80-90ರ ದಶಕದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಕೆ.ವಿ.ರಾಜು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಕೆ.ವಿ.ರಾಜು ಕೊನೆಯುಸಿರೆಳೆದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ ಹಾಗೂ ಪುತ್ರಿಯನ್ನ ಕೆ.ವಿ.ರಾಜು ಅಗಲಿದ್ದಾರೆ.
ಈ ವರ್ಷ ಪ್ರತಿಭಾವಂತ ನಟ ಸಂಚಾರಿ ವಿಜಯ್, ಕೋಟಿ ನಿರ್ಮಾಪಕ ರಾಮು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಅದ್ಭುತ ಸಿನಿ ರತ್ನಗಳನ್ನು ಕನ್ನಡ ಸಿನಿಮಾ ರಂಗ ಕಳೆದುಕೊಂಡಿದೆ. ಇದೀಗ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಕೆ.ವಿ.ರಾಜು ವಿಧಿವಶರಾಗಿದ್ದಾರೆ.
ಹುಲಿಯಾ, ಬೆಳ್ಳಿ ಕಾಲುಂಗುರ, ನವಭಾರತ, ಇಂದ್ರಜಿತ್, ಪೋಲಿಸ್ ಲಾಕಪ್, ಬೊಂಬಾಟ್ ಹುಡುಗ, ಅಭಿಜಿತ್, ಬೆಳ್ಳಿ ಮೋಡಗಳು, ಯುದ್ಧಕಾಂಡ, ರಾಷ್ಟ್ರಗೀತೆ, ಸುಂದರಕಾಂಡ ಮುಂತಾದ ಹಲವು ಕನ್ನಡ ಸಿನಿಮಾಗಳನ್ನು ಕೆ.ವಿ.ರಾಜು ನಿರ್ದೇಶನ ಮಾಡಿದ್ದರು. ಕನ್ನಡ ಮಾತ್ರವಲ್ಲದೆ ಬಾಲಿವುಡ್‌ನಲ್ಲಿಯೂ ಕೆ.ವಿ.ರಾಜು ತಮ್ಮ ಛಾಪನ್ನು ಮೂಡಿಸಿದ್ದರು. ಹಿಂದಿಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ‘ಇಂದ್ರಜಿತ್’ ಚಿತ್ರಕ್ಕೆ ಕೆ.ವಿ.ರಾಜು ಆಕ್ಷನ್ ಕಟ್ ಹೇಳಿದ್ದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಕೆ.ವಿ.ರಾಜು ಬಳಲುತ್ತಿದ್ದರು. ರಾಜಾಜಿನಗರದ ತಮ್ಮ ನಿವಾಸದಲ್ಲೇ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕೆ.ವಿ.ರಾಜು ನಿಧನರಾಗಿದ್ದಾರೆ.
ರಾಜಾಜಿನಗರದ ನಿವಾಸದಲ್ಲೇ ಕೆ.ವಿ.ರಾಜು ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹರಿಶ್ಚಂದ್ರ ಘಾಟ್‌ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.