ಬೆಂಗಳೂರು: ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಕನ್ನಡಿಗರು ದೊಡ್ಡ ಸಾಧನೆಗಳನ್ನು ಮಾಡಿದ್ದು, ಅದನ್ನು ಗುರುತಿಸುವ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಗುರುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ, ದೂರದ ಯಾವುದೇ ದೇಶದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ನಾವು ಕನ್ನಡಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ಮಾಡಬೇಕಿದೆ.ಕನ್ನಡದ ಬಗ್ಗೆ ಸ್ವಾಭಿಮಾನ ಇದ್ದಾಗ ಈ ಬಾಷೆಗೆ ಧಕ್ಕೆ ಬರುವುದಿಲ್ಲ ಎಂದರು.
ಸೂರ್ಯಚಂದ್ರರಿರುವವರೆಗೂ ಕನ್ನಡಕ್ಕೆ ಆತಂಕವಿಲ್ಲ
ಇಡೀ ಸೃಷ್ಟಿಯನ್ನು ಎತ್ತಿ ಹಿಡಿದು ತನ್ನ ಆತ್ಮಚೈತನ್ಯ ಕೊಟ್ಟು ಕಾಪಾಡುತ್ತಾಳೆ. ಯಾರ ಕಾಲದಲ್ಲಿ ಏನು ಆಗಬೇಕೊ ಅದು ಆಗುತ್ತದೆ. ಭುವನೇಶ್ವರಿ ಪುತ್ತಳಿ ಮಹೇಶ ಜೊಶಿ ಯವರ ಕಡೆಯಿಂದ ಆಗಿದೆ. ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು.ಕನ್ನಡ ದೇವರ ಲಿಪಿ ಅಂತ ಕರೆಯಲಾಗುತ್ತದೆ. ಕನ್ನಡ ಭಾಷೆ ಶ್ರೀಮಂತವಾಗಲು ಕಾರಣವೆಂದರೆ ಅದು ಬದುಕಿಗೆ ಬಹಳ ಹತ್ತಿರವಾಗಿದೆ. ಭಾವನೆಗಳಿಂದ ತುಂಬಿರುವ ಭಾಷೆಯಾಗಿದೆ. ಕನ್ನಡಕ್ಕೆ ಯಾವತ್ತೂ ಆಪತ್ತು ಬಂದಿಲ್ಲ. ಎಲ್ಲಿಯವರೆಗೂ ಸೂರ್ಯಚಂದ್ರರು ಇರುತ್ತಾರೊ ಅಲ್ಲಿಯವರೆಗೆ ಕನ್ನಡಕ್ಕೆ ಯಾವುದೇ ಆತಂಕ ಇಲ್ಲ ಎಂದರು.
ಕರ್ನಾಟಕ ಏಕೀಕರಣ
ಕನ್ನಡದ ಬಗ್ಗೆ ಜಾಗೃತಿ ಮೂಡಿಸಿ ಏಕೀಕರಣದ ಹೊರಾಟ ಮಾಡದಿದ್ದರೆ ನಾವು ಒಂದಾಗುತ್ತಿರಲಿಲ್ಲ. ಅಂದಾನಪ್ಪ ದೊಡ್ಡ ಮೇಟಿ, ಅದರಗುಂಚಿ ಶಂಕರಗೌಡರು ಉಪವಾಸ ಕುಳಿತುಕೊಳ್ಳದಿದ್ದರೆ ಇಂದು ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ ಎಂದರು.
Related Articles
ನ್ಯಾ. ಶಿವರಾಜ್ ಪಾಟೀಲರು ರಾಜಸ್ತಾನ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸಮಾಡಿದ್ದಾರೆ. ಅವರನ್ನು ರಾಜಸ್ತಾನದ ಜನರು ನೆನೆಸಿಕೊಳ್ಳುತ್ತಾರೆ. ಅನೇಕ ಕನ್ನಡಿಗರ ಸೇವೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದರು.
ಕನ್ನಡದಲ್ಲಿಯೂ ವಿಜ್ಞಾನ ಬೆಳೆದಿದೆ
ದೇಶದ ಗಡಿ ಮೀರಿ ವಿಜ್ಞಾನ ತಂತ್ರಜ್ಞಾನ ಬೆಳೆದಿದೆ. ಅಷ್ಟೆ ಅಲ್ಲ ನಮ್ಮ ಕನ್ನಡದಲ್ಲಿಯೂ ವಿಜ್ಞಾನ ತಂತ್ರಜ್ಞಾನ ಬೆಳೆದಿದೆ. ಅದಕ್ಕೆ ಶಕ್ತಿ ನೀಡುವ ಕೆಲಸ ಮಾಡಬೇಕು. ಸಾಹಿತ್ಯ, ಸಂಸ್ಕೃತಿ ಮತ್ತು ಸಂಗೀತದಿಂದ ಭಾಷೆ ಬೆಳೆಯುತ್ತದೆ. ನಮ್ಮ ಸಂಸ್ಕೃತಿ ಬಹಳ ಶ್ರೇಷ್ಣವಾಗಿದೆ ಎಂದರು.
ಕನ್ನಡ ವಿಶ್ವದಲ್ಲಿಯೇ ಗೌರವಯುತವಾಗಿ ಕಾಣುವ ಭಾಷೆಯಾಗಲಿದೆ
ನಾಗರಿಕತೆ ಬೆಳೆದಂತೆ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು. ನಾಗರಿಕತೆ ಎಂದರೆ ಎತ್ತಿನ ಗಾಡಿಯಿಂದ ಕಾರು, ಬಸ್ಸು ಹೀಗೆ ನಾಗರಿಕತೆ ಬೆಳೆದಿದೆ. ಮೊದಲು ಬೀಸಿಕಲ್ಲಿನಲ್ಲಿ ಬೀಸುತ್ತಿದ್ದರು. ಆಗ ಹಾಡುಗಳನ್ನು ಹಾಡುತ್ತಿದ್ದರು ಅದು ಸಂಸ್ಕೃತಿ, ಈಗ ಮಿಕ್ಸಿ ಬಂದಿದೆ. ನಾಗರಿಕತೆಯ ಜೊತೆಗೆ ಸಂಸ್ಕೃತಿಯೂ ಬೆಳೆಯಬೇಕು. ಸಂಗೀತ ತಾಯಿ ಭುವನೇಶ್ವರಿ ಆಶೀರ್ವಾದಿಂದ ನಾಡಿನ ಸಾಂಸ್ಕೃತಿಕ ಸಂಪತ್ತು ಬೆಳೆದಿದೆ. ಕನ್ನಡ ವಿಶ್ವದಲ್ಲಿಯೇ ಗೌರವಯುತವಾಗಿ ಕಾಣುವ ಭಾಷೆಯಾಗಲಿದೆ ಎಂದರು. ಸಾಹಿತ್ಯ ಪರಿಷತ್ತು ಅತ್ಯಂತ ಅಚ್ಚು ಕಟ್ಟಾಗಿ ಸುವ್ಯವಸ್ಥೆಯಿಂದ ಸಾಹಿತ್ಯ ಸಮ್ಮೇಳನ ಮಾಡುತ್ತಿವೆ ಎಂದರು.
ಕನ್ನಡಕ್ಕೆ ಪ್ರಾಶಸ್ತ್ಯ ನೀಡುವ ವಿಧೇಯಕ
ಬೆಳಗಾವಿ ಅಧಿವೇಶನದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡುವ ವಿಧೇಯಕ ಮಂಡನೆ ಮಾಡಲಾಗುವುದು. ಈ ಬಗ್ಗೆ ಚರ್ಚೆ ಮಾಡಿ ಅನುಮೋದನೆ ಮಾಡುತ್ತೇವೆ. ಅದು ಎಲ್ಲ ರೀತಿಯಲ್ಲಿ ಕಾರ್ಯಗತ ಮಾಡುವ ಕೆಲಸ ಮಾಡುತ್ತೇವೆ. ಸರ್ಕಾರ ಸಂಘ ಸಂಸ್ಥೆಗಳ ಮನದಾಳದ ಮಾತುಗಳು ಅದರಲ್ಲಿ ಬರುವಂತೆ ನೋಡಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ, ಮಣಿಪಾಲ್ ಮಿಡಿಯಾ ಸಂಸ್ಥೆಯ ಸಂಧ್ಯಾ ಪೈ, ಫರ್ನಿನಾಂಡ್ ಕಿಟೆಲ್ ವಂಶಸ್ಥರಾದ ಅಲ್ಮೊಂಡ್ ಕಿಟೆಲ್ ಮತ್ತಿತರರು ಹಾಜರಿದ್ದರು.