ಎಂ.ಡಿ.ಶ್ರೀಧರ್ ನಿರ್ದೇಶನದ “ಜಂಬೂ ಸರ್ಕಸ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆ ಮಾಡಿದೆ ತಂಡ. ಮನಸೂತೆ ಮನಸಾರೆ… ಎಂಬ ಹಾಡನ್ನು ಬಿಡುಗಡೆ ಮಾಡಲಾಯಿತು.
ಕವಿರಾಜ್ ಅವರ ಗೀತ ಸಾಹಿತ್ಯದಲ್ಲಿ ನಕುಲ ಅಭಯಂಕರ ಹಾಡಿರುವ ಈ ಹಾಡನ್ನು ವಾಸುಕಿ ವೈಭವ ಸಂಯೋಜನೆ ಮಾಡಿದ್ದಾರೆ. “ಜಂಬೂ ಸರ್ಕಸ್’ ಚಿತ್ರಕ್ಕೆ ಕಥಾ ಹಂದರ ಮೊದಲು ಬಂದಿದ್ದು ಹಾಸ್ಯ ನಟ ಸುಂದರ್ ವೀಣಾ ಅವರಿಂದ. ಅಲ್ಲಿಂದ ನಾವೆಲ್ಲ ಕುಳಿತು ಅದನ್ನು ಮನರಂಜನೆ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಹಾಗೆ ಚಿತ್ರಕಥೆ ಸಿದ್ಧ ಮಾಡಿದೆವು ಎಂದು ಕಾರ್ಯಕಾರಿ ನಿರ್ಮಾಪಕಿ ಸುಪ್ರೀತ ಶೆಟ್ಟಿ ಹೇಳಿಕೊಂಡರು.
ಈ ಚಿತ್ರಕ್ಕೆ ಎಂ.ಡಿ.ಶ್ರೀಧರ್ ಅಂತಹ ನಿರ್ದೇಶಕರು ಇದ್ದ ಮೇಲೆ ಸಿನಿಮಾಕ್ಕೆ ಒಂದು ದೊಡ್ಡ ತೂಕ ಬಂದಿತು ಎಂದು ಅವರು ಮೆಚ್ಚುಗೆ ತಿಳಿಸಿದರು. ನಿರ್ಮಾಪಕ ಎಚ್.ಸಿ. ಸುರೇಶ್ ಈ ಜಂಬೂ ಸರ್ಕಸ್ ಸಿನಿಮಾವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ವಾಸುಕಿ ವೈಭವ ಅವರ ಸುಶ್ರಾವ್ಯದ ಸಂಗೀತವನ್ನು ಮೆಚ್ಚುಗೆ ಸೂಚಿಸಿದ ನಿರ್ದೇಶಕ ಶ್ರೀಧರ್ ಜಂಬೂ ಸರ್ಕಸ್ ಸಿನಿಮಾವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ನಾಯಕ ಪ್ರವೀಣ ತೇಜ್ ಮಾತನಾಡುತ್ತಾ “ನಾನು ಇಂದು ಚಿತ್ರ ರಂಗದಲ್ಲಿ ಇರೋದಕ್ಕೆ ನಿರ್ದೇಶಕ ಎಂ.ಡಿ.ಶ್ರೀಧರ್ ಕಾರಣ. ಅವರ ನಿರ್ದೇಶನದ ಸಿನಿಮಾ ಎಂದು ನಿರ್ಮಾಪಕ ಸುರೇಶ್ ಹೇಳಿದಾಗ ನಾನು ಖುಷಿಯಾದೆ. ಅದಕ್ಕೆ ತಕ್ಕಂತೆ ಅವರು ನನಗೆ ವಿಭಿನ್ನವಾದ ಪಾತ್ರ ನಿರ್ವಹಣೆ ಸಹ ನೀಡಿ ಸಂತೋಷ ಇನ್ನೂ ಹೆಚ್ಚು ಮಾಡಿದ್ದಾರೆ’ ಎಂದರು.
ನಾಯಕಿ ಅಂಜಲಿ ಎಸ್ ಅನೀಶ್ ಕೂಡಾ ಪಾತ್ರದ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಕೃಷ್ಣ ಕುಮಾರ್ ಸೇರಿದಂತೆ ತಂಡ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು. ಎ.ಹರ್ಷ ಮೂರು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಡಾ ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಸಾಹಿತ್ಯ ಚಿತ್ರಕ್ಕಿದೆ.