅಂದಿನ ಸಚಿವರಾಗಿದ್ದ ಜನಾರ್ದನ ರೆಡ್ಡಿ,ಮುರುಗೇಶ್ ನಿರಾಣಿ, ಪ್ರಸಿದ್ಧ ಕವಿಗಳಾದ ನಿಸಾರ್ ಅಹಮ್ಮದ್, ಸಾಹಿತಿ ಜಯಂತ ಕಾಯ್ಕಿಣಿ, ನಿರ್ದೇಶಕ ಕೆ. ಎಸ್. ಎಲ್. ಸ್ವಾಮಿ, ವಾಗ್ಮಿ ಕೃಷ್ಣೇಗೌಡ, ಸಂಗೀತಕಾರರಾದ ಶಂಕರ್ ಶ್ಯಾನುಭೋಗ್, ಸಂಗೀತಾ ಕಟ್ಟಿ ಇತ್ಯಾದಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮೂರನೇ ದಶಮಾನೋತ್ಸವ ಸಮಾರಂಭ (2013, ಮೇ 25-26)
ಇಂಗ್ಲೆಂಡಿನ ಸ್ಟೋಕ್ ಆನ್ ಟ್ರೆಂಟ್ ನಗರದ ಕಿಂಗ್ಸ್ ಹಾಲ್ ನಲ್ಲಿ ಕನ್ನಡ ಬಳಗದ ಮೂರನೇ ದಶಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಕನ್ನಡ ನಾಡಿನ ಹಲವು ಪ್ರಸಿದ್ಧ ಸಾಹಿತಿಗಳು, ಹಾಡುಗಾರರು ಮತ್ತು ವಾಗ್ಮಿಗಳನ್ನು ಕರೆಸಲಾಗಿತ್ತು.
ಪ್ರತಿ ವರ್ಷದ ಯುಗಾದಿ ಮತ್ತು ದೀಪಾವಳಿ ಸಮಾರಂಭಗಳು
ಬಹಳ ವರ್ಷಗಳಿಂದ ಕನ್ನಡ ಬಳಗದ ವರ್ಷಕ್ಕೆರಡು ಸಮಾರಂಭಗಳನ್ನು ನಡೆಸಿಕೊಂಡು ಬಂದಿದೆ. ಪ್ರತಿ ಯುಗಾದಿ ಮತ್ತು ದೀಪಾವಳಿ ಸಮಾರಂಭಗಳಲ್ಲಿ ಕರ್ನಾಟಕದ ಅನೇಕ ಪ್ರತಿಭಾವಂತ ಗಣ್ಯರು ಭಾಗವಹಿಸುತ್ತ ಬಂದಿದ್ದಾರೆ.
ಈ ಸಮಾರಂಭಗಳಲ್ಲಿ ಪ್ರಸಿದ್ದ ಸಾಹಿತಿಗಳಾದ ಶ್ರೀಯುತ ಎಸ್. ಎಲ್.ಭೈರಪ್ಪ, ಎಚ್. ಎಸ್. ವೆಂಕಟೇಶ ಮೂರ್ತಿ, ಶ್ರೀಯುತ ಬಿ. ಆರ್. ಲಕ್ಷಣರಾವ್, ಡುಂಡಿರಾಜ್, ಹಾಸ್ಯ ವಾಗ್ಮಿ ಪ್ರಾಣೇಶ್, ಸುಧಾ ಬರಗೂರು, ನಟರಾದ ರಮೇಶ್ ಅರವಿಂದ್ , ಸುದೀಪ್, ಯಶ್, ಗಣೇಶ್, ಸೃಜನ್ ಲೋಕೇಶ್, ಖ್ಯಾತ ರಂಗ ಮತ್ತು ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಾಗಾಭರಣ, ಶಿಕ್ಷಣತಜ್ಞ ಗುರುರಾಜ ಕರ್ಜಗಿ, ಅಮೆರಿಕ ಅನಿವಾಸಿ ಸಾಹಿತಿ ಮೈ.ಶ್ರೀ ನಟರಾಜ, ಪ್ರಸಿದ್ಧ ಗಾಯಕಿ ಮಂಜುಳ ಗುರುರಾಜ್ , ಅಜಯ್ ವಾರಿಯರ್, ಬಿ. ಆರ್. ಛಾಯಾ, ಎಂ. ಡಿ. ಪಲ್ಲವಿ ನೃತ್ಯಗಾರರಾದ ವಸುಂಧರಾ ದೊರೆಸ್ವಾಮಿ, ಬಾನ್ಸುರಿ ದಿಗ್ಗಜ ಪ್ರವೀಣ್ ಗೋಡ್ಕಿಂಡಿ ಸೇರಿ ಹಲವಾರುದಿಗ್ಗಜರು ಕರ್ನಾಟಕದಿಂದ ತೆರಳಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಕೋವಿಡ್ ವರ್ಷಗಳಲ್ಲಿ ಕೂಡ ಬಹಳಷ್ಟು ಆನ್ಲೈನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೋ. ಎಂ.ಜಿ. ಈಶ್ವರಪ್ಪ ನವರು ಮಹಾ ಚೇತನ ಅಕ್ಕಮಹಾದೇವಿಯವರ ಬಗ್ಗೆ ಮಾತಾಡಿದರೆ, ಬೀಚಿ ಹಾಸ್ಯರಸಾಯನ ನಾಟಕವನ್ನು ಡ್ರಾಮಾಟ್ರಿಕ್ಸ್ ತಂಡ ನಡೆಸಿಕೊತ್ತಿತ್ತು. ಯೋಗ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡಬಳಗ ತನ್ನ ಸದಸ್ಯರನ್ನು ಹೀಗೆ ನಲವತ್ತು ವರ್ಷಗಳಿಂದಲೂ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದೆ.