Advertisement

ಆಡಳಿತದಲ್ಲಿ ಕನ್ನಡ ಅನುಷ್ಠಾನ ಕಡ್ಡಾಯ

10:40 AM Jul 24, 2019 | Suhan S |

ಬಾಗಲಕೋಟೆ: ಆಡಳಿತಕ್ಕೆ ಸಂಬಂಧಿಸಿದಂತೆ ಪತ್ರ ವ್ಯವಹಾರ, ಕಡತಗಳ ನಿರ್ವಹಣೆ, ಸುತ್ತೋಲೆ, ಆದೇಶ, ಸೂಚನಾ ಪತ್ರಗಳು, ಅಧಿಕೃತ ಜ್ಞಾಪನ, ಅಧಿಸೂಚನೆ ನಡವಳಿಕೆಗಳೆಲ್ಲವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕು ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಸೂಚಿಸಿದರು.

Advertisement

ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ನಾಡ-ನುಡಿ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಕನ್ನಡಪರ ಚಿಂತನೆ ಬೆಳೆಸಬೇಕು. ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತಂತ್ರಾಂಶ ಅಳವಡಿಕೆ, ಅಂತರ್ಜಾಲ ತಾಣ, ಸಾಮಾಜಿಕ ಜಾಲತಾಣ, ಯೋಜನೆಗಳ ಪ್ರಚಾರ, ಜಾಹೀರಾತು ಇತ್ಯಾದಿಗಳು ಕಚೇರಿ ವ್ಯವಹಾರದಲ್ಲಿ ಕಡ್ಡಾಯವಾಗಿ ಕನ್ನಡ ಯುನಿಕೋಡ್‌ ತಂತ್ರಾಂಶವನ್ನೇ ಬಳಸಬೇಕು ತಿಳಿಸಿದರು.

ಎಲ್ಲ ಕಾಗದಗಳ ತಲೆಬರಹಗಳು, ವಿಸಿಟಿಂಗ್‌ ಕಾರ್ಡ್‌ಗಳು, ಮೊಹರುಗಳು, ಲೆಕ್ಕಪತ್ರಗಳು ಮತ್ತು ಎಲ್ಲ ವಹಿಗಳು, ಇ-ಟೆಂಡರ್‌, ದರಪಟ್ಟಿಗಳೆಲ್ಲವೂ ಸಹ ಕನ್ನಡದಲ್ಲಿ ಇರಬೇಕು. ಅಲ್ಲದೇ ಇಲಾಖೆಗಳ ಅಂತರ್ಜಾಲ ತಾಣದ ಪ್ರಧಾನ ಪುಟ ಹಾಗೂ ಒಳಪುಟಗಳ ಮಾಹಿತಿಗಳು ಕನ್ನಡದಲ್ಲಿಯೇ ಇರತಕ್ಕದ್ದು. ಈ ಕುರಿತು ಎನ್‌ಐಸಿ ಅಧಿಕಾರಿ ಗಿರಿಯಾಚಾರ ಅವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿ, ಮುಂಗ್ಗಟ್ಟುಗಳು, ವಾಣಿಜ್ಯ ಸಂಕಿರ್ಣಗಳ ನಾಮಫಲಕಗಳಲ್ಲಿ ಕನ್ನಡ ಪ್ರಧಾನವಾಗಿ ಶೇ.60 ರಷ್ಟು ಭಾಗ ಕನ್ನಡ ಬಳಸುವಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಅಲ್ಲದೇ ಮಾಸಿಕ ಕೆಡಿಪಿ ಸಭೆಗಳಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಹಾಂತೇಶ ಹಟ್ಟಿ ಮಾತನಾಡಿ, ಸಕ್ಕರೆ, ಸಿಮೆಂಟ್ ಫ್ಯಾಕ್ಟರಿಗಳಲ್ಲಿ ಹೊರ ರಾಜ್ಯದವರೆ ಹೆಚ್ಚಾಗಿದ್ದಾರೆ. ಸ್ಥಳೀಯರಿಗೆ ಅವಕಾಶ ಕಲ್ಪಿಸಲು ಕ್ರಮವಾಗಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲ ಕೈಗಾರಿಕೆಗಳಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಹಾಂತೇಶ ಹಟ್ಟಿ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಗರಿಮಾ ಪೋವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಎಸ್‌.ಬಿ. ಕಳ್ಳಿ, ಎಚ್.ಬಿ. ಚೌಧರಿ, ಪವಿತ್ರಾ ಜಕ್ಕನ್ನವರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next